ದಿನ ಬಳಕೆಯ ಸಾಮಗ್ರಿಗಳ ಅಂಗಡಿಗಳಿಗೆ ಹೆಚ್ಚಿನ ಸಮಯ ನಿಗದಿ ಪಡಿಸಿ: ಮುನೀರ್ ಕಾಟಿಪಳ್ಳ

Update: 2020-03-26 16:07 GMT

ಮಂಗಳೂರು, ಮಾ.26: ಜನ ಖರೀದಿಗಾಗಿ ಗುಂಪು ಸೇರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಸಿ, ತರಕಾರಿ ಅಂಗಡಿಗಳನ್ನು ಪೂರ್ಣವಾಗಿ ಮುಚ್ಚುವ, ಮನೆ ಮನೆಗೆ ದಿನಸಿ ಸಾಮಗ್ರಿಗಳನ್ನು ತಲುಪಿಸುವ ಸಂಸದರ ಹೇಳಿಕೆ ಪ್ರಾಯೋಗಿಕ ಅಲ್ಲ. ಅದು ಸಮಸ್ಯೆಯನ್ನು ಮತ್ತಷ್ಟು ಹೆಚ್ವಿಸಲಿದೆ. ಜನತೆ ಅಗತ್ಯ ವಸ್ತುಗಳು ಅಲಭ್ಯ ಆಗಬಹುದು ಎಂಬ ಸಹಜ ಭಯದಿಂದ ಖರೀದಿಗಾಗಿ ಮುಗಿ ಬೀಳುತ್ತಿದ್ದಾರೆ. ಸಾಮಾಜಿಕ ಪ್ರಜ್ಞೆಯೂ ಒಂದಿಷ್ಟು ಕಡಿಮೆ ಇರುವುದು ಕನಿಷ್ಟ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಿನ್ನಡೆ ಆಗುತ್ತಿದೆ. ಅದಕ್ಕೆ ಅಂಗಡಿಗಳನ್ನು ಸಂಪೂರ್ಣ ಮುಚ್ವುವುದು ಪರಿಹಾರ ಅಲ್ಲ. ಮನೆ ಮನೆಗೆ ಸರ್ಕಾರವೇ ತಲುಪಿಸುವುದು ಸಧ್ಯದ ಸಂದರ್ಭದಲ್ಲಿ  ಅಸಾಧ್ಯ ಆಗಬಹುದು.  ಅದಕ್ಕಾಗಿ ದಿನಸಿ, ತರಕಾರಿ ಅಂಗಡಿಗಳನ್ನು ಹೆಚ್ಚು ಸಮಯ ತೆರೆದಿಡುವುದು ಸೂಕ್ತ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ  ಮುನೀರ್ ಕಾಟಿಪಳ್ಳ  ಸಂಸದರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಸಾಧ್ಯವಾದರೆ ತಡರಾತ್ರಿಯ ವರಗೆ ತೆರೆದಿಟ್ಟು ಗುಂಪು ಸೇರುವುದನ್ನು ತಪ್ಪಿಸಬಹುದು. ಜೊತೆಗೆ ಖರೀದಿಗೆ ಬರುವವರು ಕನಿಷ್ಟ ಒಂದು ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಕ್ಯೂ ನಿಲ್ಲಿಸಲೂ ಸಾಧ್ಯವಾಗಬಹುದು. ಅದಕ್ಕಾಗಿ ಪೊಲೀಸರ ಸಹಿತ ಸ್ವಯಂ ಸೇವಕರನ್ನು ಅಂಗಡಿಗಳ ಮುಂದೆ ನೇಮಿಸಿದರೆ ಆಹಾರ ವಸ್ತುಗಳಿಗಾಗಿ ಉಂಟಾಗುವ ನೂಕು ನುಗ್ಗಲು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಲ್ಲಿ ಆಗುವ ವೈಫಲ್ಯವನ್ನು ತಪ್ಪಿಸಬಹುದು. ಜಿಲ್ಲಾಡಳಿತ ಈ ಕುರಿತು ಚಿಂತಿಸಲಿ ಎಂದರು.

ಲಾಕ್ ಡೌನ್ ನಿಂದ ಅನಿವಾರ್ಯ ರಜೆಯಲ್ಲಿರುವ ಡಿವೈಎಫ್ ಐ ಕಾರ್ಯಕರ್ತರು ವಿವಿಧ ತುರ್ತು ಸೇವೆಯಲ್ಲಿ ತಮ್ಮ ಪ್ರದೇಶದ ಜನರ ನಡುವೆ ತೊಡಗಿಸಿಕೊಂಡಿದ್ದಾರೆ. ರೋಗಿಗಳನ್ನು  ಆಸ್ಪತ್ರೆಗೆ ಸೇರಿಸುವುದು, ಔಷಧಿಗಳನ್ನು ತಲುಪಿಸುವುದು ಬಹಳ ಮುಖ್ಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕುರಿತು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಅಗತ್ಯ ವಸ್ತುಗಳ ಅಂಗಡಿ ಮುಂದೆ ಅಂತರ ಕಾಪಾಡಿಕೊಂಡು ಸಾಲಾಗಿ ನಿಲ್ಲಿಸುವ ಅಭ್ಯಾಸ ಮಾಡಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಅನಗತ್ಯ ತಿರುಗಾಟ, ಸಮಯ ಕಳೆಯಲು ಗೆಳೆಯರ ಕೂಟ ಬೇಡ, ಆಗಾಗ ಸೋಪು ಹಚ್ಚಿ ಕೈ ತೊಳೆದುಕೊಳ್ಳುವ ಬಗ್ಗೆ ಜಾಗ್ರತಿ ಮೂಡಿಸುತ್ತಿರುವುದಾಗಿ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News