ಕೊರೋನ ಸೋಂಕಿತ ಫೋಟೊ ವೈರಲ್: ಹಲವು ಮಂದಿಯ ವಿರುದ್ಧ ಡಿಎಚ್‌ಒ ದೂರು
ಉಡುಪಿ, ಮಾ.27: ಕೊರೋನ ಸೋಕಿಂತ ವ್ಯಕ್ತಿ ಹಾಗೂ ಆತನ ಪತ್ನಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿರುವವರ ವಿರುದ್ಧ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.25ರಂದು ಉಡುಪಿಯ ಕೊರೋನ ವೈರಸ್ ಸೋಂಕಿತ ವ್ಯಕ್ತಿಯ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದರಿಂದ ಸೋಂಕಿತ ವ್ಯಕ್ತಿಯ ಪತ್ನಿ ಹಾಗೂ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಸೋಂಕಿತ ವ್ಯಕ್ತಿಯ ಅನುಮತಿಯನ್ನು ಪಡೆಯದೇ ಆ ವ್ಯಕ್ತಿ ಮತ್ತು ಅವರ ಪತ್ನಿಯ ಫೋಟೋವನ್ನು ಗೋಪಾಲಕೃಷ್ಣ ನಾಯಕ್, ಗುರುಪ್ರಸಾದ್ ನಾಯಕ್, ಸುಚಿತಾ ಪೈ, ಕೃಷ್ಣ ಪ್ರಭು, ಮತ್ತು ಇತರರು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ಸರಕಾರದ ಆದೇಶವನ್ನು ಉಲ್ಲಂಘಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಆದುದರಿಂದ ಯಾವುದೇ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಕೋವಿಡ್- 19 ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಅಥವಾ ಸೋಂಕಿತ ವ್ಯಕ್ತಿಗಳ ಮಾಹಿತಿ ಯನ್ನು ಅಥವಾ ಫೋಟೋವನ್ನು ಅಥವಾ ಸುಳ್ಳು ಮಾಹಿತಿಗಳನ್ನು ಪ್ರಸರಿಸ ಬಾರದು. ಕಾನೂನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.