ತಲಪಾಡಿ ಗಡಿಯಲ್ಲಿ ನಿರ್ಬಂಧ: ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಆ್ಯಂಬುಲೆನ್ಸ್ ನಲ್ಲೇ ಹೆತ್ತ ಮಹಿಳೆ
ಮಂಜೇಶ್ವರ, ಮಾ.27: ಕೊರೋನ ಸೋಂಕು ಹರಡುವ ಭೀತಿಯಿಂದ ದೇಶಾದ್ಯಂತ ಕೇಂದ್ರ ಸರಕಾರ ಲಾಕ್ದೌನ್ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಕೇರಳ -ಕರ್ನಾಟಕದ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಮಂಗಳೂರು ಕಡೆ ಆಸ್ಪತ್ರೆಗೆ ತೆರಳುವ ಆ್ಯಂಬ್ಯುಲೆನ್ಸ್ ಗಳಿಗೂ ನಿಷೇಧ ಹೇರಲಾಗಿದೆ. ಇದರಿಂದಾಗಿ ಮಹಿಳೆಯೋರ್ವರು ಆ್ಯಂಬುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಕುಂಜತ್ತೂರಿನಲ್ಲಿ ವಾಸವಿರುವ ಬಿಹಾರ ಪಾಟ್ನಾ ಮೂಲದ ಗುರಿಯಾ ದೇವಿ ಎಂಬ ಗರ್ಭಿಣಿಗೆ ಶುಕ್ರವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಆ್ಯಂಬುಲೆನ್ಸ್ ನಲ್ಲಿ ಹೆರಿಗೆಗಾಗಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲು ತಲಪಾಡಿ ತಲುಪಿದಾಗ ಅಲ್ಲಿದ್ದ ಪೊಲೀಸರು ತಡೆದರು. ಎಷ್ಟೇ ಮನವಿ ಮಾಡಿಕೊಂಡರು ಅವರು ಅವಕಾಶ ನೀಡಲಿಲ್ಲ. ಆ ಬಳಿಕ 35 ಕಿಲೋ ಮೀಟರ್ ದೂರದ ಕಾಸರಗೋಡು ಜನರಲ್ ಆಸ್ಪತ್ರೆ ಗೆ ದಾಖಲಿಸಲು ಕೊಂಡೊಯ್ಯುವಷ್ಟರಲ್ಲಿ ಮೊಗ್ರಾಲ್ ತಲುಪುತ್ತಿದ್ದಂತೆ ಗುರಿಯಾ ಹೆಣ್ಣು ಮಗುವಿಗೆ ಹೆರಿಗೆ ಆಗಿದೆ ಎಂದು ಅಂಬ್ಯುಲೆನ್ಸ್ ಚಾಲಕ ಅಸ್ಲಮ್ ಹೇಳಿದ್ದಾರೆ.
ಗಡಿ ಪ್ರದೇಶದ ಎಲ್ಲೆಡೆ ಮಣ್ಣು ರಾಶಿ ಹಾಕಿ ರಸ್ತೆ ಗಳನ್ನು ಸಂಪೂರ್ಣ ಮುಚ್ಚಲಾಗಿದ್ದು, ತಲಪಾಡಿ ಬಳಿ ಆ್ಯಂಬುಲೆನ್ಸ್ ಗಳನ್ನೂ ತಡೆಯಲಾಗುತ್ತಿದೆ. ಇದು ಡಯಾಲಿಸಿಸ್, ತುರ್ತು ಚಿಕಿತ್ಸೆ, ಹೆರಿಗೆ, ಕ್ಯಾನ್ಸರ್ ರೋಗಿಗಳು ಸೇರಿದಂತೆ ಹೆಚ್ಚಿನವರು ತುರ್ತು ಚಿಕಿತ್ಸೆಗಾಗಿ ಮಂಗಳೂರನ್ನೇ ಅವಲಂಬಿಸುವವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.