ಕ್ಲಿನಿಕ್ ತೆರೆಯದಿದ್ದರೆ ಲೈಸನ್ಸ್ ರದ್ದು : ಉಡುಪಿ ಡಿಸಿ ಎಚ್ಚರಿಕೆ
Update: 2020-03-27 21:25 IST
ಉಡುಪಿ, ಮಾ.27: ಉಡುಪಿ ಜಿಲ್ಲೆಯಲ್ಲಿ ಮುಚ್ಚಿರುವ ಖಾಸಗಿ ಕ್ಲಿನಿಕ್ ಹಾಗೂ ನರ್ಸಿಂಗ್ ಹೋಮ್‌ಗಳನ್ನು ತಕ್ಷಣ ತೆರೆದು ಸಾರ್ವಜನಿಕರಿಗೆ ಸೇವೆ ನೀಡಬೇಕು. ಇಲ್ಲದಿದ್ದರೆ ಅಂತವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರಗಿಸಿ ಪರವಾನಿಗೆಯನ್ನು ರದ್ದು ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕ್ಲಿನಿಕ್ ಹಾಗೂ ನರ್ಸಿಂಗ್ ಹೋಮ್‌ಗಳ ಸೇವೆಯ ಅಗತ್ಯ ಇದ್ದು, ಇಂತಹ ಸಂದರ್ಭದಲ್ಲಿ ಸೇವೆ ನೀಡಲ್ಲ ಎಂದು ಕ್ಲಿನಿಕ್‌ಗಳನ್ನು ಬಂದ್ ಮಾಡಿರುವುದು ಸರಿಯಲ್ಲ. ಆದುದರಿಂದ ಕ್ಲಿನಿಕ್ ಹಾಗೂ ನರ್ಸಿಂಗ್ ಹೋಮ್‌ಗಳನ್ನು ತೆರೆದು ಸಾರ್ವಜನಿಕರ ಸೇವೆ ಲಭ್ಯ ಇಡಬೇಕು. ತಪ್ಪಿದಲ್ಲಿ ಅಂತವರ ವಿರುದ್ಧ ಕೆಪಿಎಂ ಆ್ಯಕ್ಟ್ ಪ್ರಕಾರ ತಕ್ಷಣ ಕ್ರಮ ಜರಗಿಸಿ, ಜಿಲ್ಲಾಡಳಿತದಿಂದ ನೀಡಿರುವ ಪರವಾನಿಗೆಯನ್ನು ರದ್ದು ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.