ಕೊರೋನ ವೈರಸ್‌ಗೆ ತಡೆ: ಮನಪಾ ವ್ಯಾಪ್ತಿಯಲ್ಲಿ 20 ಟಾಸ್ಕ್‌ಫೋರ್ಸ್ ತಂಡಗಳ ರಚನೆ

Update: 2020-03-26 15:16 GMT

ಮಂಗಳೂರು, ಮಾ. 26: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತದ ಸಹಕಾರದೊಂದಿಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 20 ಟಾಸ್ಕ್‌ಫೋರ್ಸ್ ತಂಡಗಳನ್ನು ರಚಿಸಲಾಗಿದೆ.

ಪಾಲಿಕೆಯ ಮೂವರು ಕಾರ್ಯಪಾಲಕ ಅಭಿಯಂತರರ ಮೇಲುಸ್ತುವಾರಿಯಲ್ಲಿ ಪರಿಸರ ಮತ್ತು ಇತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ದಲ್ಲಿ ಪ್ರತಿಯೊಂದು ತಂಡಕ್ಕೆ ತಲಾ ಇಬ್ಬರು ಸಿಬ್ಬಂದಿಯನ್ನು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಟಾಸ್ಕ್‌ಫೋರ್ಸ್ ತಂಡವನ್ನು ರಚಿಸಲಾಗಿದೆ.

ಈ ತಂಡವು ವಿದೇಶದಿಂದ ಆಗಮಿಸಿದ ಕ್ವಾರಂಟೈನ್‌ಗೆ ಒಳಪಟ್ಟ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅಥವಾ ಜಿಲ್ಲಾಡಳಿತ ನೀಡಿರುವ ಮಾಹಿತಿಯನ್ನು ಆಧರಿಸಿ ತಕ್ಷಣ ಸ್ಥಳಕ್ಕೆ ತಲುಪಿ ವಿಚಾರಣೆ ನಡೆಸಿ ಅಂತಹ ವ್ಯಕ್ತಿಗಳು ಕ್ವಾರಂಟೈನ್‌ನಲ್ಲಿ ಇರುವಂತೆ ಮನವರಿಕೆ ಮಾಡುವ ಜವಾಬ್ದಾರಿ ಈ ತಂಡಕ್ಕೆ ನೀಡಲಾಗಿದೆ. ಅಲ್ಲದೆ ಅಂತಹ ವ್ಯಕ್ತಿಗಳ ಮತ್ತು ಕುಟುಂಬದ ಸದಸ್ಯರ ಅರೋಗ್ಯದ ಮೇಲೆ ದಿನನಿತ್ಯ ನಿಗಾವಹಿಸಲಾಗುತ್ತದೆ. ಜೊತೆಗೆ ಸಾರ್ವಜನಿಕರು ಎಚ್ಚರಗೊಳ್ಳುವ ಸಲುವಾಗಿ ‘ಈ ಮನೆ ನಿಗಾದಲ್ಲಿದೆ, ಯಾರೂ ಪ್ರವೇಶಿಸಬಾರದು’ ಎಂಬ ಪೋಸ್ಟರನ್ನು ಮನೆಯ ಆವರಣದಲ್ಲಿ ಅಂಟಿಸಲಾಗುತ್ತದೆ.

ದಿನಸಿ ಅಂಗಡಿಗಳು ಮಧ್ಯಾಹ್ನ 12ರ ಬಳಿಕವೂ ಕಾರ್ಯಾಚರಿಸಿದರೆ ಬಂದ್ ಮಾಡಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಿದೆ. ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ದಿನನಿತ್ಯದ ಅತ್ಯಾವಶ್ಯಕ ಆಹಾರ ಸಾಮಗ್ರಿಗಲನ್ನು ಗ್ರಾಸರಿ/ಸೂಪರ್ ಮಾರ್ಕೆಟ್‌ ಗಳಿಂದ ನೇರವಾಗಿ ಮನೆ ಮನೆಗೆ ವಿತರಣೆ ಮಾಡುವ ಸಲುವಾಗಿ ದಿನಸಿ ಅಂಗಡಿಯ ವಲಯವಾರು ಪಟ್ಟಿ ಮಾಡಿ ಸದ್ರಿ ಮಳಿಗೆಗಳ ಮೂಲಕ ಸಾರ್ವಜನಿಕರಿಗೆ ಆಹಾರ ಸಾಮಗ್ರಿ ಪೂರೈಕೆ ಮಾಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಮನಪಾ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯ ಎಲ್ಲಾ ವಿದ್ಯಾರ್ಥಿ ನಿಲಯಗಳ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಟಾಸ್ಕ್‌ಫೋರ್ಸ್ ತಂಡಕ್ಕೆ ಸೂಚನೆ ನೀಡಲಾಗಿದೆ. ಸೆಂಟ್ರಲ್ ಮಾರ್ಕೆಟ್ ರಖಂ ವ್ಯಾಪಾರಿಗಳೊಂದಿಗೂ ಚರ್ಚೆ ಮಾಡಲಾಗಿದ್ದು, ಬೆಳಗ್ಗೆ 8 ಗಂಟೆಯೊಳಗೆ ಚಿಲ್ಲರೆ ವ್ಯಾಪಾರಿಗಳಿಗೆ ಆಹಾರ ಸಾಮಗ್ರಿ ವಿತರಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News