ಲಾಕ್‌ಡೌನ್: ಮಂಗಳೂರಿನಲ್ಲಿ 3ನೇ ದಿನ ಉತ್ತಮ ಸ್ಪಂದನ
ಮಂಗಳೂರು, ಮಾ.27: ಲಾಕ್‌ಡೌನ್ ಮೂರನೇ ದಿನವಾಗಿರುವ ಮಂಗಳೂರು ನಗರದಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ. ನಗರದಲ್ಲಿ ಜನ ಸಂಚಾರ ವಿರಳವಾಗಿದೆ.
ಮಾರುಕಟ್ಟೆಯಲ್ಲಿ ಗೂಡ್ಸ್ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಅದೇರೀತಿ ಜನರು ಕೂಡಾ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅಡ್ಡಾಡುವಂತೆ ಸೂಚಿಸುವ ಭಿತ್ತಿಪತ್ರವನ್ನು ಅಳವಡಿಸಲಾಗಿದೆ. ನಗರದ ವಿವಿಧ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಅನಗತ್ಯ ವಾಹನ ಸಂಚಾರವನ್ನು ನಿಷೇಧಿಸುವ ಕುರಿತು ಬ್ಯಾನರ್ ಅಳವಡಿಸಲಾಗಿದೆ.
ಇನ್ನುಳಿದಂತೆ ನಗರದಲ್ಲಿ ಕೆಲವೊಂದು ಮೆಡಿಕಲ್ ಶಾಪ್‌ಗಳು ತೆರೆದಿದ್ದು, ಅಲ್ಲಿ ಜನರು ಸೇರಿದ್ದು, ನಿಗದಿತ ಅಂತರ ಕಾಯ್ದುಕೊಂಡು ವ್ಯವಹರಿಸುತ್ತಿರುವುದು ಕಂಡುಬರುತ್ತಿದೆ. ಬ್ಯಾಂಕ್‌ಗಳು ತೆರೆದಿದ್ದರೂ ವ್ಯವಹಾರ ಅಷ್ಟೇನೂ ಕಂಡುಬರುತ್ತಿಲ್ಲ. ಸರಕಾರಿ ಕಚೇರಿಗಳು ತೆರೆದಿವೆ. ಸಾರ್ವಜನಿಕ ಸೇವೆಯಿಲ್ಲದ ಕಾರಣ ಅಧಿಕಾರಿ, ಸಿಬ್ಬಂದಿ ವರ್ಗ ಕಡತ ಜೋಡಣೆಯಲ್ಲಿರುವುದು ಕಂಡುಬಂತು. ಸರಕಾರಿ ಕಚೇರಿಯಲ್ಲೂ ಸಿಬ್ಬಂದಿಯ ಕೊರತೆಯಿದೆ.
ಮಾರುಕಟ್ಟೆ ಹೊರತುಪಡಿಸಿ ಬೇರೆ ಎಲ್ಲೂ ಜನರಿಲ್ಲ. ಮಧ್ಯಾಹ್ನ 12 ಗಂಟೆಯಾಗುತ್ತಲೇ ಪೊಲೀಸರ ಸಹಕಾರದಿಂದ ಮನಪಾ ಟಾಸ್ಕ್‌ಫೋರ್ಸ್ ತಂಡ ಅಂಗಡಿ ಮುಚ್ಚಿಸಿವೆ, ಜನರನ್ನು ಚದುರಿಸುತ್ತಿವೆ.
ಮಸೀದಿಗಳ ಗೇಟ್‌ಗಳನ್ನು ಮುಚ್ಚಲಾಗಿದೆ. ಈ ನಡುವೆ ವಲಸೆ ಕಾರ್ಮಿಕರು ಅತಂತ್ರರಾಗಿದ್ದು, ನಗರದ ನೆಹರೂ ಮೈದಾನದ ಬಳಿ ರಸ್ತೆ ಬದಿಯಲ್ಲಿ ಸಾಲಾಗಿ ಕುಳಿತಿರುವ ದೃಶ್ಯಗಳು ಕಂಡುಬರುತ್ತಿದೆ.