×
Ad

​ಉಡುಪಿಯಲ್ಲಿ ಮತ್ತೆ 21 ಮಂದಿ ಕೋವಿಡ್-19 ಶಂಕಿತರು ಆಸ್ಪತ್ರೆಗೆ ದಾಖಲು

Update: 2020-03-27 20:30 IST

ಉಡುಪಿ, ಮಾ. 27: ಶಂಕಿತ ಕೋವಿಡ್-19 ಸೋಂಕಿನ ಪರೀಕ್ಷೆಗಾಗಿ ಶುಕ್ರವಾರ ಮತ್ತೆ 21 ಮಂದಿ ಉಡುಪಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 124 ಮಂದಿ ನೋವೆಲ್ ಕೊರೋನ ವೈರಸ್ ಸೋಂಕಿನ ಶಂಕೆಯ ಮೇಲೆ ಪರೀಕ್ಷೆಗೊಳಗಾ ದಂತಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಶುಕ್ರವಾರ ಸಂಜೆ 11 ಮಂದಿಯ ಗಂಟಲು ದ್ರವದ ಮಾದರಿಯ ಪರೀಕ್ಷಾ ವರದಿ ಹಾಸನದಿಂದ ಬಂದಿದ್ದು, ಎಲ್ಲವೂ ನೆಗೆಟೀವ್ ಆಗಿದೆ. ಈ ಮೂಲಕ 124 ಮಂದಿಯಲ್ಲಿ 103 ಮಂದಿಯ ಮಾದರಿಯ ವರದಿ ಬಂದಿದ್ದು, ಇವರಲ್ಲಿ 102 ಮಂದಿಯ ವರದಿ ನೆಗೆಟೀವ್ ಹಾಗೂ ಒಬ್ಬನ ವರದಿ ಮಾತ್ರ ಪಾಸಿಟೀವ್ ಆಗಿ ಬಂದಿದೆ ಎಂದವರು ತಿಳಿಸಿದರು.

ಇಂದು ದಾಖಲಾದ 21 ಮಂದಿಯಲ್ಲಿ 14 ಮಂದಿ ಉಡುಪಿ ತಾಲೂಕಿನ ವರಾದರೆ, ಮೂವರು ಕುಂದಾಪುರ ಹಾಗೂ ನಾಲ್ಕು ಕಾರ್ಕಳ ತಾಲೂಕಿನವರು. ಶುಕ್ರವಾರ ಒಟ್ಟು 11 ಮಂದಿಯ ಪರೀಕ್ಷಾ ವರದಿಯನ್ನು ಪಡೆಯಲಾಗಿದ್ದು ಎಲ್ಲವೂ ನೆಗೆಟೀವ್ ಆಗಿದೆ. ಇಂದು ದಾಖಲಾದ 21 ಮಂದಿಯ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಿ ಸೋಂಕಿನ ಪತ್ತೆಗಾಗಿ ಹಾಸನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ನಾಳೆ ಅವು ತಮ್ಮ ಕೈಸೇರುವ ನಿರೀಕ್ಷೆ ಇದೆ ಎಂದು ಡಾ. ಸೂಡ ಹೇಳಿದರು.

21 ಮಂದಿಯಲ್ಲಿ ಎಂಟು ಮಂದಿ ಜಿಲ್ಲಾಸ್ಪತ್ರೆಯಲ್ಲಿರುವ ಪ್ರತ್ಯೇಕಿತ ವಾರ್ಡ್‌ಗೆ ಸೇರ್ಪಡೆಗೊಂಡಿದ್ದರೆ ಉಳಿದವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಸೇರಿದ್ದಾರೆ. ಇವರಲ್ಲಿ 16 ಮಂದಿ ವಿದೇಶ ಪ್ರಯಾಣದ ಇತಿಹಾಸ ಹೊಂದಿದ್ದರೆ, ಉಳಿದ ಐವರು ತೀವ್ರ ಉಸಿರಾಟ ತೊಂದರೆ ಗಳಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರೂ ಕೊರೋನ ವೈರಸ್ ಪರೀಕ್ಷೆಗೆ ಒಳಗಾಗಿದ್ದಾರೆ.

ಚಾಲಕ ಕ್ವಾರಂಟೇನ್‌ನಲ್ಲಿ: ಈ ನಡುವೆ ಕಳೆದ ಮಾ.25ರಂದು ಸೋಂಕು ಪತ್ತೆಯಾದ ಮಣಿಪಾಲದ 34ರ ಹರೆಯದ ಯುವಕನ ಸಂಪರ್ಕಕ್ಕೆ ಬಂದ ಏಕೈಕ ವ್ಯಕ್ತಿಯಾದ ಆತನನ್ನು ಮಂಗಳೂರು ವಿಮಾನ ನಿಲ್ದಾಣದಿಂದ ಮಣಿಪಾಲಕ್ಕೆ ಕರೆದುಕೊಂಡು ಬಂದ ಟ್ಯಾಕ್ಸಿಯ ಚಾಲಕನನ್ನು ಹೋಮ್ ಕ್ವಾರಂಟೇನ್‌ನಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಡಿಎಚ್‌ಓ ತಿಳಿಸಿದರು.

ಉಳ್ಳಾಲದವರಾದ ಈ ಚಾಲಕ ಮಣಿಪಾಲ ಕೆಎಂಸಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಈ ಯುವಕನನ್ನು ಮಂಗಳೂರಿನಿಂದ ಮಣಿಪಾಲಕ್ಕೆ ಕರೆತಂದಿದ್ದರು. ಇದೀಗ ಆತನನ್ನು ಮನೆಯಲ್ಲೆ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಆತ ಯಾರನ್ನೂ ಭೇಟಿಯಾದ ಮಾಹಿತಿ ಸಿಕ್ಕಿಲ್ಲ. ಆತ ಮನೆಯಲ್ಲಿ ಪ್ರತ್ಯೇಕವಾಗಿ ಉಳಿದಿದ್ದು, ರೆಮಾಟೊ ಆತನಿಗೆ ದೂರದಿಂದಲೇ ಊಟವನ್ನು ಸರಬರಾಜು ಮಾಡುತಿತ್ತು ಎಂದು ತಿಳಿದುಬಂದಿದೆ ಎಂದವರು ತಿಳಿಸಿದರು.

ಜಿಲ್ಲೆಯಲ್ಲಿ ದಿನ ದಿನ ಅಧಿಕ ಸಂಖ್ಯೆಯ ಶಂಕಿತರು ಕೊರೋನ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸ್ವಚ್ಛತಾ ನೌಕರರು ಸೇರಿದಂತೆ ಹಲವು ಕೆಳಹಂತದ ನೌಕರರು ಸೋಂಕಿನ ಭೀತಿಯಿಂದ ಸಾಮೂಹಿಕ ರಜೆ ಹಾಕುತಿದ್ದು, ಆಸ್ಪತ್ರೆ ಕೆಲವು ಸಮಸ್ಯೆ ಗಳನ್ನು ಎದುರಿಸುತ್ತಿದೆ ಎಂದು ತಿಳಿದುಬಂದಿದೆ.

ಈ ನೌಕರರಿಗೆ ಅವರ ಮನೆಯ ಆಸುಪಾಸಿನ ಜನರು ಕೆಲಸಕ್ಕೆ ಹೋಗದಂತೆ ತಡೆಯುತಿದ್ದು, ಹೋದರೆ ನೀವು ಅಲ್ಲೇ ಇರಿ, ಮನೆಗೆ ಬರಬೇಡಿ ಎಂದು ತಾಕೀತು ಮಾಡುತಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಮೊನ್ನೆ ಒಬ್ಬನಲ್ಲಿ ಸೋಂಕು ಪತ್ತೆಯಾದ ಬಳಿಕ ಆಸ್ಪತ್ರೆಗೆ ಪರೀಕ್ಷೆಗಾಗಿ ಆಗಮಿಸುವವರ ಸಂಖ್ಯೆಯಲ್ಲಿ ಹಠಾತ್ತನೆ ಹೆಚ್ಚಳ ಕಂಡುಬಂದಿದೆ ಎಂದು ಜಿಲ್ಲಾ ಸರ್ಜನ್ ತಿಳಿಸಿದ್ದಾರೆ.

ಮಠದಲ್ಲಿ ಧನ್ವಂತರಿ ಯಾಗ:  ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರ ನೇತೃತ್ವ ಹಾಗೂ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥರ ಉಪಸ್ಥಿತಿಯಲ್ಲಿ ವಾಯುಸ್ತುತಿ ಪುನಶ್ಚರಣ ಹೋಮ ಹಾಗೂ ಧನ್ವಂತರಿ ಯಾಗ ಶ್ರೀಮಠದ ಋತ್ವಿಜರಿಂದ ನಡೆಯಿತು.

96,446 ಮನೆಗಳಿಗೆ ಭೇಟಿ

ನೋವೆಲ್ ಕೊರೋನ ವೈರಸ್ ಕುರಿತು ಮನೆ ಮನೆಗೆ ತೆರಳಿ ಜನರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದುವರೆಗೆ ಜಿಲ್ಲೆಯಲ್ಲಿ 96,446 ಮನೆ ಗಳಿಗೆ ಭೇಟಿ ನೀಡಿದ್ದು, 4,14,719 ಮಂದಿಯನ್ನು ಸಂಪರ್ಕಿಸಿ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಅಲ್ಲದೇ ವಿದೇಶಗಳಿಂದ ಬಂದು ಮನೆಗಳಲ್ಲಿ ನಿರ್ಬಂಧದಲ್ಲಿರುವವರನ್ನೂ ಭೇಟಿ ಮಾಡಿ ಅವರಿಗೂ ನಿರ್ಧಿಷ್ಟ ಸಮಯದವರೆಗೆ ಮನೆಯಲ್ಲೇ ಉಳಿಯುವಂತೆ ನೋಡಿಕೊಳ್ಳುತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 1429 ಮಂದಿಯನ್ನು ಕೊರೋನ ಸೋಂಕಿಗಾಗಿ ತಪಾಸಣೆಗೊಳಪಡಿಸಲಾಗಿದ್ದು, ಇಂದು 99 ಮಂದಿಯನ್ನು ಹೋಮ್ ಕ್ವಾರಂಟೇನ್‌ನಲ್ಲಿ ಇರಿಸಲಾಗಿದೆ ಎಂದು ಡಿಎಚ್‌ಓ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News