ಲಾಕ್ ಡೌನ್‌ನಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಆಹಾರ ಒದಗಿಸಿ: ಗೃಹ ಸಚಿವಾಲಯ

Update: 2020-03-28 19:23 GMT

ಹೊಸದಿಲ್ಲಿ, ಮಾ.28: ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ತೊಂದರೆಗೊಳಗಾಗಿರುವ ಸಹಸ್ರಾರು ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ, ಆಹಾರ, ಬಟ್ಟೆ, ವೈದ್ಯಕೀಯ ಆರೈಕೆ ನೀಡುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳಿಗೆ ಗೃಹ ಸಚಿವಾಲಯ ನಿರ್ದೇಶನ ನೀಡಿದೆ.

ಕೋವಿಡ್ -19 ವೈರಸ್ ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಆದೇಶಿಸಿದ 21 ದಿನಗಳ ಲಾಕ್ ಡೌನ್‌ನಿಂದಾಗಿ ಅನೇಕ ಕಾರ್ಮಿಕರು ಉದ್ಯೋಗ ಮತ್ತು ಕೈಯಲ್ಲಿ ಹಣವಿಲ್ಲದ ದೈನಂದಿನ ಆವಶ್ಯಕತೆಗಳಿಗೆ ಪರದಾಡುವಂತಾಗಿದೆ.

ರೈಲ್ವೆ ಮತ್ತು ಅಂತರ್‌ರಾಜ್ಯ ಬಸ್ಸುಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸಾರಿಗೆಯನ್ನು ಮುಚ್ಚಲಾಗಿದೆ. ಆಹಾರ, ನೀರು, ಸೂರು ಇಲ್ಲದ ಹಿನ್ನೆಲೆಯಲ್ಲಿ ಆನೇಕರು ತಮ್ಮ ಊರಿಗೆ ಉರಿ ಬಿಸಿಲಿನಲ್ಲೂ ಕಾಲ್ನಡಿಗೆಯಲ್ಲಿ ಕಠಿಣ ಪ್ರಯಾಣವನ್ನು ಕೈಗೊಂಡಿದ್ದಾರೆ. ಆದಾಗ್ಯೂ, ದೇಶದಲ್ಲಿ ಕೋವಿಡ್ -19 ಸೋಂಕು ಪ್ರಕರಣಗಳ ಸಂಖ್ಯೆ 900 ದಾಟಿದ ನಂತರ ಸಾಮೂಹಿಕ ವಲಸೆಯಿಂದಾಗಿ ಸೋಂಕು ಇನ್ನೂ ಹರಡುವುದರ ಬಗ್ಗೆ ಕಳವಳ ವ್ಯಕ್ತವಾಗಿದೆ. ವಲಸೆ ಕಾರ್ಮಿಕರ ನೆರವಿಗೆ ಕೇಂದ್ರ ಬದ್ಧ: ಗೃಹ ಸಚಿವ ಶಾ

ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ನೆರವಿಗೆ ಕೇಂದ್ರ ಸರಕಾರವು ಬದ್ಧವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಕ್ರಮಗಳಿಗಾಗಿ ಆಯಾ ವಿಪತ್ತು ಪರಿಹಾರ ನಿಧಿಯಿಂದ ಹಣವನ್ನು ಬಳಸಲು ಮತ್ತು ಹೆದ್ದಾರಿಗಳಲ್ಲಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ ಎಂದು ಅವರು ಹೇಳಿದರು.

ಊರಿಗೆ ಮರಳಲು ಪ್ರಯತ್ನಿಸುತ್ತಿರುವ ವಲಸೆ ಕಾರ್ಮಿಕರಿಗೆ ನೆರವು ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಲಸೆ ಕಾರ್ಮಿಕರಿಗೆ ಆಹಾರ, ನೀರು ಮತ್ತು ಬೆಂಬಲವನ್ನು ನೀಡುವಂತೆ ಸಲಹೆ ನೀಡಲಾಗಿದೆ ಎಂದು ಹೇಳಿದರು.

ಗಡಿ ಜಿಲ್ಲೆಗಳಲ್ಲಿ ಸಿಲುಕಿರುವ ಜನರನ್ನು ರಾಜ್ಯದ ಜನರನ್ನು ಅವರ ಊರಿಗೆ ಕರೆದೊಯ್ಯಲು 1,000 ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಸರಕಾರ ತಿಳಿಸಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಅವರು ತೊಂದರೆಗೊಳಗಾಗಿರುವ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದಿಲ್ಲಿ ಸರ್ಕಾರವು ಬಸ್ಸುಗಳನ್ನು ಸಹ ವ್ಯವಸ್ಥೆ ಮಾಡಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ನೆರೆಯ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದಿಂದ ಹತ್ತಾರು ವಲಸೆ ಕಾರ್ಮಿಕರು ಉದ್ಯೋಗ ಹುಡುಕಿಕೊಂಡು ರಾಷ್ಟ್ರ ರಾಜಧಾನಿಗೆ ಪ್ರಯಾಣಿಸುತ್ತಾರೆ. ದಿಲ್ಲಿ ಸರಕಾರದ 100 ಬಸ್ಸುಗಳನ್ನು ವಲಸೆ ಕಾರ್ಮಿಕರಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಿಸೋಡಿಯಾ ಹೇಳಿದರು.

ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಲಸಿಗರಿಗೆ ಸಹಾಯ ಮಾಡುವಂತೆ ಸರಕಾರವನ್ನು ಕೋರಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಿಎಂ ಮೋದಿಗೆ ಸಮಸ್ಯೆಯ ಬಗ್ಗೆ ಗಮನ ಸೆಳೆಯುವಂತೆ ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News