ಕರಾಯ ಯುವಕನಿಗೆ ಕೊರೋನ ವೈರಸ್: ಮಾ.21ರ ಸರಕಾರಿ ಬಸ್ ಪ್ರಯಾಣಿಕರು ನಿಗಾದಲ್ಲಿರಲು ಸೂಚನೆ

Update: 2020-03-28 16:55 GMT

ಮಂಗಳೂರು, ಮಾ. 28: ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಸಮೀಪದ ಕರಾಯದ 21ರ ಹರೆಯದ ಯುವಕನಿಗೆ ಕೊರೋನ ವೈರಸ್ ದೃಢಗೊಂಡ ಹಿನ್ನೆಲೆಯಲ್ಲಿ ಮಾ.21ರಂದು ಆತ ಪ್ರಯಾಣಿಸಿದ್ದ ಬಸ್‌ನಲ್ಲಿದ್ದ ಇತರ ಪ್ರಯಾಣಿಕರು, ಸಿಬ್ಬಂದಿ ವರ್ಗ ಮತ್ತು ರಿಕ್ಷಾ ಚಾಲಕ 28 ದಿನಗಳ ಹೋಮ್ ಕ್ವಾರಂಟೈನ್‌ನಲ್ಲಿರಲು ಜಿಲ್ಲಾಡಳಿತ ಸೂಚಿಸಿದೆ.

ದುಬೈಯಿಂದ ಮಾ.21ರಂದು ಬೆಳಗ್ಗೆ 8:30ಕ್ಕೆ ಬೆಂಗಳೂರಿಗೆ ಬಂದಿದ್ದ ಈ ಯುವಕ ಬಿಎಂಟಿಸಿ ಬಸ್ಸಿನ ಮೂಲಕ ಮೆಜೆಸ್ಟಿಕ್ ಬಸ್ ನಿಲ್ದಾಣ ತಲುಪಿದ್ದರು. ಮಧ್ಯಾಹ್ನ 2 ಗಂಟೆಗೆ ಮೆಜೆಸ್ಟಿಕ್‌ನಲ್ಲಿ ಊಟ ಮುಗಿಸಿ ಸಂಜೆ 4:30ಕ್ಕೆ ಕೆಎಸ್ಸಾರ್ಟಿಸಿ ಬಸ್ (ಕೆಎ 19 ಎಫ್ 3329) ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದರು. ಈ ಮಧ್ಯೆ ಕುಣಿಗಲ್‌ನಲ್ಲಿ ಚಹಾ ಕುಡಿದಿದ್ದರು. ಮಾ.22ರಂದು ಮುಂಜಾನೆ 3 ಗಂಟೆಗೆ ಉಪ್ಪಿನಂಗಡಿಯಲ್ಲಿ ಇಳಿದು ಆಟೋದ ಮೂಲಕ ಮನೆಗೆ ತಲುಪಿದ್ದರು.

ಹಾಗಾಗಿ ಕೆಎ 19 ಎಫ್ 3329 ಸರಕಾರಿ ಬಸ್‌ನಲ್ಲಿ ಪ್ರಯಾಣಿಸಿದ ಎಲ್ಲಾ ಪ್ರಯಾಣಿಕರು ಹಾಗೂ ಆಟೋ ಚಾಲಕ ಸಹಿತ ಎಲ್ಲರೂ 28ದಿನಗಳ ಕಾಲ ಮನೆಯಲ್ಲೇ ನಿಗಾದಲ್ಲಿರಲು ತಿಳಿಸಲಾಗಿದೆ. ಈ ಮಧ್ಯೆ ಯುವಕ ಸಂಚರಿಸಿದ ವಾಹನದಲ್ಲಿ ಯಾರಿಗಾದರು ರೋಗದ ಲಕ್ಷಣ ಕಂಡು ಬಂದರೆ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಲು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News