ಮಗುವಿಗೆ ಕೊರೋನ ಸೋಂಕು ತಗುಲಿದ ವದಂತಿ: ಸಜಿಪನಡು ಗ್ರಾಮದಲ್ಲಿ ಆತಂಕದ ವಾತಾವರಣ

Update: 2020-03-26 17:07 GMT

ಬಂಟ್ವಾಳ, ಮಾ. 26: ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಸುಳೆಗೆ ಕೊರೋನ ಸೋಂಕು ತಗಲಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದರಿಂದ ಹಾಗೂ ಪೊಲೀಸರು ಧ್ವನಿವರ್ಧಕದ ಮೂಲಕ ಗ್ರಾಮದಲ್ಲಿ ಎಚ್ಚರಿಕೆ ಸಂದೇಶ ನೀಡಿದ್ದರಿಂದ ಸಜಿಪನಡು ಗ್ರಾಮದಲ್ಲಿ ಗುರುವಾರ ಸಂಜೆ ಆತಂಕದ ವಾತಾರಣ ಸೃಷ್ಟಿಯಾಯಿತು.  

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಜಿಪನಡು ಗ್ರಾಮದ 10 ತಿಂಗಳ ಹಸುಳೆಯನ್ನು ಮಾ.23ರಂದು ರಾತ್ರಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರನೆ ದಿನ ಮಗುವಿನ ಗಂಟಲ ದ್ರವವನ್ನು ಕೋವಿಡ್ - 19 ಪರೀಕ್ಷೆಗೆಂದು ಕಳುಹಿಸಲಾಗಿತ್ತು. ಇಂದು ಅದರ ವರದಿ ಬಂದಿದ್ದು ವರದಿಯಲ್ಲಿ ಕೊರೋನ ದೃಢಪಟ್ಟಿದೆ ಎಂದು ವದಂತಿಗಳು ಹಬ್ಬಿ ಗ್ರಾಮದಲ್ಲಿ ಗೊಂದಲ ಮತ್ತು ಆತಂಕಕ್ಕೆ ಕಾರಣವಾಯಿತು. ಈ ಮಧ್ಯೆ ಸಜಿಪನಡು ಗ್ರಾಮದಲ್ಲಿ ಪೊಲೀಸರು ಯಾರೂ ಮನೆಯಿಂದ ಹೊರಗೆ ಬಾರದಂತೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಿದರು. ಅಲ್ಲದೆ ಗ್ರಾಮದೊಳಗೆ ಯಾವುದೇ ವಾಹನಗಳು ಬಾರದಂತೆ ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನು ಇಡಲಾಗಿತ್ತು. ಇದು ಜನರಲ್ಲಿ ಆತಂಕವನ್ನು ಇಮ್ಮಡಿಗೊಳಿಸಿತ್ತು. 

ರಾತ್ರಿ ಜಿಲ್ಲಾಧಿಕಾರಿಯವರು ಈ ದಿನದ ಕೊರೋನ ಪರೀಕ್ಷಾ ವರದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು ಜಿಲ್ಲೆಯಲ್ಲಿ ಯಾವುದೇ ಕೊರೋನ ಸೋಂಕು ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಮಗುವಿನ ಸಂಬಂಧಿಕರೊಬ್ಬರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಮಗುವಿಗೆ ಕೊರೋನ ಸೋಂಕು ತಗುಲಿತ್ತು. ಆದರೆ ಈಗ ಗುಣವಾಗಿದೆ ಎಂದು ವೈದ್ಯರು ತಿಳಿಸಿದ್ದು, ಅಲ್ಲದೆ ಮಗುವಿನ ತಾಯಿ ಹಾಗೂ ಅಜ್ಜಿಯನ್ನು ಆಸ್ಪತ್ರೆಯಲ್ಲೇ ಉಳಿಯುವಂತೆ ವೈದ್ಯರು ಹೇಳಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದರು. ಇದನ್ನು ಆರೋಗ್ಯಾಧಿಕಾರಿಗಳು ನಿರಾಕರಿಸಿ, ಮಗುವಿನ ಗಂಟಲ ದ್ರವದ ಅಧಿಕೃತ ವರದಿ ಇನ್ನಷ್ಟೇ ಬರಬೇಕು ಎಂದು ಹೇಳಿದ್ದಾರೆ. 

ಸೋಂಕು ತಗಲಿತ್ತು, ಈಗ ಗುಣವಾಗಿದೆ: ಮಗುವಿನ ಸಂಬಂಧಿ

ತೀವ್ರ ಉಸಿರಾಟದ ತೊಂದರೆ ಇದ್ದ ಹಿನ್ನೆಲೆಯಲ್ಲಿ ಮಗುವನ್ನು ಮಾ.23ರಂದು ರಾತ್ರಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದೆವು. ಬಳಿಕ ಮಗುವನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಮಾರನೆ ದಿನ ಬೆಳಗ್ಗೆ ಕೋವಿಡ್ - 19 ಪರೀಕ್ಷೆಗೆ ಮಗುವಿನ ಗಂಟಲ ದ್ರವವನ್ನು ಕಳುಹಿಸಲು ವೈದ್ಯರು ಅನುಮತಿ ಕೇಳಿದಕ್ಕೆ ನಾವು ಅವಕಾಶ ನೀಡಿದ್ದೆವು. ಬಳಿಕ ಮಗು ಸಂಪೂರ್ಣ ಗುಣಮುಖವಾಗಿತ್ತು. ಆದರೆ ಇಂದು ಸಂಜೆ 6 ಗಂಟೆಗೆ ಪರೀಕ್ಷೆಯ ವರದಿ ಬಂದಿದ್ದು ಅದರಲ್ಲಿ ಈಗ ನೆಗೆಟಿವ್ ಇದೆ. ಆದರೆ ಮಗುವಿಗೆ ಕೊರೋನ ಇತ್ತು ಈಗ ಗುಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಆರೋಗ್ಯ ಅಧಿಕಾರಿಗಳು, ಪೊಲೀಸರು, ಹಾಸನ ಲ್ಯಾಬ್‍ನ ಜನರು ಕರೆ ಮಾಡಿ, ನೀವು ಎಲ್ಲಿಗೆ ಹೋಗಿದ್ದೀರಿ ಎಂದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನಾವು ಅದಕ್ಕೆ ಉತ್ತರ ನೀಡಿದ್ದೇವೆ. ಮಗುವಿನ ತಾಯಿ ಮತ್ತು ಅಜ್ಜಿಯನ್ನು ಆಸ್ಪತ್ರೆಯಲ್ಲಿ ಉಳಿಯುವಂತೆ ವೈದ್ಯರು ತಿಳಿಸಿದ್ದಾರೆ. ಪರೀಕ್ಷೆಯ ವರದಿ ತೋರಿಸುವಂತೆ ವೈದ್ಯರಲ್ಲಿ ಹೇಳಿದಾಗ ಆರೋಗ್ಯ ಇಲಾಖೆಯ ಅನುಮತಿ ಪಡೆದು ನಾಳೆ ತೋರಿಸುತ್ತೇವೆ ಎಂದು ಹೇಳಿದ್ದಾರೆ. ಮೂರು ತಿಂಗಳ ಹಿಂದೆ ಮಗು ಬೆಂಗಳೂರಿನಲ್ಲಿತ್ತು. ಮಗುವಿನ ತಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಮಗು ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದು ಊರಿಗೆ ಬಂದಿದ್ದಾರೆ ಎಂದು ಮಗುವಿನ ಕುಟುಂಬದ ಒಬ್ಬರು ಮಾಹಿತಿ ನೀಡಿದ್ದಾರೆ.

ಮಗುವಿನ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಅಧಿಕೃತ ವರದಿ ಇನ್ನೂ ಬಂದಿಲ್ಲ. ವರದಿಗಾಗಿ ನಾವು ಕಾಯುತ್ತಿದ್ದೇವೆ. ವರದಿ ಬಂದ ಬಳಿಕ ಜಿಲ್ಲಾಧಿಕಾರಿಯವರು ಆ ಬಗ್ಗೆ ಮಾಹಿತಿ ನೀಡಲಿದ್ದಾರೆ. 

ರಾಮಚಂದ್ರ ಬಯರಿ 
ದ.ಕ. ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ವೈದ್ಯಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News