ಪೊಲೀಸರ ಕರ್ತವ್ಯಕ್ಕೆ ಅಡ್ಡಿ; ಯುವಕನ ವಿರುದ್ಧ ಪ್ರಕರಣ

Update: 2020-03-26 15:12 GMT

ಕುಂದಾಪುರ, ಮಾ.26: ನಗರದ ಶಾಸ್ತ್ರಿ ಸರ್ಕಲ್ ಬಳಿ ಕೊರೋನ ವೈರಸ್ ಹರಡದಂತೆ ಜನರನ್ನು ತಡೆಯುವ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ, ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಯುವಕನೊಬ್ಬನ ವಿರುದ್ಧ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಉಪ್ಪಿನಕುದ್ರು ಗ್ರಾಮದ ಪಡುಕೇರಿಯ ವಿಶ್ವನಾಥ (23), ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ತರುಣ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪಾರಿಜಾತ ವೃತ್ತದ ಕಡೆಯಿಂದ ಶಾಸ್ತ್ರಿ ವೃತ್ತದ ಕಡೆಗೆ ಮೋಟಾರು ಸೈಕಲ್‌ನಲ್ಲಿ ಬಂದ ವಿಶ್ವನಾಥನನ್ನು ವಿಚಾರಿಸಿದ ಪೊಲೀಸರಿಗೆ ಉಡಾಫೆಯಿಂದ ಉತ್ತರಿಸಿದ್ದು, ಸುರಕ್ಷತಾ ಕ್ರಮವಾಗಿ ಮಾಸ್ಕ್ ಅಥವಾ ಕರವಸ್ತ್ರ ಕಟ್ಟಿಕೊಳ್ಳಲು ನಿರಾಕರಿಸಿದನೆನ್ನಲಾಗಿದೆ.

ಕೊರೋನ ವೈರಸ್ ಸುರಕ್ಷತಾ ಕ್ರಮದ ಕುರಿತು ಆತನಿಗೆ ಮನವರಿಕೆ ಮಾಡಲು ಪ್ರಯತ್ನಿಸಿದಾಗ, ನನಗೆ ರಜೆ ನೀಡಿದ್ದಾರೆ ಎಲ್ಲಿ ಬೇಕಾದರೂ ತಿರುಗುತ್ತೇನೆ, ನನ್ನನ್ನು ಕೇಳಲು ನೀವು ಯಾರು ಎಂದು ಉಡಾಫೆಯಿಂದ ಉತ್ತರಿಸಿ, ಪೊಲೀಸರನ್ನು ತಳ್ಳಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರವಾಗಿದೆ.

ಕೊರೋನ ವೈರಸ್‌ನಂಥ ಅಪಾಯಕಾರಿ ಸಾಂಕ್ರಾಮಿಕ ರೋಗದ ಸೋಕನ್ನು ಹರಡುವ ಸಂಭವವಿದ್ದು, ಯಾವುದೇ ಸುರಕ್ಷತಾ ಕ್ರಮ ವಹಿಸದೇ ನಿರ್ಲಕ್ಷ ವಹಿಸಿದ್ದು, ಪೊಲೀಸ್ ಸಿಬ್ಬಂದಿಗಳ ಮೇಲೆ ಬಲಪ್ರಯೋಗ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಕುಂದಾಪುರ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News