ಕೊರೋನ ವೈರಸ್ ಹಿನ್ನೆಲೆ: ಜುಮಾ ನಮಾಝ್ ಇಲ್ಲದ ‘ಶುಕ್ರವಾರ’

Update: 2020-03-27 16:36 GMT

ಮಂಗಳೂರು, ಮಾ. 27: ಶುಕ್ರವಾರ ಮಧ್ಯಾಹ್ನ ಜುಮಾ ನಮಾಝ್ ಆಗಿ ನಿರ್ವಹಿಸುವುದು ಪ್ರತಿಯೊಬ್ಬ ಮುಸ್ಲಿಮನಿಗೆ ಕಡ್ಡಾಯವಾಗಿದೆ. ಅದರಂತೆ ಎಷ್ಟೇ ಕಷ್ಟವಿದ್ದರೂ ಕೂಡ ನೂರಾರು ಮಂದಿ ಆಯಾ ಮಸೀದಿಗಳಲ್ಲಿ ಶುಕ್ರವಾರ ಮಧ್ಯಾಹ್ನ ಜುಮಾ ನಮಾಝ್ ನಿರ್ವಹಿಸುತ್ತಾರೆ. ನಮಾಝ್‌ಗೂ ಮುನ್ನ ಖುತ್ಬಾ ಪಾರಾಯಣ ಮಾಡಲಾಗುತ್ತದೆ. ಅದನ್ನು ಆಲಿಸಿ, ನಮಾಝ್ ನಿರ್ವಹಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕವೇ ಎಲ್ಲರೂ ವಿರಮಿಸುತ್ತಾರೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಅದೆಷ್ಟೋ ವರ್ಷದ ಬಳಿಕ ಮುಸ್ಲಿಮರು ಜುಮಾ ನಮಾಝ್ ಇಲ್ಲದ ಮಾ.27ರ ‘ಶುಕ್ರವಾರ’ವನ್ನು ಅತ್ಯಂತ ನೋವಿನಿಂದ ಕಳೆದರು.

ಕೊರೋನ ವೈರಸ್ ಹಿನ್ನೆಲೆಯಲ್ಲಿ ಶುಕ್ರವಾರದ ಜುಮಾ ನಮಾಝ್ ಮಸೀದಿಗಳಲ್ಲಿ ಸಾಮೂಹಿಕವಾಗಿ ನಿರ್ವಹಿಸದಂತೆ ರಾಜ್ಯ ಸರಕಾರ, ಜಿಲ್ಲಾಡಳಿತ ಮನವಿ ಮಾಡಿತ್ತು. ರಾಜ್ಯ ವಕ್ಫ್ ಮಂಡಳಿಯೂ ನಿರ್ದೇಶಿಸಿತ್ತು. ಸಮಾಜದ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಉಭಯ ಜಿಲ್ಲೆಗಳ ಖಾಝಿಯು ಕೂಡ ಮಸೀದಿಗಳಲ್ಲಿ ನಮಾಝ್ ನಿರ್ವಹಿಸದಂತೆ ಸೂಚಿಸಿದ್ದರು. ಈ ಮಧ್ಯೆ ಆಯಾ ಮಸೀದಿಗಳ ಆಡಳಿತ ಮಂಡಳಿಯು ಮಸೀದಿಗಳ ಸೂಚನಾ ಫಲಕ ಮತ್ತು ಗೇಟಿನ ಮುಂದೆ ನಮಾಝ್‌ಗೆ ಸಂಬಂಧಿಸಿ ಪ್ರಕಟನೆಯನ್ನೂ ನೀಡಿತ್ತು.

ಅದರಂತೆ ದ.ಕ.ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಝ್ ಇರಲಿಲ್ಲ. ಮಸೀದಿಗಳ ಇಮಾಮ್ ಮತ್ತು ಮುಅದ್ಸಿನ್ ಹಾಗೂ ಇತರ ಸಿಬ್ಬಂದಿ ವರ್ಗವು ಲುಹರ್ ನಮಾಝ್ ಮಾಡಿದರೆ, ಪ್ರತಿಯೊಬ್ಬರೂ ಸ್ವತಃ ಮನೆಗಳಲ್ಲಿ ಕುಟುಂಬ ಸಮೇತವಾಗಿ ಲುಹರ್ ನಮಾಝ್ ಮಾಡಿದರು.

ನಗರದ ಬಂದರ್ ಝೀನತ್ ಬಕ್ಷ್ ಜುಮಾ ಮಸ್ಜಿದ್, ಬಾವುಟಗುಟ್ಟದ ಈದ್ಗಾ ಮಸ್ಜಿದ್, ಹಂಪನಕಟ್ಟೆಯ ಮಸ್ಜಿದುನ್ನೂರ್, ಸ್ಟೇಟ್‌ಬ್ಯಾಂಕ್‌ನ ಮಸ್ಜಿದ್ ಇಬ್ರಾಹೀಂ ಖಲೀಲ್, ಪಂಪ್‌ವೆಲ್‌ನ ತಖ್ವಾ ಮಸ್ಜಿದ್, ಕಂದುಕ, ಬೋಳಾರ, ಕಂಕನಾಡಿ, ಜಪ್ಪು, ಕುದ್ರೋಳಿ ಹೀಗೆ ಯಾವೊಂದು ಮಸೀದಿಗಳಲ್ಲೂ ಜುಮಾ ನಮಾಝ್ ಇರಲಿಲ್ಲ. ಎಲ್ಲರೂ ಕೂಡ ಕುಟುಂಬ ಸಮೇತರಾಗಿ ಬಾಂಗ್ ಮೊಳಗಿದ 10-15 ನಿಮಿಷದೊಳಗೆ ಲುಹರ್ ನಮಾಝ್ ನೆರವೇರಿಸಿದರು.

ಈಗಾಗಲೆ ನಗರದ ಮಸೀದಿಗಳಲ್ಲಿ ಸಾಮೂಹಿಕ ನಮಾಝ್‌ಗೆ ನಿರ್ಬಂಧ ಹೇರಲಾಗಿತ್ತು. ಶುಕ್ರವಾರ ನಗರ ಮತ್ತು ಗ್ರಾಮೀಣ ಎಂಬ ವ್ಯತ್ಯಾಸವಿಲ್ಲದೆ ಸಾಮೂಹಿಕ ನಮಾಝ್‌ಗೆ ನಿರ್ಬಂಧ ಹೇರಿದ ಪರಿಣಾಮ ಮಸೀದಿಗಳಲ್ಲಿ ಬಾಂಗ್ (ಆಝಾನ್)ನ ಕರೆ ಮಾತ್ರ ಕೇಳಿಸಿತ್ತು. ಸಾಮಾನ್ಯವಾಗಿ ದಿನದ ಐದು ಬಾರಿಯ ಆಝಾನ್ ಕರೆಯಲ್ಲಿ ‘ಮಸೀದಿಗೆ ಬನ್ನಿ-ನಮಾಝ್ ಮಾಡಿ’ ಎಂದು ಹೇಳುತ್ತಿದ್ದರೆ ಇದೀಗ ಆಝಾನ್‌ನ ಕರೆಯಲ್ಲಿ ‘ಮನೆಯಲ್ಲೇ ನಮಾಝ್ ಮಾಡಿ’ ಎಂದು ಹೇಳಲಾಗುತ್ತಿದೆ.

ಮಾ.13ರ ಶುಕ್ರವಾರದ ಜುಮಾ ನಮಾಝ್‌ನಲ್ಲಿ ನಾಝಿಲತ್ ಕುನೂತ್ ಪಠಿಸಲಾಗಿದ್ದರೆ, ಮಾ.20ರ ಶುಕ್ರವಾರದ ಜುಮಾ ನಮಾಝ್-ಪ್ರಾರ್ಥನೆಯನ್ನು ಚುಟುಕುಗೊಳಿಸಲಾಗಿತ್ತು. ಒಟ್ಟಿನಲ್ಲಿ ಕೊರೋನ ವೈರಸ್ ಹಿನ್ನೆಲೆಯಲ್ಲಿ ಮಾ.27ರ ಶುಕ್ರವಾರ ತಲತಲಾಂತರ ವರ್ಷದಿಂದ ನಡೆಯುತ್ತಿದ್ದ ಜುಮಾ ನಮಾಝನ್ನು ಖಾಝಿಗಳ ನಿರ್ದೇಶನದಂತೆ ಕೈ ಬಿಡಲಾಗಿತ್ತು.

ನನಗೀಗ 81 ವರ್ಷ ಪ್ರಾಯ. ನನಗೆ ತಿಳಿದ ಮಟ್ಟಿಗೆ ಶುಕ್ರವಾರದ ಜುಮಾ ನಮಾಝ್‌ನ್ನು ನಿಲ್ಲಿಸಿದ್ದು ಗೊತ್ತಿಲ್ಲ. ಇದೇ ಮೊದಲ ಬಾರಿಗೆ ಈ ಅನುಭವ ಆಗಿದೆ. ವಿಶ್ವವು ದೊಡ್ಡ ಆಪತ್ತಿಗೆ ಸಿಲುಕಿದೆ. ಅನೀತಿ, ಅಕ್ರಮ ಹೆಚ್ಚುತ್ತಿದೆ. ಇದು ಅಲ್ಲಾಹನ ಶಿಕ್ಷೆಯೋ, ಪರೀಕ್ಷೆಯೋ ಗೊತ್ತಾಗುತ್ತಿಲ್ಲ. ಈ ದೊಡ್ಡ ರೋಗದಿಂದ ನಮ್ಮೆನ್ನೆಲ್ಲಾ ರಕ್ಷಿಸಲು ನಾವೆಲ್ಲ ಪ್ರಾರ್ಥಿಸೋಣ.
- ಅಲ್‌ಹಾಜ್ ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಾಪುರಂ

ಜನರು ಹೆಚ್ಚು ಸೇರುವುದರಿಂದ ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಜುಮಾ ನಮಾಝ್‌ಗೆ ನಿರ್ಬಂಧ ಹೇರಲಾಗಿದೆ. ಸರಕಾರದ ಆದೇಶವನ್ನು ಪಾಲಿಸುವುದರ ಜೊತೆಗೆ ಇತರರ ಆರೋಗ್ಯಕ್ಕೆ ಆದ್ಯತೆ ನೀಡುವುದು ಕೂಡ ಮುಖ್ಯವಾಗಿದೆ. ನನಗೀಗ 67 ವರ್ಷ ಪ್ರಾಯ. ನನ್ನ ಬದುಕಿನಲ್ಲಿ ಜುಮಾ ನಮಾಝ್ ನಿಂತಿರುವುದು ಇದೇ ಮೊದಲು. ಜುಮಾ ನಮಾಝ್ ನಿರ್ವಹಿಸಲಾಗದ ಆ ನೋವನ್ನು ಬಾಯ್ಮಾತಿನಿಂದ ಹೇಳಲು ನನಗೆ ಸಾಧ್ಯವಿಲ್ಲ.
- ಅಲ್‌ಹಾಜ್ ಇಕೆ ಇಬ್ರಾಹೀಂ ಮುಸ್ಲಿಯಾರ್
ಖಾಝಿ, ಕೃಷ್ಣಾಪುರ

ನನಗೀಗ 70 ವರ್ಷವಾಗುತ್ತಾ ಬಂತು. ನನ್ನ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಇಂದಿನ ಶುಕ್ರವಾರವನ್ನು ನೋವಿನಲ್ಲಿ ಕಳೆದೆ. ಹಿಂದೆ ಯಾವುದೋ ಒಂದು ಊರು, ಒಂದು ಜಿಲ್ಲೆ, ಒಂದು ರಾಜ್ಯ ಅಥವಾ ಒಂದು ದೇಶದಲ್ಲಿ ಬೇರೆ ಬೇರೆ ಕಾರಣಕ್ಕೆ ಜುಮಾ ನಮಾಝ್ ಇಲ್ಲದಾಗಿರಬಹುದು. ಆದರೆ ವಿಶ್ವದಾದ್ಯಂತ ಇದೇ ಮೊದಲ ಬಾರಿಗೆ ಜುಮಾ ನಮಾಝ್ ಇಲ್ಲದಾಗಿದೆ. ಒಳಿತು-ಕೆಡುಕು ಅಲ್ಲಾಹನ ಕಡೆಯಿಂದಲೇ ಬರುತ್ತದೆ. ನಾವೀಗ ದೊಡ್ಡ ಆಪತ್ತಿನಲ್ಲಿದ್ದೇವೆ. ಅದರಿಂದ ರಕ್ಷೆ ಹೊಂದಲು ‘ದುಆ’ವೊಂದೇ ನಮಗೆ ಇರುವ ಏಕೈಕ ಮಾರ್ಗವಾಗಿದೆ.
-ಶೇಖಬ್ಬ ಮುಸ್ಲಿಯಾರ್, ಖತೀಬ್, ಬದ್ರಿಯಾ ಜುಮಾ ಮಸ್ಜಿದ್
ಬಂದರ್ ಕಂದುಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News