ಬಂಟ್ವಾಳ: ಕೊರೋನ ಸೋಂಕು ತಗುಲಿರುವ ಭಯದಿಂದ ವ್ಯಕ್ತಿ ಆತ್ಮಹತ್ಯೆ

Update: 2020-03-27 10:09 GMT

ಬಂಟ್ವಾಳ, ಮಾ.27: ತನಗೆ ಕೋವಿಡ್ - 19 (ಕೊರೋನ) ಸೋಂಕು ತಗಲಿರಬಹುದು ಎಂದು ಸಂಶಯಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಮೇರಮಜಲು ಗ್ರಾಮದ ಅಬ್ಬೆಟ್ಟು ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿಯಾಗಿದ್ದ ಸದಾಶಿವ ಶೆಟ್ಟಿ(56) ಆತ್ಮಹತ್ಯೆಗೈದವರು. ಅವರು ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ಅವಧಿಯಲ್ಲಿ ಮನೆಯ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆ ಎಂದು ಅವರ ಪತ್ನಿ ಪೊಲೀಸರಿಗೆ ನೀಡಿದರುವ ದೂರಿನಲ್ಲಿ ತಿಳಿಸಿದ್ದಾರೆ.

ವ್ಯಾಪಕವಾಗಿ ಹರಡುತ್ತಿರುವ ಕೊರೋನ ವೈರಸ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿರುವ ತನಗೂ ತಗುಲಿರಬಹುದು ಎಂದು ಭಯಗೊಂಡಿದ್ದ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೆ ತನಗೆ ರೋಗ ತಗುಲಿದ್ದಲ್ಲಿ ತನ್ನಿಂದಾಗಿ ಮನೆಯವರಿಗೂ ಹರಡಬಹುದೆಂದು ಭಯಗೊಂಡಿದ್ದರು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಸದಾಶಿವ ಶೆಟ್ಟಿ ಅವರ ಪತ್ನಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News