ಉಡುಪಿ ಪರಿಸರದಲ್ಲಿ ಪ್ರತಿದಿನ ನಿರಾಶ್ರಿತರಿಗೆ ಭೋಜನ
ಉಡುಪಿ, ಮಾ.27: ಕೊರೋನ ವೈರಸ್ ಹರಡುವ ಭೀತಿಯಿಂದ ಸರಕಾರ ಹೊರಡಿಸಿರುವ ಲಾಕ್‌ಡೌನ್‌ನಿಂದಾಗಿ ಉಡುಪಿ ಜಿಲ್ಲೆಯಾದ್ಯಂತ ಆಹಾರ ಸಿಗದೆ ಪರದಾಡುತ್ತಿರುವ ಸಾವಿರಾರು ಮಂದಿ ಕಾರ್ಮಿಕರು, ಭಿಕ್ಷುಕರು, ವಿದ್ಯಾರ್ಥಿಗಳಿಗೆ ರಾತ್ರಿ ಹಗಲು ಉಚಿತ ಊಟದ ವ್ಯವಸ್ಥೆ ಕಲ್ಪಿಸುವ ಕಾರ್ಯ ವನ್ನು ಹಲವು ಸಂಘಟನೆಗಳು ಮಾಡುತ್ತಿವೆ.
ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ನಮ್ಮ ಆಶ್ರಯ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಚಂದ್ರಮಾನ ಯುಗಾದಿಯಿಂದ ಸೌರಮಾನ ಯುಗಾದಿವರೆಗೆ ಉಡುಪಿ ಪರಿಸರದಲ್ಲಿನ ನಿರ್ಗತಿಕರಿಗೆ ಕೂಲಿ ಕಾರ್ಮಿಕರಿಗೆ ಹಾಗೂ ಬಸ್ ನಿಲ್ದಾಣ ಮತ್ತು ರಸ್ತೆಬದಿಯ ಜೋಪಡಿಯಲ್ಲಿ ವಾಸವಾಗಿರುವವರಿಗೆ ಉಚಿತ ಊಟವನ್ನು ಪೂರೈಸುತ್ತಿವೆ.
ಇಂದು ಉಡುಪಿ ಕೃಷ್ಣಮಠ ಪಾರ್ಕಿಂಗ್ ಪ್ರದೇಶ, ನಗರದ ಬಸ್‌ನಿಲ್ದಾಣ, ಕರಾವಳಿ ಬೈಪಾಸ್ ಹಾಗೂ ಬೇಡಿಕೆ ಬಂದ ಪ್ರದೇಶಗಳಿಗೆ ಮೂರು ತಂಡ ಗಳಾಗಿ ತೆರಳಿ ಸುಮಾರು 800 ಮಂದಿಗೆ ಊಟವನ್ನು ವಿತರಿಸಲಾಗಿದೆ. ಊಟ ತಯಾರಿಸುವ ಸ್ಥಳದಲ್ಲಿ ಮತ್ತು ವಿತರಿಸುವಾಗ ಸಾಮಾಜಿಕ ಅಂತರವನ್ನು ಪಾಲಿಸಲಾಗುತ್ತಿದೆ. ಅದೇ ರೀತಿ ಊಟ ತಯಾರಿಸುವವರಿಗೆ ಮಾಸ್ಕ್ ಹಾಗೂ ಕೈಕವಚಗಳನ್ನು ನೀಡಲಾಗುತ್ತದೆ ಎಂದು ಸಮಿತಿಯ ರಾಘವೇಂದ್ರ ಕಿಣಿ ತಿಳಿಸಿದ್ದಾರೆ.
ಅದೇ ರೀತಿ ದಾನಿಗಳ ನೆರವಿನೊಂದಿಗೆ ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹ್ಮದ್ ಹಾಗೂ ಮುಹಮ್ಮದ್ ಶೀಶ್ ನೇತೃತ್ವದ ತಂಡ ಉಡುಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕಳೆದ ಎರಡು ದಿನಗಳಿಂದ ಮಧ್ಯಾಹ್ನ ಹಾಗೂ ರಾತ್ರಿಯ ಊಟದ ಪೊಟ್ಟಣವನ್ನು ವಿತರಿಸುವ ಕೆಲಸ ಮಾಡುತ್ತಿದೆ. ಮಾ.26ರಂದು ಮಧ್ಯಾಹ್ನ 180, ರಾತ್ರಿ 225 ಮತ್ತು ಇಂದು ಮಧ್ಯಾಹ್ನ 300 ಮಂದಿಗೆ ಆಹಾರವನ್ನು ವಿತರಿಸಲಾಗಿದೆ.
ಆಹಾರವನ್ನು ತಯಾರಿಸಿ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ವಿತರಿಸಲಾಗು ತ್ತಿದೆ. ಸುಮಾರು 150 ಮಂದಿ ಕಾರ್ಮಿಕರು, ಭಿಕ್ಷುಕರು ಸ್ಥಳಕ್ಕೆ ಬಂದು ಊಟದ ಪೊಟ್ಟಣಗಳನ್ನು ಪಡೆದುಕೊಂಡಿದ್ದಾರೆ. ಕರೆ ಬಂದ ಆದಿಉಡುಪಿ, ಬ್ರಹ್ಮಗಿರಿ, ನಿಟ್ಟೂರು, ಮಿಶನ್ ಕಂಪೌಂಡ್ ಸೇರಿದಂತೆ ಉಡುಪಿಯ ಸುತ್ತಮುತ್ತಲಿನ ಪ್ರದೇಶಗಳಿಗೆ ನಾವೇ ತೆರಳಿ ಸುಮಾರು 150 ಮಂದಿಗಿ ಊಟ ವಿತರಿಸಿದ್ದೇವೆ. ಪ್ರತಿಯೊಬ್ಬರಿಗೆ ವೆಜ್‌ಬಿರಿಯಾನಿ ಮತ್ತು ಬೇಯಿಸಿದ ಮೊಟ್ಟೆಯನ್ನು ನೀಡು ತ್ತಿದ್ದೇವೆ ಎಂದು ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ.
ಹ್ಯುಮನಿಟೇರಿಯನ್ ರಿಲೀಫ್ ಸೊಸೈಟಿಯ ನೇತೃತ್ವದಲ್ಲಿ ಕಳೆದ ಐದು ದಿನ ಗಳಿಂದ ಉಡುಪಿ ನಗರ ಮತ್ತು ಹೊರವಲಯದಲ್ಲಿರುವ ಅಗತ್ಯ ಇರುವ ವಿದ್ಯಾರ್ಥಿಗಳು, ನಿರ್ಗತಿಕರು, ಕಾರ್ಮಿಕರಿಗೆ ಊಟ ಹಾಗೂ ನೀರು ಪೂರೈಸುವ ಕಾರ್ಯ ನಡೆಯುತ್ತಿದೆ. ಪ್ರತಿ ದಿನ ಮಧ್ಯಾಹ್ನ ಮತ್ತು ರಾತ್ರಿ ಒಟ್ಟು 200 ಊಟದ ಪ್ಯಾಕೇಟ್‌ಗಳನ್ನು ನೀಡಲಾಗುತ್ತಿದೆ.
ಹೂಡೆಯಲ್ಲಿ ತಯಾರಿಸಿದ ವೆಬ್ ಬಿರಿಯಾನಿಯನ್ನು ಉಡುಪಿ ನಗರ, ಸಂತೆಕಟ್ಟೆ, ಮಣಿಪಾಲ, ಬ್ರಹ್ಮಾವರ, ಕಟಪಾಡಿ, ಉದ್ಯಾವರ, ಅಂಬಲಪಾಡಿ ಸೇರಿದಂತೆ ಹಲವು ಕಡೆಗಳಿಗೆ ವಿತರಿಸಲಾಗುತ್ತಿದೆ. ಎರಡು ಕಾರುಗಳಲ್ಲಿ ಎರಡು ತಂಡಗಳನ್ನು ರಚಿಸಿ ಊಟವನ್ನು ವಿತರಿಸಲಾಗುತ್ತಿದೆ. ಈ ಸಂದರ್ಭ ದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ಸೊಸೈಟಿಯ ಉಸ್ತುವಾರಿ ಹಸನ್ ಕೋಡಿಬೇಂಗ್ರೆ ತಿಳಿಸಿದ್ದಾರೆ.
ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾರ್ಗದರ್ಶನದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಡಾ.ಶಶಿಕಿರಣ್ ಶೆಟ್ಟಿ, ದಿನೇಶ್ ಬಾಂಧವ್ಯ, ಅವಿನಾಶ್ ಕಾಮತ್, ರಾಘವೇಂದ್ರ ಕರ್ವಾಲು ಇಂದು ಉಡುಪಿ ಪರಿಸರದ ನೂರಾರು ಮಂದಿ ವಲಸೆ ಕಾರ್ಮಿಕರು, ನಿರಾಶ್ರಿತರಿಗೆ ಊಟವನ್ನು ವಿತರಿಸಿದರು.
ಬೀದಿನಾಯಿಗಳಿಗೂ ಆಹಾರದ ವ್ಯವಸ್ಥೆ
ಉಡುಪಿ, ಮಲ್ಪೆ ಹಾಗೂ ಮಣಿಪಾಲ ಪ್ರದೇಶದಲ್ಲಿ ಕಳೆದ ಐದಾರು ದಿನಗಳಿಂದ ಆಹಾರ ಇಲ್ಲದೆ ಹಸಿವಿನಿಂದ ಪರದಾಡುತ್ತಿರುವ ಬೀದಿನಾಯಿ ಗಳಿಗೆ ಒಂದೊತ್ತಿನ ಊಟದ ವ್ಯವಸ್ಥೆ ಮಾಡಲು ಪ್ರಾಣಿಪ್ರಿಯರು ಮುಂದೆ ಬಂದಿದ್ದಾರೆ.
ಮಲ್ಪೆ ಬೀಚ್, ಟೆಬ್ಮಾ ವಡಬಾಂಡೇಶ್ವರ ಪ್ರದೇಶದಲ್ಲಿರುವ ಸುಮಾರು 50ರಷ್ಟು ನಾಯಿಗಳಿಗೆ ಮಲ್ಪೆ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್‌ನ ಬಬಿತಾ ಮಧ್ವರಾಜ್, ಮಲ್ಪೆ ಸೀವಾಕ್, ತೊಟ್ಟಂ ಬೀಚ್‌ನಲ್ಲಿರುವ ನಾಯಿಗಳಿಗೆ ಬೀಚ್ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ, ಡಾ.ಸುಹಾಸ್, ನಂದಕಿಶೋರ್, ಜ್ಯೋತಿ ರೇಖಾ, ಶಶಾಂಕ್, ಡಾಮಿನಿಕ್ ಲೂವಿಸ್ ಮಣಿಪಾಲದ ಇಂಡಸ್ಟ್ರೀಯಲ್ ಏರಿಯಾ, ಈಶ್ವರ ನಗರ, ಎಂಐಟಿ ಕ್ಯಾಂಪಸ್, ಡಿಸಿ ಆಫೀಸ್ ರಸ್ತೆ, ಸರಳಬೆಟ್ಟುವಿನಲ್ಲಿರುವ ಸುಮಾರು 100 ನಾಯಿಗಳಿಗೆ, ತೇಜ್ ಮೋಹನ್ ಇಂದ್ರಾಳಿಯ ವಿಪಿ ನಗರದ 20 ನಾಯಿಗಳಿಗೆ, ಅಲ್ಕಾ ನಗರದ ಎಲ್‌ವಿಟಿ ರಸ್ತೆಯ 25 ನಾಯಿಗಳಿಗೆ, ರಂಜಿತ್ ಮಲ್ಪೆ ಗುಜ್ಜರಬೆಟ್ಟು, ಕೆಮ್ಮಣ್ಣು ಹಾಗೂ ಕಾಪು ಮಟ್ಟುವಿನಲ್ಲಿ ಪಾರ್ವತಿ ಎಂಬವರು ನಾಯಿಗಳಿಗೆ ಆಹಾರ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದಾರೆ.