ಬೆಳ್ತಂಗಡಿ ತಾಲೂಕಿನ ಯುವಕನಿಗೆ ಕೊರೋನ ಸೋಂಕು ದೃಢ
ಮಂಗಳೂರು, ಮಾ. 27: ವಿದೇಶದಿಂದ ಆಗಮಿಸಿದ್ದ ಬೆಳ್ತಂಗಡಿ ತಾಲೂಕಿನ ಯುವಕನಿಗೆ ಕೊರೋನ ಸೋಂಕು ತಗುಲಿರುವುದು ಶುಕ್ರವಾರ ದೃಢವಾಗಿದೆ. ಇದರೊಂದಿಗೆ ದ.ಕ.ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಏಳಕ್ಕೇರಿದೆ.
ಈ ಹಿಂದೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶದಿಂದ ಬಂದಿದ್ದ ಭಟ್ಕಳ ಮೂಲದ ಯುವಕನಲ್ಲಿ ಕೊರೋನ ಸೋಂಕು ಪತ್ತೆಯಾಗಿತ್ತು. ಬಳಿಕ ಕಾಸರಗೋಡಿನ ವೃದ್ಧೆಯ ಸಹಿತ ನಾಲ್ವರಿಗೆ ಸೋಂಕು ತಗುಲಿತ್ತು. ಶುಕ್ರವಾರ ಬಂಟ್ವಾಳ ತಾಲೂಕಿನ ಸಜಿಪದ 10 ತಿಂಗಳ ಮಗುವಿನಲ್ಲೂ ಈ ಸೋಂಕು ದೃಢಗೊಂಡಿರುವುದು ಬೆಳಕಿಗೆ ಬಂದಿತ್ತು. ಇದೀಗ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ 21ರ ಹರೆಯದ ಯುವಕನಿಗೆ ಕೊರೋನ ಸೋಂಕು ತಗುಲಿರುವುದು ಸ್ಪಷ್ಟಗೊಂಡಿದೆ.
ದುಬೈಯಲ್ಲಿದ್ದ ಈತ ಮಾ.21ರಂದು ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ತಲುಪಿದ್ದ. ಅಲ್ಲಿಂದ ಕೆಎಸ್ಸಾರ್ಟಿಸಿ ಬಸ್ ಮೂಲಕ ಊರಿಗೆ ಬಂದಿದ್ದ. ಜ್ವರ ಮತ್ತು ಕೆಮ್ಮುವಿನಿಂದ ಬಳಲುತ್ತಿದ್ದ ಈತನನ್ನು ಮಾ.24ರಂದು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಆತನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿಯಲ್ಲಿ ಕೊರೋನ ಸೋಂಕು ತಗುಲಿರುವುದು ದೃಢಗೊಂಡಿದೆ. ಈತನ ಆರೋಗ್ಯ ಸ್ಥಿರವಾಗಿದೆ. ಈತನ ಹತ್ತಿರದ ಸಂಬಂಧಿಗಳನ್ನು ತೀವ್ರ ನಿಗಾವಣೆಯಲ್ಲಿಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.