ದೇಶದ ಜನರಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ: ಪ್ರಧಾನಿ ಮೋದಿ

Update: 2020-03-29 16:53 GMT

 ಹೊಸದಿಲ್ಲಿ, ಮಾ.29: ಕೊರೋನ ವೈರಸ್ ಮಹಾಮಾರಿಯ ರಣಕೇಕೆಯನ್ನು ತಡೆಗಟ್ಟಲು ರಾಷ್ಟ್ರದಾದ್ಯಂತ 21 ದಿನಗಳ ಲಾಕ್‌ಡೌನ್ ಹೇರುವಂತಹ ಕಠಿಣ ನಿರ್ಧಾರವನ್ನು ತಳೆದಿದ್ದಕ್ಕಾಗಿ ತಾನು ದೇಶದ ಜನತೆಯ ಅದರಲ್ಲೂ ವಿಶೇಷವಾಗಿ ಬಡವರ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ. ಆದಾಗ್ಯೂ, ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಮಾರಕ ಕೊರೋನ ವೈರಸ್ ಸೋಂಕನ್ನು ತಡೆಗಟ್ಟಲುಇರುವ ಏಕೈಕ ಮಾರ್ಗ ಇದಾಗಿದೆ ಎಂದವರು ಹೇಳಿದ್ದಾರೆ.

   ‘‘ ದೇಶಾದ್ಯಂತ ಮೂರು ವಾರಗಳ ಲಾಕ್‌ಡೌನ್ ಘೋಷಿಸಿದ ನಾನೆಂತಹ ಪ್ರಧಾನಿ ಎಂದು ಜನರು ಅಚ್ಚರಿಪಡುತ್ತಿದ್ದಾರೆ. ಆದರೆ ಲಾಕ್‌ಡೌನ್ ಒಂದೇ ನಮ್ಮ ಮುಂದೆ ಇರುವ ಏಕೈಕ ಪರಿಹಾರವಾಗಿದೆ ಎಂದು ನರೇಂದ್ರ ಮೋದಿ ರವಿವಾರ ತನ್ನ ತಿಂಗಳ ರೇಡಿಯೋ ಭಾಷಣ ಮನ್ ಕೀ ಬಾತ್‌ನಲ್ಲಿ ತಿಳಿಸಿದ್ದಾರೆ.

  ‘‘ ನಿಮ್ಮ ಬದುಕಿನಲ್ಲಿ ಅದರಲ್ಲೂ ವಿಶೇಷವಾಗಿ ಬಡವರಿಗೆ ಅಪಾರ ಸಂಕಷ್ಟಗಳಿಗೆ ಕಾರಣವಾಗಿರುವ ಕಠಿಣವಾದ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆ ಯಾಚಿಸುತ್ತೇನೆ. ಇದಕ್ಕಾಗಿ ನಿಮ್ಮಲ್ಲಿ ಕೆಲವರು ನನ್ನ ಬಗ್ಗೆ ಕೋಪಗೊಂಡಿದ್ದೀರೆಂದು ನನಗೆ ತಿಳಿಸಿದೆ. ಆದರೆ ಈ ಯುದ್ಧವನ್ನು ಗೆಲ್ಲಲು ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿತ್ತು’’ ಎಂದರು.

ಲಾಕ್‌ಡೌನ್ ಕುರಿತಾದ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಯಾರು ಈ ಲಾಕ್‌ಡೌನ್ ಅನ್ನು ಉಲ್ಲಂಘಿಸುತ್ತಾರೋ ಅವರು ತಮ್ಮ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪ್ರಧಾನಿ ಎಚ್ಚರಿಕೆ ನೀಡಿದರು.

 ‘‘ನಾನ್ಯಾವ ರೀತಿಯ ಪ್ರಧಾನಿಯೆಂದು ಜನರು ಅಚ್ಚರಿಪಡುತ್ತಿರಬಹುದು. ಆದರೆ ಲಾಕ್‌ಡೌನ್ ಒಂದೇ ನಮ್ಮ ಮುಂದಿರುವ ಏಕೈಕ ಪರಿಹಾರವಾಗಿದೆ. ಹಲವಾರು ಜನರು ಈಗಲೂ ಲಾಕ್‌ಡೌನ್ ಉಲ್ಲಂಘಿಸುತ್ತಿರುವುಜು ವಿಷಾದಕರ” ಎಂದು ಪ್ರಧಾನಿ ಹೇಳಿದರು. ಇದೇ ತಪ್ಪಿನಿಂದಾಗಿ ಇಂದು ಜಗತ್ತಿನಲ್ಲಿ ಹಲವಾರು ಜನರು ಸಾವನ್ನಪ್ಪುತ್ತಿದ್ದಾರೆ’’ ಎಂದು ಮೋದಿ ಹೇಳಿದರು.

    ಕೊರೋನಾ ವೈರಸ್ ಹಾವಳಿ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ಘೋಷಿಸಿದ ಬಳಿಕ ಬಾರತಾದ್ಯಂತ ಸಾಮಾನ್ಯ ಜನಜೀವನ ಸ್ತಬ್ಧಗೊಂಡಿದೆ. ಎಲ್ಲಾ ಸಾರ್ವಜನಿಕ ಸಾರಿಗೆ ಸಂಪೂರ್ಣ ನಿಂತುಹೋಗಿದೆ. ಶಾಲಾ, ಕಾಲೇಜುಗಳು ಮುಚ್ಚುಗಡೆಗೊಂಡಿವೆ. ಮಾಲ್, ಮಾರುಕಟ್ಟೆಗಳು, ಜಿಮ್, ಜೀಜುಕೊಲಗಳು ಸಂಪೂರ್ಣ ಮುಚ್ಚಿವೆ.

ಮನ್ ಕಿ ಬಾತ್ ಹೈಲೈಟ್ಸ್

 *ಭಾರತವು ಒಗ್ಗಟ್ಟಿನಿಂದ ಕೋವಿಡ್-19 ಎದುರಿಸಲಿದೆ

*ಲಾಕ್‌ಡೌನ್ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿಡಲಿದೆ

*ಲಾಕ್‌ಡೌನ್ ಉಲ್ಲಂಘಿಸುವರಿಗೆ ಕೊರೋನ ವೈರಸ್‌ನ ಅಪಾಯದಿಂದ ತಮ್ಮನ್ನು ರಕ್ಷಿಸುವುದು ಕಷ್ಟಕರವಾಗಲಿದೆ.

* ಕೊರೋನ ವೈರಸ್ ಇಡೀ ಜಗತ್ತನ್ನು ಬಂಧಿಯಾಗಿಸಿ ಬಿಟ್ಟಿದೆ. ಈ ವೈರಸ್ ಜ್ಞಾನ, ವಿಜ್ಞಾನ, ಬಡವರು, ಶ್ರೀಮಂತರು, ದುರ್ಬಲರು, ಬಲಾಢ್ಯರು ಹೀಗೆ ಪ್ರತಿಯೊಬ್ಬರಿಗೂ ಸವಾಲೊಡ್ಡುತ್ತಿದೆ.

*ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೆಂದರೆ ಭಾವಾನಾತ್ಮಕವಾಗಿ ದೂರವಿರುವುದು ಎಂದು ಅರ್ಥವಲ್ಲ.

‘‘ಕೊರೋನ ವೈರಸ್ ವಿರುದ್ಧ ಹೋರಾಡುತ್ತಿರುವ ಅನೇಕ ‘ಯೋಧರು’ ಹೋರಾಡುತ್ತಿದ್ದಾರೆ. ವಿಶೇಷವಾಗಿ ನಮ್ಮ ಸಹೋದರ, ಸಹೋದರಿಯರಾದ ನರ್ಸ್‌ಗಳು, ವೈದ್ಯರು ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿ ಈ ಸಮರದ ಮುಂಚೂಣಿಯಲ್ಲಿರುವ ಯೋಧರಾಗಿದ್ದಾರೆ.’’

ನರೇಂದ್ರ ಮೋದಿ,ಪ್ರಧಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News