×
Ad

ಬಂಟ್ವಾಳದ 10 ತಿಂಗಳ ಮಗುವಿಗೆ ಕೊರೋನ ಸೋಂಕು ದೃಢ

Update: 2020-03-27 15:01 IST
ಸಾಂದರ್ಭಿಕ ಚಿತ್ರ

ಬಂಟ್ವಾಳ, ಮಾ.27: ತಾಲೂಕಿನ ಸಜಿಪನಡು ಗ್ರಾಮದ ಹಸುಳೆಗೆ ಕೋವಿಡ್ -19 (ಕೊರೋನ) ಸೊಂಕು ತಗಲಿರುವುದು ದೃಡಪಟ್ಟಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಕಾರ್ಯಾಲಯದ ಪ್ರಕಟನೆ ತಿಳಿಸಿದೆ. 

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 10 ತಿಂಗಳ ಮಗುವನ್ನು ಮಾ.23ರಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರನೆ ದಿನ ಮಗುವಿನ ಗಂಟಲಿನ ದ್ರವವನ್ನು ಕೋವಿಡ್ - 19 ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ಅಂತಿಮ ವರದಿ ಬಂದಿದ್ದು ಮಗುವಿಗೆ ಕೊರೋನ ಸೊಂಕು ತಗಲಿರುವುದು ದೃಡಪಟ್ಟಿದೆ ಎಂದು ತಿಳಿಸಲಾಗಿದೆ. 

ಈ ಬಗ್ಗೆ ಮಗುವಿನ ಸಂಬಂಧಿಕರೊಬ್ಬರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ಪತ್ರಿಕೆಯ ವರದಿಗಾರರಿಗೆ, ಮಗುವಿಗೆ ಕೊರೋನ ಸೊಂಕು ತಗಲಿರುವುದು ದೃಡಪಟ್ಟಿದೆ ಎಂದು  ವೈದ್ಯರು ಇಂದು ತಿಳಿಸಿದ್ದಾರೆ. ಆದರೆ ಮಗು ಈಗ ಸಂಪೂರ್ಣ ಚೇತರಿಸಿಕೊಂಡಿದೆ. ತುರ್ತು ನಿಗಾ ಘಟಕ (ಐಸಿಯು)ದಿಂದ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಮಗುವಿನ ತಾಯಿ ಮತ್ತು ಅಜ್ಜಿಯನ್ನು ವೈದ್ಯರು ಆಸ್ಪತ್ರೆಯಲ್ಲೇ ಉಳಿಸಿಕೊಂಡಿದ್ದಾರೆ. ಅವರ ಭೇಟಿಗೆ ಯಾರಿಗೂ ಅವಕಾಶ ನೀಡುತ್ತಿಲ್ಲ. ಅಲ್ಲದೆ ಕುಟುಂಬದ ಇತರ ಸದಸ್ಯರನ್ನು ಮನೆಯಲ್ಲೇ ಇರುವಂತೆ ಪೊಲೀಸರು ಹಾಗೂ ವೈದ್ಯರು ತಿಳಿಸಿದ್ದಾರೆ ಎಂದು‌ ಹೇಳಿದ್ದಾರೆ. 

ಮಗು ಮತ್ತು ಮಗುವಿನ ತಾಯಿ ಈ ಒಂದು ತಿಂಗಳ ಅವಧಿಯಲ್ಲಿ ಬಂಟ್ವಾಳ ತಾಲೂಕಿನ ಎರಡು ಸಂಬಂಧಿಕರ ಮನೆಗೆ ಭೇಟಿ ನೀಡಿದ್ದು ಬಿಟ್ಟರೆ ದೂರದ ಯಾವುದೇ ಊರಿಗೆ ಭೇಟಿ ನೀಡಿಲ್ಲ ಎಂದು ಮಗುವಿನ ಸಂಬಂಧಿಕರೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News