ಧರ್ಮಸ್ಥಳ ಶ್ರೀ ಕ್ಷೇತ್ರದಲ್ಲಿ ನಂದಾದೀಪ ನಂದಿದ ವದಂತಿ: ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದೇನು?

Update: 2020-03-27 05:56 GMT

ಬೆಳ್ತಂಗಡಿ, ಮಾ.27: ಸಾಮಾಜಿಕ ಜಾಲತಾಣದಲ್ಲಿ ಮತ್ತು ಟಿವಿ ಮಾಧ್ಯಮಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ದೇವಳದಲ್ಲಿ ದೇವರ ನಂದಾದೀಪ ನಂದಿದೆ ಎಂಬ ಅಪಪ್ರಚಾರ ಮಾತುಗಳು ಹರಡುತ್ತಿವೆ. ಇಂತಹ ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿನಂತಿ ಮಾಡಿದ್ದಾರೆ.

ಶ್ರೀ ಮಂಜುನಾಥ ಸ್ವಾಮಿ ದೇವಳದಲ್ಲಿ ರಾತ್ರಿ 8 ಗಂಟೆಗೆ ಬಾಗಿಲು ಹಾಕಲಾಗುತ್ತದೆ. ಮರುದಿನ ಮುಂಜಾನೆ 5 ಗಂಟೆಗೆ ಬಾಗಿಲು ತೆಗೆಯಲಾಗುತ್ತದೆ. ಈ ನಡುವೆ ಯಾರೊಬ್ಬರಿಗೂ ದೇವಳ ಪ್ರವೇಶಿಸುವ ಅವಕಾಶ ಇರುವುದಿಲ್ಲ. ಈ ಅವಧಿಯಲ್ಲಿ ದೇವಳ ಪ್ರವೇಶಿಸಿರುವವರು ಯಾರು ಮತ್ತು ಅಲ್ಲಿ ನಂದಾದೀಪ ನಂದಿರುವುದನ್ನು ನೋಡಿರುವವರು ಯಾರು ಎಂದು ಪ್ರಶ್ನಿಸಿರುವ ಡಾ.ಹೆಗ್ಗಡೆ, ಇದು ದೇವಳದ ಭಕ್ತಾದಿಗಳ ಭಾವನೆ ಮತ್ತು ನಂಬಿಕೆಗಳೊಂದಿಗೆ ಕೆಲವು ಕಿಡಿಗೇಡಿಗಳು ಮಾಡಿರುವ ಸುಳ್ಳು ವದಂತಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಂತಹ ವದಂತಿಗಳಿಂದ ದೂರವಿದ್ದು, ಕೊರೋನ ಎಂಬ ಮಹಾಮಾರಿಯನ್ನು ದೂರ ಮಾಡುವ ಉದ್ದೇಶದಿಂದ ಎಲ್ಲರೂ ಮನೆಯ ಒಳಗಡೆಯೇ ಇದ್ದು ದೇವರಲ್ಲಿ ಪ್ರಾರ್ಥಿಸುವಂತೆ ಅವರು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News