×
Ad

​ಪೂರೈಕೆಯಲ್ಲಿ ವಿಳಂಬ: ಉಡುಪಿ ಜಿಲ್ಲೆಯಾದ್ಯಂತ ಮಾಸ್ಕ್ ಕೊರತೆ

Update: 2020-03-27 20:04 IST

ಉಡುಪಿ, ಮಾ.27: ಕೊರೋನ ಭೀತಿಯಿಂದ ರಖಂ ಔಷಧ ಮಾರಾಟಗಾರ (ಹೊಲ್‌ಸೇಲ್) ಸಿಬ್ಬಂದಿಗಳು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿ ರುವ ಪರಿಣಾಮ ಮೆಡಿಕಲ್ ಶಾಪ್‌ಗಳಿಗೆ ಮಾಸ್ಕ್ ಪೂರೈಕೆ ವಿಳಂಬವಾಗುತ್ತಿದ್ದು, ಇದರಿಂದ ಉಡುಪಿ ಜಿಲ್ಲೆಯಾದ್ಯಂತ ಮಾಸ್ಕ್ ಕೊರತೆ ತಲೆದೋರಿದೆ.

ಲಾಕ್‌ಡೌನ್‌ನಿಂದ ಮನೆಯೊಳಗೆ ಇರುವವರು ಅಗತ್ಯವಸ್ತುಗಳ ಖರೀದಿಗೆ ಹೊರಗಡೆ ಬಂದರೆ ಪೊಲೀಸರು ಮಾಸ್ಕ್ ಧರಿಸುವಂತೆ ಎಚ್ಚರಿಕೆ ಕೊಡುತ್ತಿ ದ್ದಾರೆ. ಮಾಸ್ಕ್ ಧರಿಸದ ಕಾರಣಕ್ಕೆ ಹಲವು ಕಡೆಗಳಲ್ಲಿ ಸಾರ್ವಜನಿಕರು ಲಾಠಿ ಏಟು ತಿಂದಿದ್ದಾರೆ. ಇದರಿಂದ ಒಮ್ಮೆಲೆ ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಬೇಡಿಕೆ ಹೆಚ್ಚಾಗಿದೆ. ಆದರೆ ಮಾರುಕಟ್ಟೆಯಲ್ಲಿ ಮಾಸ್ಕ್ ದೊರೆಯದೆ ಜನ ಮೆಡಿಕಲ್ ಶಾಪ್‌ಗಳಿಗೆ ಅಲೆದಾಡುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 320 ಮೆಡಿಕಲ್ ಶಾಪ್ (ಚಿಲ್ಲರೆ ಔಷಧ ಮಾರಾಟಗಾರರು) ಮತ್ತು 100ಕ್ಕೂ ಅಧಿಕ ರಖಂ ಔಷಧ ಮಾರಾಟಗಾರ ರಿದ್ದು, ಇವರಿಗೆ ಬೆಂಗಳೂರು, ಹುಬ್ಬಳ್ಳಿ ಹಾಗೂ ಮುಂಬೈಯಿಂದ ಮಾಸ್ಕ್‌ಗಳು ಪೂರೈಕೆಯಾಗುತ್ತಿವೆ. ರಾಜ್ಯ ಸರಕಾರ ಘೋಷಿಸಿರುವ ಲಾಕ್‌ಡೌನ್‌ನಿಂದಾಗಿ ಮಾ.24ರಿಂದ ಮಾಸ್ಕ್ ಗಳ ಪೂರೈಕೆ ಕಡಿಮೆ ಆಗುತ್ತಿದೆ.

ಕಳೆದ ವಾರ ಉಡುಪಿ ಜಿಲ್ಲೆಯ ಇಬ್ಬರು ರಖಂ ಔಷಧ ಮಾರಾಟಗಾರರಿಗೆ ಬೆಂಗಳೂರಿನಿಂದ 10 ಸಾವಿರ ಮಾಸ್ಕ್‌ಗಳು ಪೂರೈಕೆಯಾಗಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಬೇಡಿಕೆಗಳಿದ್ದ ಕಾರಣ ಅವುಗಳೆಲ್ಲ ತಕ್ಷಣಕ್ಕೆ ಖಾಲಿಯಾಗಿವೆ. ಇದೀಗ ಉಡುಪಿಯಲ್ಲಿ ಎರಡು ವಾರಗಳಿಗೆ ಬೇಕಾಗುವಷ್ಟು ದಾಸ್ತಾನು ಇದ್ದರೂ ಕೂಡ ಅದನ್ನು ಮೆಡಿಕಲ್ ಶಾಪ್‌ಗಳಿಗೆ ಪೂರೈಕೆ ಮಾಡಲು ಸಿಬ್ಬಂದಿಗಳಿಲ್ಲ.

ಕೊರೋನ ಭೀತಿಯಿಂದ ರಖಂ ಔಷಧ ಮಾರಾಟಗಾರರ ಸಿಬ್ಬಂದಿಗಳು ಕೆಲಸಕ್ಕೆ ಬರುತ್ತಿಲ್ಲ. ಕೆಲವು ಯುವಕರನ್ನು ಅವರ ಹೆತ್ತವರು ಕಳುಹಿಸುತ್ತಿಲ್ಲ ಎಂಬ ದೂರು ಕೇಳಿಬರುತ್ತಿವೆ. ಇದರಿಂದ ಮೆಡಿಕಲ್ ಶಾಪ್‌ಗಳಿಗೆ ಮಾಸ್ಕ್ ವಿತರಣೆ ತುಂಬಾ ಸಮಸ್ಯೆಯಾಗಿದೆ. 10 ಮಂದಿ ಮಾಡುತ್ತಿದ್ದ ಕೆಲಸವನ್ನು ಈಗ ಇಬ್ಬರು ಮಾಡುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

‘ಸದ್ಯಕ್ಕೆ ಉಡುಪಿ ಜಿಲ್ಲೆಯಲ್ಲಿ ಔಷಧಿಗಳಿಗೆ ಯಾವುದೇ ತೊಂದರೆ ಇಲ್ಲ. ಅನುಮತಿ ಪಡೆದು ಅಗತ್ಯ ಇರುವ ಔಷಧಿಗಳನ್ನು ತರಿಸಿಕೊಳ್ಳುತ್ತಿದ್ದೇವೆ. ಉಡುಪಿಗೆ ಈಗ ಬಂದಿರುವ ಔಷಧಿ ಸದ್ಯಕ್ಕೆ ಸಾಕಾಗುತ್ತದೆ. ಒಂದು ವಾರದ ಪರಿಸ್ಥಿತಿ ಹೇಗೆ ಎಂಬುದು ನೋಡಬೇಕು. ಈ ವಿಚಾರದಲ್ಲಿ ಇಲಾಖೆ ಕೂಡ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ಉಡುಪಿಯ ಸಹಾಯಕ ಔಷಧಿ ನಿಯಂತ್ರಕ ಕೆ.ವಿ.ನಾಗರಾಜ್ ತಿಳಿಸಿದ್ದಾರೆ.

ಮಾಸ್ಕ್ ಪೂರೈಕೆಗೆ ಇಲಾಖೆಯ ವತಿಯಿಂದ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ರಖಂ ಔಷಧ ಮಾರಾಟಗಾರರ ಸಿಬ್ಬಂದಿಗಳು ಕೆಲಸಕ್ಕೆ ಬಾರದೆ ಪೂರೈಕೆ ವಿಳಂಬವಾಗುತ್ತಿದೆ. ಈ ಸಂಬಂಧ ಸಿಬ್ಬಂದಿಯ ಮನೆಯವರನ್ನು ಮನವೊಲಿಸುವ ಕೆಲಸ ಮಾಡಲಾಗುತ್ತಿದೆ. ಎರಡು ವಾರಕ್ಕೆ ಬೇಕಾಗುವಷ್ಟು ಸ್ಟಾಕ್ ನಮ್ಮಲ್ಲಿ ಇದೆ. ಇದೀಗ ಇಬ್ಬರು ಮಾರಾಟಗಾರರು 7500 ಮಾಸ್ಕ್ ಗಳನ್ನು ಬೆಂಗಳೂರಿನಿಂದ ತರಿಸಿಕೊಳ್ಳುತ್ತಿದ್ದಾರೆ.
-ಕೆ.ವಿ.ನಾಗರಾಜ್ ಸಹಾಯಕ ಔಷಧ ನಿಯಂತ್ರಕರು, ಉಡುಪಿ

ಯಾವ ಮಾಸ್ಕ್ ಯಾರು ಧರಿಸಬಹುದು ?

ಎನ್-95 ಮಾಸ್ಕ್‌ನ್ನು ಕೇವಲ ಆರು ಗಂಟೆಗಳ ಕಾಲ ಉಪಯೋಗಿಸ ಬಹುದು. ಇದನ್ನು ಕೊರೋನ ಚಿಕಿತ್ಸೆ ಪಡೆಯುವವರು, ಇವರಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಸಿಬ್ಬಂದಿಗು ಮಾತ್ರ ಬಳಸಬೇಕಾಗುತ್ತದೆ.

ಅದೇ ರೀತಿ ಟ್ರಿಪಲ್ ಲೇಯರ್(ಮೂರು ಪದರ) ಮಾಸ್ಕ್‌ಗಳ ಅವಧಿ ಎಂಟು ಗಂಟೆ ಮಾತ್ರ. ಇದನ್ನು ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿರುವ ಆರೋಗ್ಯ ಸಿಬ್ಬಂದಿಗಳು ಹಾಗೂ ಶೀತ, ಕೆಮ್ಮು ಇರುವ ರೋಗಿಗಳು ಬಳಸ ಬಹುದಾಗಿದೆ. ಪ್ರತಿಯೊಬ್ಬರು ಈ ಮಾಸ್ಕ್‌ಗಳನ್ನು ಹಾಕುವ ಅಗತ್ಯ ಇಲ್ಲ. ಇದರಿಂದ ತುಂಬಾ ವೆಚ್ಚವಾಗಲಿದ್ದು, ತ್ಯಾಜ್ಯ ವಿಲೇವಾರಿಗಳಿಗೆ ಸಮಸ್ಯೆಯಾಗ ಬಹುದು.

ವಾಶೇಬಲ್(ತೊಳೆದು ಬಳಸುವ) ಮಾಸ್ಕ್‌ಗಳನ್ನು ಮೆಡಿಕಲ್‌ಗಳಿಂದ ಖರೀದಿಸಬೇಕಾಗಿಲ್ಲ. ಯಾಕೆಂದರೆ ಅದನ್ನು ಮನೆಯಲ್ಲಿಯೇ ತಯಾರಿಸಬಹು ದಾಗಿದೆ. ಉತ್ತಮ ಕಾಟನ್ ಬಟ್ಟೆಯಿಂದ ಮಾಸ್ಕ್‌ನ್ನು ತಯಾರಿಸಿ, ಪ್ರತಿದಿನ ಡೆಟ್ಟಾಲ್ ಅಥವಾ ಡಿಟರ್ಜೆಂಟ್‌ನಿಂದ ಬಿಸಿ ನೀರಿನಲ್ಲಿ ತೊಳೆದು, ಇಸ್ತ್ರೀ ಹಾಕಿ ಬಳಸಬೇಕು. ಇವುಗಳನ್ನು ಆರೋಗ್ಯವಂತರು ಧರಿಸಬಹುದು ಎಂದು ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಯ ತಜ್ಞ ವೈದ್ಯರು ತಿಳಿಸಿದ್ದಾರೆ.

ಆರೋಗ್ಯವಂತರು ಮಾಸ್ಕ್ ಹಾಕಬೇಕಾಗಿಲ್ಲ: ಡಿಸಿ

ಮೆಡಿಕಲ್ ಶಾಪ್‌ಗಳಲ್ಲಿ ಮಾಸ್ಕ್ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಭಯ ಪಡುವ ಅಗತ್ಯ ಇಲ್ಲ. ಶೀತ, ಕೆಮ್ಮು ಇರುವವರು ಮಾತ್ರ ಮಾಸ್ಕ್ ಧರಿಸಬೇಕೆ ಹೊರತು ಆರೋಗ್ಯವಂತರು ಮಾಸ್ಕ್ ಧರಿಸಬೇಕಾಗಿಲ್ಲ. ಹೊರಗಡೆ ಬರುವ ವರು ತಮ್ಮಲ್ಲಿರುವ ಕಾಟನ್ ಬಟ್ಟೆಗಳನ್ನು ಮುಖಕ್ಕೆ ಕಟ್ಟಿದರೂ ಸಾಕಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

ನಮಗೆ ಈಗ ಎನ್-95 ಮಾಸ್ಕ್‌ಗಳದ್ದು ಮಾತ್ರ ಕೊರತೆ ಇದ್ದು, ಈ ನಿಟ್ಟಿನಲ್ಲಿ ಮಣಿಪಾಲ ಕೆಎಂಸಿಯಿಂದ 300 ಎನ್-95 ಮಾಸ್ಕ್ ಪಡೆಯಲಾಗಿದೆ. ಅದು ಒಂದು ವಾರಕ್ಕೆ ಸಾಕಾಗುತ್ತದೆ. ಹೆಚ್ಚಿನ ಮಾಸ್ಕ್‌ಗಳಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರೋಗ್ಯವಂತರು ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಲಾಠಿ ಜಾರ್ಜ್ ಮಾಡುವುದು ಅಥವಾ ಸ್ಥಳದಲ್ಲೇ ಶಿಕ್ಷೆ ವಿಧಿಸುವುದು ಸರಿಯಲ್ಲ. ಈ ಬಗ್ಗೆ ಈಗಾಗಲೇ ಎಸ್ಪಿಯವರಿಗೆ ನಿರ್ದೇಶನ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News