ಗುರುಪುರ : ಅಂಗಡಿಗಳಲ್ಲಿ ಅಂತರ ಕಾಪಾಡಲು ವ್ಯವಸ್ಥೆ

Update: 2020-03-26 15:50 GMT

ಗುರುಪುರ, ಮಾ.26: ಕೊರೋನ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಸರಕಾರಿ ಆದೇಶದನ್ವಯ ಗುರುಪುರ ಗ್ರಾಪಂನಲ್ಲಿ ಕಟ್ಟುನಿಟ್ಟಾದ ಕ್ರಮ ಜಾರಿಗೊಳಿಸಲಾಗಿದ್ದು, ಪಂಚಾಯತ್‌ಗೆ ಆಗಮಿಸುವ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸೋಪು ವಾಟರ್‌ನಿಂದ ಕೈತೊಳೆದು ಕಚೇರಿಯಲ್ಲಿ ವ್ಯವಹರಿಸಲು ವ್ಯವಸ್ಥೆ ಮಾಡಲಾಗಿದೆ.

ಗುರುಪುರ ಪೇಟೆಯಲ್ಲಿ ಕಳೆದ ರಾತ್ರಿ ಮೂರ್ನಾಲ್ಕು ದಿನಸಿ ಅಂಗಡಿಗಳ ಎದುರು ಗ್ರಾಹಕರ ಮಧ್ಯೆ ಅಂತರ ಕಾಪಾಡಿಕೊಳ್ಳುವುದಕ್ಕಾಗಿ ಒಂದೊಂದು ಮೀಟರ್ ಅಂತರದಲ್ಲಿ ಸುಣ್ಣ ಬಳಿದು ವೃತ್ತ ಹಾಗೂ ಚೌಕ ಮಾಡಲಾಗಿದೆ. ಅಲ್ಲದೆ ಮಾಸ್ಕ್ ಧರಿಸಿ ವ್ಯವಹರಿಸುವಂತೆ ಅಂಗಡಿ ಮಾಲಕರು ಗ್ರಾಹಕರಿಗೆ ಸೂಚಿಸಿದ್ದಾರೆ.

ಪೇಟೆಯಲ್ಲಿ ಬೆಳಗ್ಗಿನ ಹೊತ್ತು ಗ್ರಾಹಕರು ಹಾಲು, ಮೊಟ್ಟೆ, ದಿನಸಿ, ಬೇಕರಿ ಮತ್ತಿತರ ಸೊತ್ತುಗಳಿಗೆ ಖರೀದಿಗೆ ಮುಗಿ ಬಿದ್ದಿರುವ ದೃಶ್ಯಗಳು ಕಂಡು ಬಂದವು. ಸರಕು ಸಾಗಾಟ ಸ್ಥಗಿತಗೊಂಡಿರುವುದರಿಂದ ಕೆಲವು ಅಂಗಡಿಗಳಲ್ಲಿ ದಿನಸಿ ಸೊತ್ತುಗಳ ಕೊರತೆಯಾಗಿದೆ. ಪರಿಣಾಮ ನಾಗರಿಕರು ಕಂಗಾಲಾಗಿದ್ದಾರೆ.

ಗುರುಪುರದ ಏತಮೊಗರುವಿನಲ್ಲಿ ಕೈಗೆಟಕುವ ಬೆಲೆಯಲ್ಲಿ ತರಕಾರಿ

ಗುರುಪುರ ಬೈಲು ಏತಮೊಗರುವಿನಲ್ಲಿ ಸುಮಾರು 20-30 ಎಕ್ರೆ ಜಾಗದಲ್ಲಿ ಬೆಳೆಯಲಾದ ತರಕಾರಿ ಕರೋನ ಸಂಕಷ್ಟದಿಂದ ನಷ್ಟದ ಹಾದಿ ಹಿಡಿದಿದ್ದು, ಈಗ ಇಲ್ಲಿ ಎಲ್ಲೆಡೆಯ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ತರಕಾರಿ ಮಾರಾಟ ಮಾಡಲಾಗುತ್ತಿದೆ. ಸದ್ಯ ಮೆಣಸು, ಸೌತೆಕಾಯಿ, ಬದನೆ ಹಾಗೂ ಸೋರೆಕಾಯಿ ಲಭ್ಯವಿದೆ.

ಇಲ್ಲಿಂದ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಗೆ ದಿನಂಪ್ರತಿ ತರಕಾರಿ ಸಾಗಾಟವಾಗುತ್ತಿತ್ತು. ವಾಹನ ಸ್ಥಗಿತಗೊಂಡಿರುವುದರಿಂದ ಮಾರುಕಟ್ಟೆಗೆ ತರಕಾರಿ ಸಾಗಾಟ ಕಷ್ಟವಾಗಿದೆ. ತರಕಾರಿ ಅಗತ್ಯವಿದ್ದವರು ನಮ್ಮಲ್ಲಿಗೆ ಬಂದು ತಾಜಾ ತರಕಾರಿ ಖರೀದಿಸಬಹುದು’ ಎಂದು ತರಕಾರಿ ಮಾಲಕ ಜಾಬೇದ್ ಅಲಿ (ಮೊ.ಸಂ: 9986776450/9775153037) ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News