ಕೊರೋನ: ಚೀನಾವನ್ನೇ ಹಿಂದಿಕ್ಕಿದ ಅಮೆರಿಕ

Update: 2020-03-27 04:09 GMT

ನ್ಯೂಯಾರ್ಕ್, ಮಾ.27: ಇಡೀ ವಿಶ್ವವನ್ನು ಕಂಗೆಡಿಸಿರುವ ಕೋವಿಡ್-19 ಸಾಂಕ್ರಾಮಿಕ ಅಮೆರಿಕವನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ. ಚೀನಾ ಹಾಗೂ ಇಟೆಲಿಗಿಂತಲೂ ಅಧಿಕ ಸಂಖ್ಯೆಯ ಕೊರೋನಾ ಸೋಂಕಿತರನ್ನು ಹೊಂದಿರುವ ಅಮೆರಿಕ, ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಸೋಂಕಿತರನ್ನು ಹೊಂದಿದ ದೇಶ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ವಿಶ್ವಾದ್ಯಂತ 5 ಲಕ್ಷಕ್ಕೂ ಅಧಿಕ ಮಂದಿ ಈ ವೈರಸ್ ಸೋಂಕಿಗೆ ಒಳಗಾಗಿದ್ದು, ಶ್ರೀಮಂತ ದೇಶಗಳ ಆರೋಗ್ಯ ಸೇವಾ ವ್ಯವಸ್ಥೆ ಕೂಡಾ ಕಂಗೆಟ್ಟಿದೆ. ಸರ್ಕಾರಗಳು ಘೋಷಿಸಿರುವ ಲಾಕ್‌ಡೌನ್‌ನಿಂದಾಗಿ ಕೋಟ್ಯಂತರ ಜನರ ಬದುಕು ಅಸ್ತವ್ಯಸ್ತವಾಗಿದೆ.

ಅಮೆರಿಕದಲ್ಲಿ 82 ಸಾವಿರ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಸಂಖ್ಯೆ ಅತ್ಯಧಿಕ ಸಾವು ಸಂಭವಿಸಿರುವ ಇಟೆಲಿಯ ಒಟ್ಟು ಸೋಂಕಿತರ ಸಂಖ್ಯೆಗಿಂತಲೂ ಅಧಿಕ. ಜತೆಗೆ ಅಮೆರಿಕ, ಕಳೆದ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡಿದ್ದ ಚೀನಾವನ್ನೂ ಮೀರಿಸಿದೆ.

ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತದ ಭೀತಿ ಆವರಿಸಿದ್ದು, ಇದರ ವಿರುದ್ಧ ಒಗ್ಗೂಡಿ ಹೋರಾಡಲು ಜಿ-20 ದೇಶಗಳ ಮುಖಂಡರು ವೀಡಿಯೊ ಕಾನ್ಫರೆನ್ಸ್ ಮೂಲಕ ಪಣ ತೊಟ್ಟಿದ್ದಾರೆ. ವೈರಸ್ ಯಾವುದೇ ಗಡಿಯನ್ನೂ ಗೌರವಿಸುವುದಿಲ್ಲ ಎಂದು ಈ ಮುಖಂಡರು ಜಂಟಿ ಹೇಳಿಕೆ ನೀಡಿದ್ದಾರೆ.

ನಿಗದಿತ ವಿತ್ತೀಯ ನೀತಿ ಮತ್ತು ಆರ್ಥಿಕ ಕ್ರಮಗಳ ಅಂಗವಾಗಿ 5 ಟ್ರಿಲಿಯನ್ ಡಾಲರ್ ಮೊತ್ತವನ್ನು ಜಾಗತಿಕ ಆರ್ಥಿಕತೆಗೆ ಪೂರಣ ಮಾಡಲಾಗುತ್ತಿದೆ. ಈ ಮೂಲಕ ಸಾಂಕ್ರಾಮಿಕದ ಸಾಮಾಜಿಕ, ಆರ್ಥಿಕ ಮತ್ತು ಹಣಕಾಸು ಪರಿಣಾಮಗಳ ವಿರುದ್ಧ ಹೋರಾಡಲಾಗುತ್ತಿದೆ. ಕೊರೋನಪೀಡಿತ ಅಭಿವೃದ್ಧಿಶೀಲ ದೇಶಗಳಿಗೆ ನೆರವಿನ ಭರವಸೆಯನ್ನೂ ಜಿ-20 ಮುಖಂಡರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News