​ಮಾಹಿತಿ ಸಂಗ್ರಹ ಕೇಂದ್ರ ಸ್ಥಾಪಿಸಲು ಎಸ್‌ವೈಎಸ್ ಒತ್ತಾಯ

Update: 2020-03-28 17:01 GMT

ಮಂಗಳೂರು, ಮಾ.28: ಕೊರೋನ ವೈರಸ್‌ನಿಂದಾಗಿ ದ.ಕ.ಜಿಲ್ಲೆಯ ಜನರು ಆತಂಕಿತರಾಗಿದ್ದಾರೆ. ಬಂದ್‌ನಿಂದ ಮತ್ತಷ್ಟು ಕಂಗೆಟ್ಟಿದ್ದಾರೆ. ಜಿಲ್ಲಾಡಳಿತ ಸಾಕಷ್ಟು ಕ್ರಮಗಳು ಕೈಗೊಂಡರೂ ಪರಿಸ್ಥಿತಿ ಕೈ ಮೀರುತ್ತಿದೆ. ಈ ಮಧ್ಯೆ ಸಂಸದರ ಮತ್ತು ಜಿಲ್ಲಾಧಿಕಾರಿಗಳ ವೈರುಧ್ಯ ಹೇಳಿಕೆಗಳಿಂದ ಜನರು ಗೊಂದಲಕ್ಕೀಡಾಗಿದ್ದಾರೆ. ಆಹಾರ ಸಾಮಗ್ರಿಗಳನ್ನು ಪಡೆಯುವುದು ಹೇಗೆ ಎಂದು ಚಿಂತಿತರಾಗಿದ್ದಾರೆ. ಈ ನಿಟ್ಟಿನಲ್ಲಿ ನಗರದಲ್ಲಿ ಸೇವಾ ನಿರತ ಸಂಘಟನೆಗಳ ಪ್ರಮುಖರೊಂದಿಗೆ ಜಿಲ್ಲಾಡಳಿತ ಚರ್ಚೆ ನಡೆಸಬೇಕು ಮತ್ತು ಸ್ಥಳೀಯಾಡಳಿತ ಮಟ್ಟದಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಬೇಕು ಎಂದು ಎಸ್‌ವೈಎಸ್ ರಾಜ್ಯ ಮುಖಂಡ ಅಶ್ರಫ್ ಕಿನಾರ ಒತ್ತಾಯಿಸಿದ್ದಾರೆ.

ಜನತೆ ಮನೆಯೊಳಗಿರಬೇಕಾದರೂ ಕೂಡ ಜಿಲ್ಲಾಡಳಿತ ಅದನ್ನು ಪ್ರಾಯೋಗಿಕವಾಗಿಯೇ ಜಾರಿಗೊಳಿಸಬೇಕು. ನಗರದಲ್ಲಿ ಭಿಕ್ಷುಕರು, ನಿರ್ವಸಿತರು, ದಿನಗೂಲಿ ಮತ್ತು ವಲಸೆ ಕಾರ್ಮಿಕರು ಹಸಿವಿನಿಂದ ಕಂಗೆಟ್ಟಿದ್ದಾರೆ. ಅವರ ಸಂಕಷ್ಟವನ್ನು ನಿಭಾಯಿಸುವಲ್ಲಿ ಜಿಲ್ಲಾಡಳಿತ ಎಡವಿದಂತೆ ಕಂಡು ಬರುತ್ತಿದೆ. ಸ್ಪಷ್ಟವಾದ ಮಾರ್ಗಸೂಚಿ ಇಲ್ಲದ ಕಾರಣ ಜನರು ಗೊಂದಲಕ್ಕೀಡಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News