ಇಸ್ರೇಲ್ ನ ಯಹೂದಿ, ಮುಸ್ಲಿಂ ವೈದ್ಯಕೀಯ ಸಿಬ್ಬಂದಿಯ ಪ್ರಾರ್ಥನೆಯ ಫೋಟೋ ವೈರಲ್

Update: 2020-03-27 08:54 GMT
PHOTO: cnn.com

ಜೆರುಸಲೇಮ್, ಮಾ.27: ಅವರಿಗೆ ಕ್ಷಣ ಮಾತ್ರದ ವಿರಾಮವಿರಲಿಲ್ಲ. ಆಗಷ್ಟೇ ಉಸಿರಾಟದ ತೊಂದರೆಯಿದ್ದ 41 ವರ್ಷದ ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡಿ ಮರಳುತ್ತಿದ್ದರು. ಅದಕ್ಕೂ ಮೊದಲು 77 ವರ್ಷದ ವೃದ್ಧರೊಬ್ಬರಿಗೆ ಇವರ ನೆರವಿನ ಅಗತ್ಯವಿತ್ತು. ಇನ್ನೂ ಹಲವರು ನೆರವಿನ ನಿರೀಕ್ಷೆಯಲ್ಲಿ ಫೋನ್ ಮಾಡುವುದು ಖಚಿತವಿತ್ತು.

ಸಂಜೆ 6 ಗಂಟೆಯಾಗುವಾಗ ಇನ್ನು ನಮಗೆ ವಿರಾಮ ಸಿಗದು ಎಂಬುದು ಅವರಿಬ್ಬರಿಗೂ ಖಚಿತವಿತ್ತು. ಹಾಗಾಗಿ ಇಬ್ಬರೂ ಅಲ್ಲೇ ರಸ್ತೆ ಬದಿ ತಮ್ಮ ವಾಹನ ನಿಲ್ಲಿಸಿ ತಮ್ಮ ಪ್ರಾರ್ಥನೆ ಮುಗಿಸಿದರು. ಅವರು ಇಸ್ರೇಲ್ ನ ತುರ್ತು ಸೇವಾ ಘಟಕದ ಸಿಬ್ಬಂದಿಗಳು. ಒಬ್ಬರು ಜೆರುಸಲೇಮ್ ಗೆ ಮುಖ ಮಾಡಿ ತನ್ನ ಕಪ್ಪು ಬಿಳುಪು ಪ್ರಾರ್ಥನಾ ಶಾಲನ್ನು ಹಾಕಿಕೊಂಡು ಪ್ರಾರ್ಥನೆ ಮಾಡಿದರೆ ಇನ್ನೊಬ್ಬರು ಅದರ ವಿರುದ್ಧ ದಿಕ್ಕಿಗೆ ಮಕ್ಕಾದತ್ತ ಮುಖ ಮಾಡಿ ನಮಾಝ್ ನ ಮುಸಲ್ಲ ಅಲ್ಲೇ ರಸ್ತೆ ಮೇಲೆ ಹಾಕಿ ನಮಾಝ್ ಮುಗಿಸಿದರು. ಕೊರೋನ ಸಂಕಟದ ಸಂದರ್ಭದಲ್ಲಿ ಒಟ್ಟಿಗೆ ಹೋಗಿ ತುರ್ತು ಸೇವೆ ನೀಡುವ ಈ ಇಬ್ಬರಲ್ಲಿ ಒಬ್ಬರು ಅವರಾಹಂ  ಮಿಂಟ್ಜ್ , ಶ್ರದ್ಧಾವಂತ ಯಹೂದಿ. ಇನ್ನೊಬ್ಬರು ಝೋಹರ್ ಅಬೂ ಜಾಮಾ, ಅಷ್ಟೇ ಶ್ರದ್ಧಾವಂತ ಮುಸ್ಲಿಂ.

ಜಾಗತಿಕ ಮಹಾಮಾರಿ ಕೊರೋನ ಸೃಷ್ಟಿಸಿರುವ ಭೀತಿಯ ನಡುವೆ ಈ ಇಬ್ಬರ ಪ್ರಾರ್ಥನೆ ಎಲ್ಲರ ಗಮನ ಸೆಳೆದಿದ್ದರೆ ಇವರಿಬ್ಬರಿಗೆ ಮಾತ್ರ ಇದು ಹೊಸತಲ್ಲ. ಪ್ರತಿವಾರ ಕನಿಷ್ಠ ಎರಡು ದಿನ ಒಟ್ಟಿಗೆ ಕೆಲಸ ಮಾಡುವ ಇವರಿಬ್ಬರಿಗೂ ಇದು ರೂಢಿ.

Photo: cnn.com

ಈ ಇಬ್ಬರ ಫೋಟೋ ಈಗ ಜಾಗತಿಕ ವೈರಲ್ ಫೋಟೋಗಳ ಸಾಲಿಗೆ ಸೇರಿದೆ. ಧರ್ಮ, ಜನಾಂಗಗಳ ಹೆಸರಲ್ಲಿ ವಿಭಜಿಸುವವರಿಗೆ ಇವರಿಬ್ಬರು ಮಾದರಿ ಎಂದು ಜನರು ಭಾರೀ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಭಾರತದಲ್ಲೂ ಕೋಮು ಹಿಂಸೆಯ ಬೆನ್ನಿಗೆ ಅವರಲ್ಲಿ ನಾವು ಖರೀದಿಸಬಾರದು, ಅವರಲ್ಲಿಗೆ ನಾವು ಹೋಗಬಾರದು ಎಂದು ಹೇಳುತ್ತಿದ್ದವರೆಲ್ಲ ಈಗ ದಿನನಿತ್ಯದ ಅಗತ್ಯ ಸಾಮಾನುಗಳು ಎಲ್ಲಿ ಸಿಕ್ಕಿದರೂ ಸರತಿ ಸಾಲಲ್ಲಿ ನಿಂತು ತೆಗೆದುಕೊಳ್ಳುತ್ತಿರುವ ಚಿತ್ರಗಳು ಸಾಮಾನ್ಯವಾಗಿಬಿಟ್ಟಿವೆ.

"ನಾನು, ಝೋಹರ್ ಮತ್ತು ಇಡೀ ವಿಶ್ವ ಈಗ ತಲೆ ಮೇಲೆತ್ತಿ ಪ್ರಾರ್ಥಿಸಬೇಕು. ಅದೊಂದೇ ನಮಗುಳಿದ ದಾರಿ" ಎಂದು ಹೇಳುತ್ತಾರೆ ಒಂಬತ್ತು ಮಕ್ಕಳ ತಂದೆ ಅವರಾಹಂ ಮಿಂಟ್ಜ್. ಏಳು ಮಕ್ಕಳ ತಂದೆ ಅಬೂ ಜಾಮಾ ಡ್ರೈವಿಂಗ್ ಕಲಿಸುವ ತನ್ನ ಉದ್ಯೋಗ ಬಿಟ್ಟು ಸಾಧ್ಯವಾದಷ್ಟು ಸಹಾಯ ಮಾಡುವ ಉದ್ದೇಶದಿಂದ ಈ ಕೆಲಸಕ್ಕೆ ಬಂದಿದ್ದಾರೆ. ಅವರಿಗೂ ಮಿಂಟ್ಜ್ ಅವರೇ ಈ ವೈದ್ಯಕೀಯ ಸಿಬ್ಬಂದಿಯಾಗಿ ಕೆಲಸ ಮಾಡುವ  ತರಬೇತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News