ಕಾರ್ಮಿಕರ ವಲಸೆ ತಡೆಯಲು ಗಡಿಗಳನ್ನು ಸೀಲ್ ಮಾಡಿ: ರಾಜ್ಯ ಸರಕಾರಗಳಿಗೆ ಕೇಂದ್ರ ಸೂಚನೆ

Update: 2020-03-29 16:20 GMT

 ಹೊಸದಿಲ್ಲಿ, ಮಾ.29: ಕೊರೋನ ವೈರಸ್ ಅಟ್ಟಹಾಸ ತಡೆಯಲು ಹಿನ್ನೆಲೆಯಲ್ಲಿ ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್ ಕಳೆದ ಕೆಲವು ದಿನಗಳಿಂದ ಹಳಿ ತಪ್ಪುವುದನ್ನು ತಡೆಯಲು ರಾಜ್ಯಗಳು ತಮ್ಮ ಗಡಿಗಳನ್ನು ಬಂದ್ ಮಾಡಬೇಕೆಂದು ಕೇಂದ್ರ ಸರಕಾರವು ರವಿವಾರ ಆದೇಶಿಸಿದೆ.

 ಐದು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಲಾಕ್‌ಡೌನ್ ಘೋಷಿಸಿದ ಬಳಿಕ ಆಹಾರ ಹಾಗೂ ದುಡಿಮೆಯಿಲ್ಲದೆ ಸಾವಿರಾರು ದಿನಗೂಲಿ ಕಾರ್ಮಿಕರು ರಾಜಧಾನಿ ದಿಲ್ಲಿ ಸೇರಿದಂತೆ ದೇಶದ ಬೃಹತ್ ನಗರಗಳಿಂದ ತಮ್ಮ ಹಳ್ಳಿಗಳಿಗೆ ವಲಸೆ ಹೋಗುತ್ತಿದ್ದಾರೆ.

 ಕೋವಿಡ್-19 ಹರಡದಂತೆ ತಡೆಯಲು ಜನತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಸರಕಾರದ ಪ್ರಯತ್ನಗಳ ಹೊರತಾಗಿಯೂ, ತಮ್ಮ ಊರುಗಳನ್ನು ಸೇರುವುದಕ್ಕಾಗಿ ಬಸ್‌ಗಳನ್ನು ಹಿಡಿಯಲು ಸಹಸ್ರಾರ ವಲಸಿಗ ಕಾರ್ಮಿಕರು ಟರ್ಮಿನಸ್‌ಗಳಲ್ಲಿ ಜಮಾಯಿಸುತ್ತಿದ್ದಾರೆ. ಭಾರೀ ಸಂಖ್ಯೆಯ ಕೂಲಿಕಾರ್ಮಿಕರು ತಮ್ಮ ಹಳ್ಳಿಗಳನ್ನು ಸೇರಲು ಬಸ್‌ಗಳ ಮಹಡಿಯ ಮೇಲೂ ಕುಳಿತುಕೊಳ್ಳುತ್ತಿದ್ದಾರೆ. ಈ ಮಧ್ಯೆ ವಲಸಿಗ ಕಾರ್ಮಿಕರನ್ನು ಜಾಗಖಾಲಿ ಮಾಡುವಂತೆ ಬಲವಂತ ಪಡಿಸುವ ಮನೆಮಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಸೂಚಿಸಿದೆ.ವಲಸಿಗ ಕಾರ್ಮಿಕರು ಸೇರಿದಂತೆ ಅವಶ್ಯಕತೆಯಿರುವವರಿಗೆ ಆಹಾರ ಹಾಗೂ ವಸತಿಯನ್ನು ನೀಡುವಂತೆಯೂ ಅದು ನಿರ್ದೇಶನ ನೀಡಿದೆ. ಇದ ಕ್ಕಾಗಿ ರಾಜ್ಯಗಳಿಗೆ ಸಾಕಷ್ಟು ಹಣಕಾಸು ನಿಧಿಯು ಲಭ್ಯವಿರುವಂತೆ ನೋಡಿ ಕೊಳ್ಳಲಾಗುವುದೆಂದು ಅದು ಹೇಳಿದೆ.

     ದಿಲ್ಲಿ ಸಹಿತ ಮಹಾನಗರಗಳಿಂದ ತಮ್ಮ ಗಡಿಗಳಿಗೆ ಆಗಮಿಸುತ್ತಿರುವ ಬಸ್ಸುಗಳನ್ನು ತಡೆಯುವಂತೆಯೂ ರಾಜ್ಯಗಳಿಗೆ ಕೇಂದ್ರ ಆದೇಶ ನೀಡಿದೆ ಮತ್ತು ಗುಳೇ ಹೋಗುತ್ತಿರುವ ವಲಸಿಗ ಕಾರ್ಮಿಕರನ್ನು 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸುವಂತೆ ಅದು ಸೂಚಿಸಿದೆ. ಈ ಅವಧಿಯಲ್ಲಿ ಅವರಿಗೆ ಆಹಾರ ಮತ್ತಿತರ ಅತ್ಯಗತ್ಯ ವಸ್ತುಗಳು ದೊರೆಯುವಂತೆ ಮಾಡಲಾಗುವುದೆಂದು ಕೇಂದ್ರ ಸರಕಾರ ಇಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.

ಕೊರೋನಾ ವೈರಸ್‌ನ ಹರಡುವಿಕೆಯನ್ನು ತಡೆಯಲು ಮೂರು ವಾರಗಳ ಭಾರತ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಪ್ರತಿಯೊಬ್ಬರ ಹಿತ ದೃಷ್ಟಿಯಿಂದಲೂ ಅಗತ್ಯವೆಂದು ರಾಜ್ಯ ಸರಕಾರಗಳಿಗೆ ಸುತ್ತೋಲೆಯಲ್ಲಿ ಮನವರಿಕೆ ಮಾಡಲಾಗಿದೆ.

ಉ.ಪ್ರ.ಕ್ಕೆ ವಾಪಸಾದ 1.5 ಲಕ್ಷ ವಲಸಿಗರ ಪತ್ತೆಗೆ ಆದಿತ್ಯನಾಥ್‌ಆದೇಶ

 ಈ ಮಧ್ಯೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರವು ಕಳೆದ ಕೆಲವು ದಿನಗಳಿಂದ ರಾಜ್ಯಕ್ಕೆ ವಾಪಾಸಾಗಿರುವ 1.5 ಲಕ್ಷ ವಲಸಿಗರನ್ನು ಪತ್ತೆಹಟ್ಚುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟರುಗಳಿಗೆ ಸೂಚನೆನೀಡಿದೆ.

ರಾಷ್ಟ್ರರಾಜಧಾನಿಯನ್ನು ತೊರೆಯದಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡಾ ವಲಸಿಗ ಕಾರ್ಮಿಕರಿಗೆ ಮನವಿ ಮಾಡಿದ್ದಾರೆ. ವಲಸಿಗ ಕಾರ್ಮಿಕರಿಗೆ ಆಹಾರ ಹಾಗೂ ಉಳಕೊಳ್ಳುವ ವ್ಯವಸ್ಥೆ ಮಾಡಿಕೊಂಡುವುದಾಗಿ ಅವರು ಭರವಸೆ ನೀಡಿದ್ದಾರೆ.

ವಲಸಿಗ ಕಾರ್ಮಿಕರಿಗೆ 14 ದಿನಗಳ ಕ್ವಾರಂಟೈನ್

ಭಾರತಾದ್ಯಂತ ಲಾಕ್‌ಡೌನ್ ಹೇರಲಾಗಿರುವುದರಿಂದ ದುಡಿಮೆಯಿಲ್ಲದೆ ಕಂಗಾಲಾಗಿರುವ ಸಾವಿರಾರು ವಲಸಿಗ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ತೆರಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರವು ಲಾಕ್‌ಡೌನ್ ಅವಧಿಯಲ್ಲಿ ಪ್ರಯಾಣಿಸಿದವರನ್ನು ಸರಕಾರದ ದಿಗ್ಬಂಧನ ಕೇಂದ್ರಗಳಲ್ಲಿ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ಕೇಂದ್ರ ಸರಕಾರ ರವಿವಾರ ತಿಳಿಸಿದೆ. ಈ ಅವಧಿಯಲ್ಲಿ ಇಂತಹ ವ್ಯಕ್ತಿಗಳ ಮೇಲೆ ನಿಕಟವಾದ ಕಣ್ಗಾವಲಿರಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News