ಭಾರತದಲ್ಲಿ ಕೊರೋನ 3ನೇ ಹಂತ ತಲುಪಿಲ್ಲ: ಆರೋಗ್ಯ ಸಚಿವಾಲಯ ಸ್ಪಷ್ಟನೆ

Update: 2020-03-28 19:24 GMT

 ಹೊಸದಿಲ್ಲಿ,ಮಾ.29: ದೇಶಾದ್ಯಂತ ಕೊರೋನ ವೈರಸ್‌ಸೋಂಕಿನ ಮರಣ ಮೃದಂಗ ಮುಂದುವರಿದಿರುವಂತೆಯೇ ಭಾರದಲ್ಲಿ ಈ ಮಾರಕ ಸೋಂಕು ರೋಗವು ಇನ್ನೂ ಮೂರನೆ ಹಂತವನ್ನು ತಲುಪಿಲ್ಲವೆಂದು ಕೇಂದ್ರ ಸರಕಾರ ಶನಿವಾರ ತಿಳಿಸಿದೆ. ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 900ರ ಗಡಿಯನ್ನು ದಾಟಿದೆ. ಆದರೂ ಕೊರೋನ ವೈರಸ್ ಸಮುದಾಯದ ನಡುವೆ ಹರಡುತ್ತಿರುವ ಬಗ್ಗೆ ಈತನಕ ಯಾವುದೇ ದೃಢವಾದ ಪುರಾವೆಗಳು ಕಂಡುಬಂದಿಲ್ಲವೆಂದು ಅದು ಹೇಳಿದೆ.

ಆರೋಗ್ಯ ಸಚಿವಾಲಯವು ಶನಿವಾರ ಪತ್ರಿಕಾ ಹೇಳಿಕೆಯೊಂದರಲ್ಲಿ ಈ ಮಾಹಿತಿಯನ್ನು ನೀಡಿದೆ.

ಈವರೆಗೆ ಬಹುತೇಕ ಪ್ರಕರಣಗಳಲ್ಲಿ ವಿದೇಶದಿಂದ ಆಗಮಿಸಿದವರು ಹಾಗೂ ಅವರ ಜೊತೆ ಸಂಪರ್ಕಕ್ಕೆ ಬಂದವರಿಗೆ ಸೋಂಕು ತಗಲಿರುವುದು ವರದಿಯಾಗಿತ್ತು. ಆದರೆ ಸಮುದಾಯದೊಳಗೆ ಸೋಂಕು ಹರಡುವುದನ್ನು ಮೂರನೆ ಹಂತವೆಂದು ಪರಿಗಣಿಸಲಾಗುತ್ತದೆ.

ಸಾಮಾನ್ಯ ಜನರು ಸೋಂಕಿಗೆ ಒಳಗಾಗುತ್ತಿರುವ ಬಗ್ಗೆ ದೃಢವಾದ ನಿರ್ಶನಗಳು ದೊರೆಯದೆ ನಾವು ಸನ್ನಿವೇಶವನ್ನು ಉತ್ಪ್ರೇಕ್ಷಿಸಿ ವ್ಯಾಖ್ಯಾನಿಸಲಾರೆವು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಹಿರಿಯ ಅಧಿಕಾರಿ ಡಾ.ಆರ್. ಗಂಗಾ ಕೇತ್ಕರ್ ತಿಳಿಸಿದ್ದಾರೆ.

ಒಂದು ವೇಳೆ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ನಾಟಕೀಯ ರೀತಿಯಲ್ಲಿ ಹೆಚ್ಚಳವಾದರೂ ಅದನ್ನು ನಿಭಾಯಿಸಲು ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ತಪಾಸಣಾ ಕೇಂದ್ರಗಳು ಹಾಗೂ ಪರೀಕ್ಷಾ ಕಿಟ್‌ಗಳು ಇರುವುದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News