ಖಿನ್ನತೆಯ ವಿದ್ಯಮಾನ

Update: 2020-03-28 17:41 GMT

ಕೇಂದ್ರ,ರಾಜ್ಯ ಸರಕಾರಗಳು ಸಮರೋಪಾದಿಯಲ್ಲಿ ಪರಿಸ್ಥಿತಿಯನ್ನು ಎದುರಿಸುತ್ತಿವೆಯಾದರೂ ಸಾರ್ವಜನಿಕರಲ್ಲಿ ಆತಂಕ ತಪ್ಪಿಲ್ಲ. ಆರೋಗ್ಯದ ಜೊತೆಗೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕೊರೋನ ಪರಿಣಾಮ ಘಾತುಕವಾದುದು. ಶ್ರಮಜೀವಿ ಕೂಲಿಗಳಿಗೆ, ಕಾರ್ಮಿಕರಿಗೆ, ಕ್ರಿಯಾಶೀಲರಿಗೆ ಗೃಹ ಬಂಧನಕ್ಕಿಂತ ಮಿಗಿಲಾದ ಕಠಿಣ ಶಿಕ್ಷೆ ಇನ್ನೊಂದಿರಲಾರದು.‘ಇಂಡಿಯಾ ಲಾಕ್‌ಡೌನ್‌ನಿಂದ ತೀವ್ರ ಹೊಡೆತ ಬಿದ್ದಿರುವುದು ದೈನಂದಿನ ಸಂಪಾದನೆಯ ಮೇಲೆಯೇ ಜೋಪಡಿಗಳಲ್ಲಿ, ಫುಟ್‌ಪಾತ್‌ಗಳಲ್ಲಿ ಬದುಕು ಸವೆಸುವ ‘ಎಲ್ಲಿಂದಲೋ ಬಂದ’ ಶ್ರಮಜೀವಿ ಕೆಲಸಗಾರರಿಗೆ, ದೈನಂದಿನ ಚಿಲ್ಲರೆ ವರ್ತಕರಿಗೆ, ಕೃಷಿ ಕಾರ್ಮಿಕರಿಗೆ. ಹೊಟ್ಟೆಗಿಲ್ಲದಂತಹ ಪರಿಸ್ಥಿತಿ ಇವರದು. ತಯಾರಿಕಾ ಕ್ಷೇತ್ರದ ಜೊತೆಗೆ ಸೇವಾ ಕ್ಷೇತ್ರದ ಉದ್ಯಮಗಳ ಬಾಗಿಲುಗಳಿಗೆ ಬೀಗಮುದ್ರೆ ಬಿದ್ದು ನಿರುದ್ಯೋಗಿಗಳಾಗಿರುವ, ಆಗಲಿರುವ ಲಕ್ಷಾಂತರ ಮಂದಿ, ಕೆಳ ಮಧ್ಯಮವರ್ಗದ ಜನರ ಪಡಿಪಾಟಲೂ ಇದೇ ಆಗಿದೆ. ಈ ಜನರಿಗಾಗಿ ತಡವಾಗಿಯಾದರೂ ಸರಕಾರ ಕೆಲವೊಂದು ಆರ್ಥಿಕ ಪರಿಹಾರ ಘೋಷಿಸಿರುವುದರಿಂದ ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆ ದೊರೆತಂತಾಗಿದೆ. ಕೊರೋನ ರೋಗಾಣು ಭೀತಿ, ಆರ್ಥಿಕ ಸಂಕಷ್ಟಗಳ ಜೊತೆಗೆ ಇದರ ಪರಿಣಾಮವಾದ ಮಾಸಿಕ ಖಿನ್ನತೆಯೂ ದುರ್ಭರವಾದುದು. ಸಾಮಾಜಿಕ ಒಡನಾಟಗಳನ್ನು ತಪ್ಪಿಸುವುದು ಕೆಲವು ದಿನಗಳ ಮಟ್ಟಿಗೆ ಅನಿವಾರ್ಯವಾಗಬಹುದು.ಇದರಿಂದ ಖಿನ್ನರಾಗಬೇಕಿಲ್ಲ. ಕಷ್ಟ ಬಂದಾಗ ದೇವರ ಮೇಲೆ ಭಾರ ಹಾಕುವ ಪಲಾಯನಕ್ಕಿಂತ, ನಾವಿಂದು ಇದನ್ನು ವೈಜ್ಞಾನಿಕವಾಗಿಯೇ ಎದುರಿಸಬೇಕಾಗಿದೆ.


ಶ್ರೀ ಶಾರ್ವರಿ ಸಂವತ್ಸರ ಬಂತು. ಕೈಕೈ ಹಿಡಿದು ಚೈತ್ರಮಾಸವೂ ಬಂತು. ವಸಂತದ ಆಗಮನವೂ ಆಯಿತು. ಜನಮನವು ಸಂಭ್ರಮಿಸಿ ಹಾಡುವ ವಸಂತ ಋತು:

     ವಸಂತ ಬಂದ, ಋತುಗಳ ರಾಜ ತಾ ಬಂದ,
     ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ,
     ಚಳಿಯನು ಕೊಂದ. ಹಕ್ಕಿಗಳುಲಿಗಳೆ ಚೆಂದ,

ಕೂವೂ, ಜಗ್ ಜಗ್, ಪುವ್ವೀ, ಟೂವಿಟ್ಟವೂ ಎಂದು ಹಾಡಿ ಕುಣಿದು ನಲಿಯುವ ಸಂಭ್ರಮ ಇಂದಿಲ್ಲ. ನೇಪಥ್ಯಕ್ಕೆ ಸರಿದ ಶ್ರೀ ವಿಕಾರಿ ತನ್ನ ಹಿಂದೆ ಕರಾಳ ಛಾಯೆಯನ್ನು ಬಿಟ್ಟು ಹೋಗಿದೆ. ಅದು: ಕೊರೋನ, ಕೋವಿಡ್-19 ಎಂಬ ಕಾರ್ಮೋಡ. ಇಡೀ ಜಗತ್ತನ್ನೇ ಕವಿದಿರುವ ಈ ಕಾರ್ಮೋಡ ಭಾರತವನ್ನೂ ಬಿಟ್ಟಿಲ್ಲ. ಈ ಕಾರ್ಮೋಡದ ಖಿನ್ನತೆ ಆವರಿಸಿ ದೇಶ ವಿಚಲಿತವಾಗಿದೆ. ಅಘೋಷಿತ ತುರ್ತುಪರಿಸ್ಥಿತಿ ಈಗ ಕೋವಿಡ್-19 ರೂಪದಲ್ಲಿ ತಾನಾಗಿ ಪ್ರಕಟಗೊಂಡಿದೆ. ಈ ಸೋಂಕಿನಿಂದ ಪಾರಾಗಲು ಮನೆಯೊಳಗೆ ಅಡಗಿ ಕುಳಿತುಕೊಳ್ಳುವುದೊಂದೇ ಉಪಾಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಾರಿದ್ದಾರೆ. ಕೋಟೆ ಬಾಗಿಲು, ದಿಡ್ಡಿ ಬಾಗಿಲು, ಒಳ ಬಾಗಿಲುಗಳು, ವಾಯು ಜಲಮಾರ್ಗಗಳೂ ಎಲ್ಲದಕ್ಕೂ ಬೀಗ ಜಡಿಯಲಾಗಿದೆ. ಆದರೂ ಭೀತಿ ನಿವಾರಣೆ ಆಗಿಲ್ಲ. ಸೋಶಿಯಲ್ ಡಿಸ್ಟೆನ್ಸಿಂಗ್- ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಈ ಸೋಂಕಿನಿಂದ ಪಾರಾಗಲು ಉಪಾಯ ಎಂದು ಪ್ರಧಾನ ಮಂತ್ರಿ ದೇಶ ಬಾಂಧವರಿಗೆ ಕಿವಿ ಮಾತು ಹೇಳಿದ್ದಾರೆ.

ಈ ಸಾಮಾಜಿಕ ಅಂತರ ನಮಗೆ ಹೊಸತೇನಲ್ಲ. ಶತಮಾನಗಳಿಂದ ಸಮಾಜದ ಕೆಲವು ವರ್ಣ-ವರ್ಗಗಳ ಜನರನ್ನು ದೂರವಿಟ್ಟು ಅಸ್ಪಶ್ಯತೆ ಆಚರಿಸಿಕೊಂಡು ಬಂದಿರುವ ದೇಶಕ್ಕೆ ಇದು ಅಪರಿಚಿತವೇನಲ್ಲ.ಅಸ್ಪಶ್ಯತೆಯ ಇಂಗಿತದ ದನಿಯುಳ್ಳ ಸಾಮಾಜಿಕ ಅಂತರ ಸರಿಯೆ? ಸೋಶಿಯಲ್ ಡಿಸ್ಟೆನ್ಸಿಂಗ್ ಎಂದರೆ ಆರೋಗ್ಯ ಮತ್ತು ನೈರ್ಮಲ್ಯದ ಹಿನ್ನೆಲೆಯಲ್ಲಿ ಅಪ್ಪಿಕೊಳ್ಳುವಂತಹ ಸಾಮಾಜಿಕ ಒಡನಾಟ ಸ್ವಲ್ಪಕಾಲ ಸಲ್ಲದು ಎನ್ನುವುದು ಸರಿಯಾದ ಅರ್ಥ. ಮದುವೆ-ಮುಂಜಿ, ಹುಟ್ಟಿದ ಹಬ್ಬ, ಔತಣ ಕೂಟಗಳು, ಜಾತ್ರೆ, ರಥೋತ್ಸವ ಇತ್ಯಾದಿ ಕೊಡುಕೊಳ್ಳುವಿಕೆಯ ಸಂದರ್ಭಗಳಲ್ಲಿ ಸಾಮಾಜಿಕ ಒಡನಾಟವಿರುತ್ತದೆ. ಸಮಾಜವನ್ನು ಸಾಂಕ್ರಾಮಿಕ ರೋಗಗಳು ಕಾಡುತ್ತಿರುವ ಸನ್ನಿವೇಶದಲ್ಲಿ ಸಾಮಾಜಿಕ ಒಡನಾಟಗಳು ಸೋಂಕು ಹರಡಲು ಪ್ರಶಸ್ತ ಆಸ್ಪದಗಳಾಗುತ್ತವೆ. ಎಂದೇ ಸೋಂಕು ಜಾಡ್ಯವಿದ್ದಾಗ ಸಾಮಾಜಿಕ ಒಡನಾಟಗಳು ಬೇಡ ಎಂದು ವೈದ್ಯ ವಿಜ್ಞಾನ ಹೇಳುತ್ತದೆ. ಇದನ್ನು ಸಾಮಾಜಿಕ ಅಂತರ ಎಂದು ಅರ್ಥೈಸುವುದು ತಪ್ಪಾಗುತ್ತದೆ. ಎಲ್ಲರನ್ನೂ ದೂರವಿಟ್ಟು ಅಂತರ ಕಾಪಾಡಿಕೊಳ್ಳುವಂತೆ ಉಪದೇಶಿಸುವ ಬದಲು ಸಾಮಾಜಿಕ ಒಡನಾಟವನ್ನು ತಾತ್ಕಲಿಕವಾಗಿ ನಿಲ್ಲಿಸುವಂತೆ ತಿಳಿಯಹೇಳುವುದು ಸೂಕ್ತವಾದೀತು. ಆದರೆ ನಾಯಕರುಗಳು, ವೃತ್ತಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ಎಲ್ಲರೂ ಸೋಶಿಯಲ್ ಡಿಸ್ಟೆನ್ಸಿಂಗ್‌ಗೆ ಸಾಮಾಜಿಕ ಅಂತರ ಎಂದು ಮಕ್ಕಿಕಾಮಕ್ಕಿ ಭಾಷಾಂತರ ಮಾಡಿಯೇ ಕೋವಿಡ್-19ರ ಸಂದೇಶ ಸಾರುತ್ತಿರುವುದು ಒಂದು ವಿಪರ್ಯಾಸ.ಈ ಸಾಮಾಜಿಕ ಅಂತರ ಪ್ರಯೋಗ ಅಸ್ಪಶ್ಯತೆಯ ತಪ್ಪು ಸಂದೇಶವನ್ನು ದೇಶ ಬಾಂಧವರಿಗೆ ರವಾನಿಸದಂತೆ ಸರಕಾರ ಮತ್ತು ಮಾಧ್ಯಮಗಳು ಇನ್ನಾದರೂ ಎಚ್ಚರಿಕೆವಹಿಸಬೇಕಾದ್ದು ಅಗತ್ಯ. ಸಾಮಾಜಿಕ ಅಂತರದ ಅಪಾಯದ ಸೂಚನೆಗಳು ಈಗಾಗಲೇ ಕಾಣಬರುತ್ತಿವೆ. ಸೋಂಕಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಮನೆಬಿಟ್ಟು ಹೋಗುವಂತೆ ಹೇಳುತ್ತಿರುವುದು ಹಾಗೂ ಕ್ವಾರೆಂಟೈನ್‌ಗೆ ಒಳಗಾದವರನ್ನು ಸಮಾಜಬಾಹಿರರಂತೆ ಕಾಣುತ್ತಿರುವುದು ವರದಿಯಾಗಿದೆ. ಇದು ಅಸ್ಪಶ್ಯತೆಯಲ್ಲದೆ ಮತ್ತೇನು? ಇಂತಹ ಇನ್ನೂ ಕೆಲವು ವಿಪರ್ಯಾಸಗಳನ್ನು ನಾವಿಂದು ಕಾಣುತ್ತಿದ್ದೇವೆ. ಇಂದು ಕೊರೋನ ವೈರಾಣುಗಳಿಗಿಂತ ಹೆಚ್ಚು ವೇಗವಾಗಿ ಹಬ್ಬುತ್ತಿರುವುದೆಂದರೆ ವದಂತಿಗಳು, ನಮ್ಮ ಸಾಮಾಜಿಕ ಮಾಧ್ಯಮಗಳಲ್ಲಿನ ತಪ್ಪು ಮಾಹಿತಿಗಳು ಮತ್ತು ಮೂಢ ನಂಬಿಕೆಗಳು. ಅವುಗಳಲ್ಲಿ ಕೆಲವನ್ನು ಗಮನಿಸೋಣ:’

1.ಶಂಖ ನಾದ,ಘಂಟಾ ನಾದ, ಜಾಗಟೆ ಬಾರಿಸುವುದು, ಚಪ್ಪಾಳೆ ತಟ್ಟುವುದು. 2.ಗಾಯತ್ರಿ ಮಂತ್ರ ಜಪ 3.ಗಂಜಲ ಸೇವನೆ, ಸಗಣಿ ಲೇಪ 4.ಕಷಾಯಗಳ ಸೇವನೆ 5.ಮದ್ಯಪಾನ-ಇತ್ಯಾದಿ.

ಕಳೆದ 22ರಂದು ಭಾನುವಾರ ದೇಶದ ಜನತೆಗೆ ಸ್ವಯಂಪ್ರೇರಿತರಾಗಿ ರಾತ್ರಿ 9ರವರೆಗೆ ಕರ್ಫ್ಯೂ ಆಚರಿಸಲು ಕರೆನೀಡಿದ ಮೋದಿಯವರು, ಅಂದು ಸಂಜೆ 5ಗಂಟೆಗೆ ಜನರು ತಮ್ಮ ಮನೆಯ ಮುಂದೆ ಅಥವಾ ಬಾಲ್ಕನಿಗಳಲ್ಲಿ ನಿಂತು ಚಪ್ಪಾಳೆ ತಟ್ಟುವಂತೆ, ಜಾಗಟೆ ಬಾರಿಸುವಂತೆ ಸೂಚಿಸಿದ್ದು ಸರಿಯಷ್ಟೆ. ಅವರು ಯಾವ ಪರಿಕಲ್ಪನೆಯಿಂದ ಹೀಗೆ ಸೂಚಿಸಿದರೋ ತಿಳಿಯದು. ಚಪ್ಪಾಳೆತಟ್ಟುವುದು, ಜಾಗಟೆ ಬಾರಿಸುವ ಮೂಲಕ ಜನರು ಕೋವಿಡ್-19ರ ವಿರುದ್ಧ ಹಗಲುರಾತ್ರಿ ಹೋರಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಪ್ರಯೋಗಾಲಯಗಳ ತಂತ್ರಜ್ಞರು ಮೊದಲಾದವರ ಸಮರ್ಪಣಾ ಮನೋಭಾವದ ದುಡಿಮೆಗೆ ಬೆಂಬಲ ಮತ್ತು ಪ್ರಶಂಸೆ ಸೂಚಿಸಬೇಕೆನ್ನುವುದು ಪ್ರಧಾನಿಯವರ ಮಾತಿನ ಇಂಗಿತವಾಗಿತ್ತು. ಪ್ರಧಾನ ಮಂತ್ರಿ ಮೋದಿಯವರ ಕರೆಯ ನಂತರ, ಚಪ್ಪಾಳೆಯ ಶಬ್ದ ಕಂಪನಗಳು ಹಾಗೂ ಶಂಖ, ಜಾಗಟೆಗಳ ನಾದ ತರಂಗಗಳಿಗೆ ರೋಗನಿವಾರಕ ಶಕ್ತಿ ಇದೆಯೆಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾರಂಭಿಸಿತು. ಇದು ಸಂಗೀತಕ್ಕೆ ಚಿಕಿತ್ಸಕ ಗುಣವಿದೆಯೆಂಬ ಕೆಲವರ ಇಚ್ಛಾಪೂರ್ಣ ಆಲೋಚನೆಯಂತೆಯೇ ಹೊರತು ನಿಜವಲ್ಲ.

ಹಿಂದೆಯೂ ಇಂತಹ ಆಲೋಚನೆಗಳು ಇರಲಿಲ್ಲವೆಂದಲ್ಲ. ಪ್ಲೇಗ್ ಹಳ್ಳಿಹಳ್ಳಿಗಳನ್ನೇ, ಪಟ್ಟಣಗಳನ್ನೇ ಸ್ಮಶಾನವಾಗಿಸುತ್ತಿದ್ದ ದಿನಗಳಲ್ಲಿ ಜನರು ಮಾರಮ್ಮನ ಮೊರೆಹೊಕ್ಕಿ ಆ ದೇವತೆಯನ್ನು ಸುಪ್ರೀತಗೊಳಿಸಲು ಪ್ರಯತ್ನಿಸಿದ್ದರು.ಹದ್ದುಗಳು ಪ್ಲೇಗ್ ವಾಹಕಗಳೆಂದೂ ಅವು ಸತ್ತ ಇಲಿಯನ್ನು ತಂದು ತಮ್ಮೂರಿನೊಳಕ್ಕೆ ಎಸೆದರೆ ಪ್ಲೇಗ್ ಸಾಂಕ್ರಾಮಿಕವಾಗಿ ಹಬ್ಬುವುದು ಖಚಿತವೆಂದೂ ನಂಬಿದ್ದ ಜನ, ತಮ್ಮ ಊರಿನ ದಿಗಂತದಲ್ಲಿ ಹದ್ದುಗಳು ಕಾಣಿಸಿಕೊಂಡರೆ ಬೀದಿಗೆ ಬಂದು ಜಾಗಟೆ ಬಾರಿಸುತ್ತಿದ್ದರೆಂದು ನಮ್ಮ ಹಿರಿಯರು ಮಾತನಾಡಿಕೊಳ್ಳುತ್ತಿದ್ದುದನ್ನು ನಾನು ಕೇಳಿದ್ದೇನೆ. ಪ್ಲೇಗ್‌ನಿಂದ ಸತ್ತ ಒಂದು ಇಲಿಯನ್ನು ಹದ್ದೋ ಕಾಗೆಯೋ ಕಚ್ಚಿ ತಂದು ತಮ್ಮ ಅಗ್ರಹಾರದಲ್ಲಿ ಎಸೆದು ಬಿಟ್ಟರೂ ಸಾಕು ಎಲ್ಲ ಮುಗಿದಂತೆ ಎಂಬ ಮಾತು ಅನಂತ ಮೂರ್ತಿಯವರ ‘ಸಂಸ್ಕಾರ’ಕಾದಂಬರಿಯಲ್ಲಿ ಬರುತ್ತದೆ. ‘ಸಂಸ್ಕಾರ’ ಸಿನೆಮಾದಲ್ಲಿ ಅಗ್ರಹಾರದ ಬ್ರಾಹ್ಮಣರು ಬೀದಿಯಲ್ಲಿ ಜಾಗಟೆ ಬಾರಿಸುತ್ತ ಹದ್ದುಗಳನ್ನು ಓಡಿಸುವ ದೃಶ್ಯವೂ ಇದೆ. ಆದರೆ ಇದಕ್ಕೆ ಹೆದರಿ ಒಂದು ಕಾಲಕ್ಕೆ ಸಾವಿನ ಸಾಕ್ಷಾತ್ಕಾರವೆನಿಸಿದ್ದ ಪ್ಲೇಗ್ ಹೋಗಲಿಲ್ಲ. ಹಾಗೆ ಹೋಗುವುದೇ ನಿಜವಾಗಿದ್ದಲ್ಲಿ ನಮ್ಮ ವೈದ್ಯ ವಿಜ್ಞಾನದಲ್ಲಿ ಸಂಶೋಧನೆಗಳು ಮತ್ತು ಪ್ರಯೋಗಗಳ ಅಗತ್ಯವೂ ಇರುತ್ತಿರಲಿಲ್ಲ.

ಚಪ್ಪಾಳೆಯ ಶಬ್ದ ಕಂಪನ ಮತ್ತು ಶಂಖ ಜಾಗಟೆಗಳ ನಾದತರಂಗಗಳಿಂದ ಕೊರೋನ ವೈರಾಣುಗಳು ನಾಶವಾಗುವುದೆಂಬ ಸಾಮಾಜಿಕ ಜಾಲ ತಾಣಗಳ ಅಂಬೋಣವೂ ಇಂತಹ ಮೂಢ ನಂಬಿಕೆಯೇ. ಮನುಷ್ಯ ಹೊರಡಿಸುವ ಇಂತಹ ಶಬ್ದನಾದ ತರಂಗಗಳಿಗೆ ಅಂತಹ ರೋಗನಿವಾರಕಶಕ್ತಿ ನಿಜಕ್ಕೂ ಇರುವುದಾದಲ್ಲಿ 22ರಂದು ದೇಶದಲ್ಲಿ ಅಭೂತಪೂರ್ವಕವಾಗಿ ನಡೆದ ಚಪ್ಪಾಳೆ ಮತ್ತು ಶಂಖ ಜಾಗಟೆಗಳ ಪ್ರಯೋಗಕ್ಕೆ ಹೆದರಿ ಕೊರೋನ ಭಾರತದಿಂದ ಈ ವೇಳೆಗೆ ಪಲಾಯನ ಮಾಡಬೇಕಿತ್ತು. ಉತ್ತರ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಗಳ ನಾಯಕತ್ವದಲ್ಲಿ ಜನ ಶಂಖ-ಜಾಗಟೆ ಬಾರಿಸುತ್ತ ಮೆರವಣಿಗೆ ನಡೆಸಿದರಂತೆ. ಕೋವಿಡ್-19 ಇದಕ್ಕೆಲ್ಲ ಜಗ್ಗುವಂತಹದ್ದಲ್ಲ. ಅದಕ್ಕಾಗಿಯೇ ನಾವಿಂದು ಗೃಹ ಬಂಧನದಲ್ಲಿದ್ದೇವೆ.

ಗಾಯತ್ರಿ ನಮ್ಮ ಬುದ್ಧಿಭಾವಗಳಿಗೆ ಸಾಣೆ ಹಿಡಿಯುವ ಮಂತ್ರ.‘....ಧೀಯೋಯೋನ: ಪ್ರಚೋದಯಾತ್’ ಎನ್ನುವುದೇ ಗಾಯತ್ರಿ ಮಂತ್ರದ ತತ್ವಪ್ರಣಾಳಿಕೆಯಾಗಿದೆ. ನಮ್ಮ ಧೀಶಕ್ತಿಯನ್ನು ಜಾಗೃತಗೊಳಿಸು, ನಮ್ಮ ಬುದ್ಧಿಗೆ ಮಾರ್ಗದರ್ಶನ ಮಾಡು ಎಂದು ಸೃಷ್ಟಿಕರ್ತನಾದ ಭಗವಂತನನ್ನು ಪ್ರಾರ್ಥಿಸುವುದು, ಧ್ಯಾನ ಮಾಡುವುದು ಗಾಯತ್ರಿ ಮಂತ್ರದ ಅರ್ಥ, ಉದ್ದೇಶಗಳಾಗಿವೆ. ಇದರಿಂದ ನಮ್ಮ ಧೀಶಕ್ತಿ ಜಾಗೃತವಾಗಿ ನಾವು ವಿವೇಕದ ಮಾರ್ಗದಲ್ಲಿ ಸಾಗಬಹುದು ಎನ್ನುತ್ತಾರೆ ಪ್ರಾಜ್ಞರು. ಇದರಿಂದ ಸಮಸ್ಯೆ ನಿವಾರಣೆಯ ನಿಟ್ಟಿನಲ್ಲಿ ನಮ್ಮ ಮಾರ್ಗ ಸ್ಪಷ್ಟವಾಗಬಹುದು, ಮನಸ್ಸಿಗೆ ನೆಮ್ಮದಿ ಸಿಗಬಹುದು. ಆದರೆ ಗಾಯತ್ರಿ ಮಂತ್ರದ ಜಪ ಮಾತ್ರದಿಂದಲೇ ರೋಗ ನಿವಾರಣೆಯಾಗುತ್ತದೆ ಎನ್ನುವುದು ಅಮಾಯಕರನ್ನು ಹಾದಿ ತಪ್ಪಿಸುವ ಪ್ರಯತ್ನವಷ್ಟೇ ಅಲ್ಲದೆ ವೇದಜ್ಞಾನಕ್ಕೆ ಬಗೆಯುವ ದ್ರೋಹವೂ ಆಗುತ್ತದೆ. ಯುವ ಮನಸ್ಸುಗಳಲ್ಲಿ ಮೂಢ ನಂಬಿಕೆಯನ್ನು ಬಿತ್ತುವ ಇಂಥ ಪ್ರಯತ್ನಗಳು, ಹುನ್ನಾರಗಳು ಖಂಡನೀಯ.

ಗೋಮೂತ್ರ ಅಥವಾ ಗಂಜಲದಲ್ಲಿ ಔಷಧೀಯ ಗುಣಗಳಿವೆ ಎನ್ನುತ್ತದೆ ಆಯುರ್ವೇದ ವಿಜ್ಞಾನ. ಗೋಮೂತ್ರವನ್ನು ಆಯುರ್ವೇದ ವೈದ್ಯರು ಹಲವು ಕಾಯಿಲೆಗಳಿಗೆ ಔಷಧಿಯಾಗಿ ಬಳಸುವುದೂ ಉಂಟು.ಯಾವ ಯಾವ ರೋಗರುಜಿನಗಳಿಗೆ ಇದು ಪರಿಣಾಮಕಾರಿ ಔಷಧಿಯಾಗಬಲ್ಲದು ಎಂಬುದರಲ್ಲಿ ಆಯುರ್ವೇದ ತಜ್ಞರಲ್ಲೇ ಭಿನ್ನಾಭಿಪ್ರಾಯಗಳಿವೆ. ಕೆಲವು ವೈದ್ಯರು ಗೋಮೂತ್ರದಿಂದ ಕ್ಯಾನ್ಸರ್ ವ್ಯಾಧಿಯನ್ನು ಗುಣ ಪಡಿಸಬಹುದು ಎಂದೂ ಹೇಳುತ್ತಾರೆ. ಆದರೆ ಗೋಮೂತ್ರ ಕ್ಯಾನ್ಸರ್ ನಿವಾರಕ ಔಷಧಿ ಎಂಬುದು ಸಂಶೋಧನೆ,ಪ್ರಯೋಗಗಳಿಂದ ಸಾಬೀತಾಗಿಲ್ಲ.ಅದಕ್ಕೆ ಸಾಕ್ಷಿ ಪುರಾವೆಗಳೂ ಇಲ್ಲ.ಆದರೆ ಗೋಮೂತ್ರದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಗುಣಗಳಿವೆ ಹಾಗೂ ಈ ಕಾರಣದಿಂದಾಗಿ ಇದನ್ನು ತೀವ್ರಸ್ವರೂಪದ ಕಾಯಿಲೆಗಳಲ್ಲಿ ಕೊಡಲಾಗುತ್ತಿದೆ ಎಂದು ಆಯುರ್ವೇದ ವೈದ್ಯರು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಗೋಮೂತ್ರ ಕೋವಿಡ್-19 ರೋಗಾಣುಗಳನ್ನು ಸಾಯಿಸಬಲ್ಲದು ಎಂಬುದಕ್ಕೆ ಸಾಕ್ಷಾಧಾರಗಳೇನೂ ಇಲ್ಲ. ಇದು ಕೆಲವು ಪಟ್ಟಭದ್ರಹಿತಾಸಕ್ತಿಗಳು ಹುಟ್ಟಿಸುತ್ತಿರುವ ವದಂತಿಯಷ್ಟೆ.

ಮನೆ ಮದ್ದಾಗಿ ಬಳಸುವ ಶುಂಠಿ ಕಷಾಯ, ಮೆಣಸು-ಜೀರಿಗೆ ಕಷಾಯ ಮೊದಲಾದವು, ಸಾಮಾನ್ಯ ಶೀತ, ನೆಗಡಿ, ಕೆಮ್ಮುಗಳಿಗೆ ನಿವಾರಣಕಾರಿ ಅಥವಾ ನಿಯಂತ್ರಣಕಾರಿ ಔಷಧವಾಗಬಲ್ಲವು. ಕೊರೋನಕ್ಕೂ ಕಷಾಯಗಳು ರಾಮಬಾಣವಾಗಬಲ್ಲವು ಎಂಬುದು ಅಳಲೆಕಾಯಿ ಪಂಡಿತರ ಅತ್ಯುತ್ಸಾಹದ ಮಾತಿದ್ದೀತು. ಅದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಮದ್ಯಪಾನದಿಂದ ಕೊರೋನ ಗುಣವಾಗುತ್ತದೆ ಎಂಬುದು ಶುದ್ಧಾಂಗ ಸುಳ್ಳು. ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯಸಾರ ದ್ರಾವಣದಿಂದ ಕೈತೊಳೆಯಿರಿ ಎಂಬ ಸರಕಾರದ ಪ್ರಚಾರದಿಂದ ಉತ್ತೇಜಿತರಾದ ಮದ್ಯಪಾನಪ್ರಿಯರು ಹುಟ್ಟಿಸಿರುವ ಕುಹಕವಿದು-ಸರ್ವರೋಗಕ್ಕೂ ಸಾರಾಯಿಮದ್ದು ಎಂಬಂತೆ. ವಾಸ್ತವವಾಗಿ ಕೊರೋನ ವ್ಯಾಧಿಗೆ ಸದ್ಯಕ್ಕೆ ನಿರ್ದಿಷ್ಟವಾದ ಯಾವುದೇ ಔಷಧಿ ಇಲ್ಲ. ಔಷಧಿ ಕಂಡುಹಿಡಿಯುವ ಪ್ರಯತ್ನಗಳಲ್ಲಿ ವೈದ್ಯ ವಿಜ್ಞಾನಿಗಳು, ಸಂಶೋಧಕರು ನಿರತರಾಗಿದ್ದಾರೆ. ಕೊರೋನ ವ್ಯಾಕ್ಸಿನ್ ಸಿದ್ಧವಾಗಿ ಸಾರ್ವತ್ರಿಕ ಬಳಕೆಗಾಗಿ ಮಾರುಕಟ್ಟೆಗೆ ಬರಲು ಇನ್ನೂ ಹದಿನೆಂಟು ತಿಂಗಳುಗಳಾದರೂ ಬೇಕಾಗುವುದೆಂದು ‘ದಿ ಗಾರ್ಡಿಯನ್’ವರದಿ ಮಾಡಿದೆ. ಸೋಂಕು ಕಾಯಿಲೆಗಳಿಗೆ ನೀಡುವ ಔಷಧಿಗಳನ್ನೇ ಈಗ ಸದ್ಯಕ್ಕೆ ಕೊರೋನ ಪೀಡಿತರಿಗೂ ಕೊಡಲಾಗುತ್ತಿದೆ. ಮುನ್ನೆಚ್ಚರಿಕೆ ನಿವಾರಣಾ ಕ್ರಮಗಳನ್ನೂ ಸರಕಾರ ಘೋಷಿಸಿದೆ.

ಊರು ಸೂರೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರು ಎನ್ನುವಂತಾಗಿದೆ ನಮ್ಮ ದೇಶದ ಪರಿಸ್ಥಿತಿ. ಕೊರೋನ ಅಪಾಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಪಾಯದ ಸಂದೇಶಗಳು ಬಂದ ಕೂಡಲೇ ಕೇಂದ್ರ ಸರಕಾರ ಎಚ್ಚೆತ್ತುಕೊಂಡು ತಕ್ಷಣ ಕ್ರಮಗಳನ್ನು ಕೈಗೊಂಡಿದ್ದರೆ ಪರಿಸ್ಥಿತಿ ಇಷ್ಟೊಂದು ಉಲ್ಬಣಿಸುತ್ತಿರಲಿಲ್ಲ. ಮಾರ್ಚ್ ಎರಡನೆಯ ವಾರದಲ್ಲಿ ಘೋಷಿಸಿದ ಭಾರತ ಬಂದ್ ಫೆಬ್ರವರಿಯಲ್ಲೇ ಜಾರಿಗೆ ಬಂದಿದ್ದರೆ ಇಂದಿನಷ್ಟು ಬಾಧೆ ಪಡಬೇಕಾಗಿರಲಿಲ್ಲ ಎನ್ನುವ ತಜ್ಞರ ಮಾತಿನಲ್ಲಿ ತಥ್ಯವಿಲ್ಲದೇ ಇಲ್ಲ. ಫೆಬ್ರವರಿಯಲ್ಲೇ ವಿದೇಶಗಳಿಂದ ಬರುವವರ ವೈದ್ಯಕೀಯ ತಪಾಸಣೆ ಮತ್ತು ಕ್ವಾರಂಟೈನ್ ಆರಂಭಿಸಿದ್ದಿದ್ದರೆ ಕೊರೋನ ಸೋಂಕು ಹರಡುವಿಕೆಯನ್ನು ಪ್ರತಿಬಂಧಿಸಬಹುದಿತ್ತು.ಸರಕಾರ ಈ ಕ್ರಮಗಳನ್ನು ಆರಂಭಿಸುವ ವೇಳೆಗಾಗಲೇ ಕೊರೋನ ಸೋಂಕು ಅಂಟಿಸಿಕೊಂಡ ಸಾವಿರಾರು ಮಂದಿ ಭಾರತವನ್ನು ಮುಕ್ತವಾಗಿ ಪ್ರವೇಶಿಸಿಯಾಗಿತ್ತು. ಸೋಂಕು ಅವರಿಂದ ಇತರರಿಗೆ ಹರಡಲಾರಂಭಿಸಿತ್ತು. ಈ ಪರಿಸ್ಥಿತಿ ನಿಭಾಯಿಸುವುದರಲ್ಲಿ ಎದುರಾದ ಇನ್ನೊಂದು ತೊಡಕೆಂದರೆ ಆರೋಗ್ಯ ಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ. ಹಠಾತ್ತನೆ ಪ್ರಯೋಗಾಲಯಗಳು ಮತ್ತು ಆಸ್ಪತ್ರೆಗಳಲ್ಲಿ ಕೊರೋನ ಟೆಸ್ಟ್ ಕಿಟ್‌ಗಳು ಮತ್ತು ವೆಂಟಿಲೇಟರುಗಳ ಕೊರತೆ ಕಾಣಿಸಿಕೊಂಡಿತು. ಒಂದೆರಡು ದಿನಗಳಿಂದ ಇವುಗಳ ಪೂರೈಕೆ ಸುಧಾರಿಸಿರುವುದು ಸಮಾಧಾನದ ಸಂಗತಿ.

Writer - ಜಿ.ಎನ್. ರಂಗನಾಥ ರಾವ್

contributor

Editor - ಜಿ.ಎನ್. ರಂಗನಾಥ ರಾವ್

contributor

Similar News