×
Ad

ಹೊರಗಿನವರಿಗೆ ಹರೇಕಳ ಆಲಡ್ಕಕ್ಕೆ ಪ್ರವೇಶವಿಲ್ಲ: ಗ್ರಾಮಸ್ಥರಿಂದಲೇ ರಸ್ತೆ ಬಂದ್!

Update: 2020-03-27 15:41 IST

ಕೊಣಾಜೆ, ಮಾ.27: ದ.ಕ. ಜಿಲ್ಲೆ‌ ಲಾಕ್ಡೌನ್ ಮಾಡಲಾಗಿದ್ದರೂ ಕೆಲವೊಂದೆಡೆ ಗ್ರಾಮಾಂತರ ಪ್ರದೇಶದಲ್ಲೂ ಜನರ ಓಡಾಟ ಅಧಿಕವಾಗಿದೆ. ಇದೀಗ ಗ್ರಾಮೀ‌ಣ ಪ್ರದೇಶದಲ್ಲೂ ಜನರು ಎಚ್ಚರಗೊಂಡಿದ್ದು, ಹರೇಕಳ ಗ್ರಾಮದ ಆಲಡ್ಕದಲ್ಲಿ ಸ್ಥಳೀಯರೇ ಒಟ್ಟು ಸೇರಿ ಹೊರಗಿನವರ ವಾಹನ ಸಂಚಾರವನ್ನು ತಡೆಯಲು ರಸ್ತೆಯನ್ನು ಬಂದ್ ಮಾಡುವ ಮೂಲಕ ಕೊರೋನ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.

ಹರೇಕಳ ಗ್ರಾಮದ ಆಲಡ್ಕ ಪ್ರದೇಶದಲ್ಲಿ ಸುಮಾರು 200ರಷ್ಟು ಮನೆಯಿದೆ. ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಗೊಳಿಸಲಾಗಿದ್ದರೂ ಗ್ರಾಮೀಣ ಪ್ರದೇಶವಾದ ಹರೇಕಳದಲ್ಲಿ ಜನರ ಓಡಾಟ ನಿರಂತರವಾಗಿತ್ತು. ಅಲ್ಲದೆ ಹರೇಕಳ ಮಾತ್ರವಲ್ಲ‌ ಹೊರಗಿನ ಗ್ರಾಮದ ಯುವಕರು‌ ಕೂಡಾ ಇಲ್ಲಿಗೆ ವಾಹನದ ಮೂಲಕ ಬರುತ್ತಿದ್ದು ಇದು ಇಲ್ಲಿಯ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೆ ಕೆಲವರು ಇನ್ನೂ ಜಾಗೃತರಾಗದೆ ಹೊರಗಿನವರು ಇಲ್ಲಿ ಬಂದು ಗಾಂಜಾ, ಜುಗಾರಿಯಂತಹ ಅಡ್ಡದಾರಿಯಲ್ಲಿ ಸಮಯ ಕಳೆಯುವುದನ್ನು ತಪ್ಪಿಸಲು ಹಾಗು ಹೊರಗಿನವರು ಇಲ್ಲಿ ಬಂದು ಸೋಂಕು ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಹರೇಕಳ ಆಲಡ್ಕದ ಗ್ರಾಮಸ್ಥರು ಮುನ್ನೆಚ್ಚರಿಕೆ ವಹಿಸಿಕೊಂಡು ಆಲಡ್ಕಕ್ಕೆ ಪ್ರವೇಶಿಸುವ ರಸ್ತೆಯನ್ನು ಬಂದ್ ಗೊಳಿಸಿದ್ದಾರೆ.

ಸದ್ಯ ಹೊರಗಿನ ವಾಹನಕ್ಕೆ ಇಲ್ಲಿ ಸಂಪೂರ್ಣವಾಗಿ ನಿಷೇಧೀಸಲಾಗಿದ್ದು, ಗ್ರಾಮದ ಆಲಡ್ಕದ ಗ್ರಾಮದ ಅಗತ್ಯ ವಾಹನಗಳಿಗಷ್ಟೇ ಇಲ್ಲಿ ಪ್ರವೇಶವನ್ನು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಕೇರಳ ಗಡಿ ರಸ್ತೆಯನ್ನು ಮುಡಿಪು, ಬಾಳೆಪುಣಿ, ನರಿಂಗಾನ ಪ್ರದೇಶದಲ್ಲಿ ಪೊಲೀಸರು ಬಂದ್ ಗೊಳಿಸಿದ್ದರು. ಇದೀಗ ಹರೇಕಳ ಪರಿಸರದಲ್ಲಿ ಗ್ರಾಮಸ್ಥರು‌ ಕೂಡಾ ಎಚ್ಚೆತ್ತುಕೊಂಡು ಹೊರಗಿನಿಂದ ಬರುವವರನ್ನು ತಡೆಯುವ ಉದ್ದೇಶದಿಂದ ರಸ್ತೆ ಬಂದ್ ಗೊಳಿಸುವ ಮೂಲಕ‌ ಜಾಗೃತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News