‘ನನ್ನನ್ನು ಕ್ಷಮಿಸಿ, ನಾನು ಕೊರೋನ ಲಾಕ್‌ಡೌನ್ ಆದೇಶ ಉಲ್ಲಂಘಿಸಿದ್ದೇನೆ'

Update: 2020-03-27 16:48 GMT

ಮಂಗಳೂರು, ಮಾ.27: ‘ನನ್ನನ್ನು ಕ್ಷಮಿಸಿ, ನಾನು ಕೊರೋನ ಲಾಕ್ ಡೌನ್ ಆದೇಶ ಉಲ್ಲಂಘಿಸಿದ್ದೇನೆ’. ಇದು ಕೊರೋನ ನಿಗ್ರಹಕ್ಕೆ ಪೊಲೀಸರು ಕಂಡುಕೊಂಡು ವಿನೂತನ ಶೈಲಿನ ಜಾಗೃತಿ ಅಭಿಯಾನ. ನಗರದ ವಿವಿಧ ಕಡೆ ಶುಕ್ರವಾರ ಈ ಅಭಿಯಾನ ಕಂಡು ಬಂತು. ಪೊಲೀಸರು ರಾಮಕೃಷ್ಣ ಮಿಶನ್‌ನ ಸ್ವಯಂ ಸೇವಕರ ಸಹಕಾರದಿಂದ ರಸ್ತೆಯಲ್ಲಿ ಅತ್ತಿಂದ ಚಲಿಸುವ ವಾಹನಿಗರು, ದಾರಿಹೋಕರನ್ನು ತಡೆದು ನಿಲ್ಲಿಸಿ ‘ನನ್ನನ್ನು ಕ್ಷಮಿಸಿ, ನಾನು ಕೊರೋನ ಲಾಕ್ ಡೌನ್ ಆದೇಶ ಉಲ್ಲಂಘಿಸಿದ್ದೇನೆ’ ಎಂದು ಬರೆಯಲಾದ ಬೋರ್ಡ್‌ನ್ನು ಒಂದು ಕ್ಷಣ ಹಿಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಕೊರೋನ ನಿಗ್ರಹಕ್ಕಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಆದರೂ ಕೆಲವು ಜನರು ಅನಗತ್ಯವಾಗಿ ಸುತ್ತಾಡುತ್ತಿದ್ದಾರೆ. ಆ ಹಿನ್ನಲೆಯಲ್ಲಿ ಪೊಲೀಸರು ಈ ಮೂಲಕ ತಿಳುವಳಿಕೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ನಗರದ ಒಳಗೆ ಹಾಗೂ ಹೊರ ವಲಯದಲ್ಲಿ ಮಧ್ಯಾಹ್ನ 12 ಗಂಟೆ ಬಳಿಕ ಬೈಕ್, ಕಾರುಗಳಲ್ಲಿ ಬಂದವರನ್ನು ತಡೆದು ನಿಲ್ಲಿಸಿದ ಪೊಲೀಸರು ಮೊದಲೇ ಸಿದ್ದಪಡಿಸಿಟ್ಟುಕೊಂಡಿದ್ದ ಬೋರ್ಡ್‌ಗಳನ್ನು ನೀಡಿ ಜಾಗೃತಿ ಮೂಡಿಸಿದ್ದಾರೆ. ಇದಕ್ಕೆ ವಾಹನ ಚಾಲಕರು ಸಕಾರಾತ್ಮಕವಾಗಿ ಸ್ಪಂದಿಸಿ ಮನೆಯಿಂದ ಹೊರ ಬರುವುದಿಲ್ಲ ಎನ್ನುವ ಭರವಸೆ ನೀಡಿದ್ದಾರೆ ಎಂದು ಪೊಲೀಸರು ಪತ್ರಿಕೆಗೆ ತಿಳಿಸಿದ್ದಾರೆ.

ರಾಜ್ಯದ ಹಲವು ಕಡೆಗಳಲ್ಲಿ ಪೊಲೀಸರು ಲಾಠಿ ಚಾರ್ಜ್, ಬಸ್ಕಿ, ಕಸ ಗುಡಿಸುವ ಶಿಕ್ಷೆ ವಿಧಿಸಿ ಮನೆಯಿಂದ ಹೊರ ಬರದಂತೆ ಎಚ್ಚರಿಕೆ ನೀಡುತ್ತಿದ್ದರೆ ನಗರದ ಪೊಲೀಸರು ವಿನೂತನ ಪ್ರಯೋಗದ ಮೂಲಕ ಆದೇಶ ಉಲ್ಲಂಘಿಸಿದವರನ್ನು ಅಚ್ಚರಿಗೆ ಕೆಡಹುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News