ಕರ್ನಾಟಕ ಗಡಿಯಲ್ಲಿ ಆಂಬ್ಯುಲೆನ್ಸ್ ಗೆ ನಿರ್ಬಂಧ: ಬಿ.ಸಿ.ರೋಡ್ ಮೂಲದ ಮಹಿಳೆ ಮೃತ್ಯು

Update: 2020-03-29 06:02 GMT

ಮಂಜೇಶ್ವರ, ಮಾ. 29: ಕೇರಳದ ಆ್ಯಂಬುಲೆನ್ಸ್ ಗೆ ಕರ್ನಾಟಕ ಗಡಿಯಲ್ಲಿ ನಿರ್ಬಂಧ ಹಾಕಿರುವುದರಿಂದ ಬಿ.ಸಿ.ರೋಡ್ ಮೂಲದ ಮಹಿಳೆಯೊಬ್ಬರು ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಬಿ.ಸಿ.ರೋಡ್ ಮೂಲದ ಪಾತುಞಿ (70) ಚಿಕಿತ್ಸೆ ಸಿಗದೆ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.

ಅವರು 15 ದಿನಗಳ ಹಿಂದೆ ಬಿ.ಸಿ.ರೋಡಿನಿಂದ ಮಂಜೇಶ್ವರ ಉದ್ಯಾವರದಲ್ಲಿರುವ ಮೊಮ್ಮಗಳ ಮನೆಗೆ ತೆರಳಿದ್ದರು ಎನ್ನಲಾಗಿದೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರು ಆಸ್ಪತ್ರೆಯೊಂದರ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. 

ಶನಿವಾರ ಸಂಜೆ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮಂಗಳೂರಿನ ಅದೇ ಆಸ್ಪತ್ರೆಗೆಂದು ಆಂಬ್ಯುಲೆನ್ಸ್ ಮೂಲಕ ಮಂಜೇಶ್ವರದಿಂದ ಕರೆದುಕೊಂಡು ಬರಲಾಗಿದ್ದು ಈ ವೇಳೆ ಕೇರಳ - ಕರ್ನಾಟಕ ಗಡಿಯಾದ ತಲಪಾಡಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಆಂಬ್ಯುಲೆನ್ಸ್ ಗೆ ನಿರ್ಬಂಧ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಆ ಬಳಿಕ ಎರಡು ರಾಜ್ಯಗಳ ಇತರ ಮೂರು ರಸ್ತೆಗಳ ಮೂಲಕ ಮಂಗಳೂರಿಗೆ ಬರಲು ಪ್ರಯತ್ನಿಸಿದರೂ ಕರ್ನಾಟಕ ಪೊಲೀಸರು ಅವಕಾಶ ನೀಡಿಲ್ಲ. ಕೇರಳದ ಯಾವುದೇ ರೋಗಿಗಳು ನಮಗೆ ಬೇಡ ಎಂದು ಗಡಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ತಿಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಳಿಕ ಮಹಿಳೆಯನ್ನು ಉದ್ಯಾವರದ ಮೊಮ್ಮಗಳ ಮನೆಗೆ ವಾಪಸ್ ಕರೆದುಕೊಂಡು ಹೋಗಲಾಗಿದ್ದು ಇಂದು ಬೆಳಗ್ಗೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News