ಹಿರಿಯ ನಾಗರಿಕರನ್ನು ಪ್ರತ್ಯೇಕ ನಿಗಾ ವಹಿಸಿ ಆರೈಕೆ ಮಾಡಿ: ದ.ಕ.ಜಿಲ್ಲಾಧಿಕಾರಿ ಮನವಿ

Update: 2020-03-27 16:46 GMT

ಮಂಗಳೂರು, ಮಾ.27: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ದ.ಕ.ಜಿಲ್ಲೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ಕೂಡ ದಿನದಿಂದ ದಿನಕ್ಕೆ ಇದು ವ್ಯಾಪಕವಾಗಿ ಹರಡುತ್ತಿರುವುದರಿಂದ ಮತ್ತು ಸಾರ್ವಜನಿಕರು ಕೂಡ ‘ಲಾಕ್‌ಡೌನ್’ನ್ನು ಲಘುವಾಗಿ ಪರಿಗಣಿಸುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಸಂದೇಶವನ್ನು ಹರಿಯಬಿಟ್ಟು ‘ಕೊರೋನ’ ಮುನ್ನೆಚ್ಚರಿಕೆಗಾಗಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ, ಅವುಗಳನ್ನು ಪಾಲಿಸಿ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

ಕೊರೋನ ವೈರಸ್ ನಿಗ್ರಹಕ್ಕೆ 21 ದಿನಗಳ ಲಾಕ್‌ಡೌನ್ ವಿಧಿಸಲಾಗಿದೆ. ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಕೂಡ ಪಕ್ಕದ ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿರುವ ಕಾರಣ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ 60 ಅಥವಾ 65 ವರ್ಷ ಪ್ರಾಯದ ಹಿರಿಯ ನಾಗರಿಕರನ್ನು ಮತ್ತು ದೀರ್ಘಾವಧಿ ಕಾಯಿಲೆಯಲ್ಲಿರುವವರನ್ನು ಪ್ರತ್ಯೇಕ ಕೋಣೆಯಲ್ಲಿರಿಸಿಕೊಂಡು ವಿಶೇಷ ನಿಗಾ ವಹಿಸಿ ಆರೋಗ್ಯವಂತರಿಂದ ಆರೈಕೆ ಮಾಡಿಸಿಕೊಳ್ಳಿರಿ. ಈ ಹಿರಿಯ ನಾಗರಿಕರು ಮತ್ತು ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿರುವವರು ಮನೆಯಿಂದ ಹೊರಗೆ ಬಾರದಂತೆ ನೋಡಿಕೊಳ್ಳಿರಿ. ಹಿರಿಯ ನಾಗರಿಕರನ್ನು ಆರೈಕೆ ಮಾಡುವ ಕೋಣೆಯು ಗಾಳಿ-ಬೆಳಕಿನಿಂದ ಕೂಡಿರಲಿ. ಅವರಿಗೆ ಸಮಯಕ್ಕೆ ಸರಿಯಾಗಿ ಆಹಾರ ನೀಡಿರಿ. ಅವರಿಂದ ಕನಿಷ್ಠ 3 ಮೀಟರ್ ಅಂತರದಲ್ಲಿರಿ. ಅವರು ಬಳಸುವ ಸಾಮಗ್ರಿಗಳನ್ನು ಪ್ರತ್ಯೇಕವಾಗಿರಿಸಿಕೊಳ್ಳಿ. ಆಗಾಗ ಕೈ ತೊಳೆಯುತ್ತಿರಿ. ಕೆಮ್ಮು, ಜ್ವರ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಕಾಣಿರಿ ಎಂದು ಡಿಸಿ ಉಪಯುಕ್ತ ಸಲಹೆಯೊಂದಿಗೆ ಸರ್ವ ರೀತಿಯ ಸಹಕಾರ ನೀಡಲು ವಿನಂತಿಸಿಕೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News