"ನಾನು ಲಾಕ್ ಡೌನ್ ಉಲ್ಲಂಘಿಸಿದ್ದೇನೆ, ನನ್ನಿಂದ ದೂರವಿರಿ" ಎಂದು ಕಾರ್ಮಿಕನ ಹಣೆಗೆ ಬರೆದ ಪೊಲೀಸ್ ಅಧಿಕಾರಿ !

Update: 2020-03-29 11:24 GMT

ಕೊರೋನ ನಿಯಂತ್ರಣಕ್ಕಾಗಿ ದೇಶಾದ್ಯಂತ ಘೋಷಿಸಿರುವ ಲಾಕ್ ಡೌನ್ ನಿಂದ ಕಂಗೆಟ್ಟು ಮನೆಗೆ ಕಾಲ್ನಡಿಗೆಯಲ್ಲೇ ಹೊರಟಿರುವ ವಲಸಿಗ ಕಾರ್ಮಿಕರ ಮೇಲೆ ಅಲ್ಲಲ್ಲಿ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ಪ್ರಕರಣಗಳ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಮಧ್ಯೆ ಮಧ್ಯಪ್ರದೇಶ ಪೊಲೀಸ್ ಅಧಿಕಾರಿಯೊಬ್ಬರು ವಲಸಿಗ ಕಾರ್ಮಿಕನೊಬ್ಬನ ಹಣೆಯಲ್ಲಿ " ನಾನು ಲಾಕ್ ಡೌನ್ ಉಲ್ಲಂಘಿಸಿದ್ದೇನೆ, ನನ್ನಿಂದ ದೂರವಿರಿ" ಎಂದು ಬರೆದಿರುವ ಅಮಾನವೀಯ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದಿಂದ ರಾಜ್ಯಕ್ಕೆ ಮರಳಿದ ಮೂವರು ಕಾರ್ಮಿಕರನ್ನು ಸ್ಥಳೀಯ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಹೋಗುವಂತೆ ಪೊಲೀಸರು ಹೇಳಿದ್ದರು. ಹಾಗೆ ವೈದ್ಯರನ್ನು ಕಾಯುತ್ತಾ ಕುಳಿತಿದ್ದ ಈ ಕಾರ್ಮಿಕರ ಮೇಲೆ ಹಿರಿಯ ಇನ್ಸ್ ಪೆಕ್ಟರ್ ಒಬ್ಬರು ಹರಿಹಾಯ್ದು ಅವರ ಹಣೆಯ ಮೇಲೆ ಹೀಗೆ ಬರೆದಿದ್ದಾರೆ. ಇಲ್ಲಿನ ಛತ್ತರ್ಪುರ್ ಜಿಲ್ಲೆಯ ಗೌರಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಛತ್ತರ್ಪುರ್ ಎಸ್ಪಿ ಕುಮಾರ್ ಸೌರಭ್ ಅವರು ಪೊಲೀಸರು ಜನರೊಂದಿಗೆ ಹೀಗೆ ವ್ಯವಹರಿಸಬಾರದು ಎಂದು ಸೂಚಿಸಲಾಗಿದೆ. ಆ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ದೇಶಾದ್ಯಂತ ಲಕ್ಷಾಂತರ ಕಾರ್ಮಿಕರು ಹೀಗೆ ಪಟ್ಟಣಗಳಿಂದ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲೇ ತೆರಳುತ್ತಿರುವ ಹಾಗು ಈ ಸಂದರ್ಭದಲ್ಲಿ ಅವರು ಎದುರಿಸುತ್ತಿರುವ ಸಂಕಟಗಳು ಹಾಗು ಸವಾಲುಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೆಲವೆಡೆ ಈ ವಲಸಿಗರೊಂದಿಗೆ ಪೊಲೀಸರು ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿರುವ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿವೆ. ಕೆಲವೇ ಕೆಲವೆಡೆ ಪೊಲೀಸರು ಇಂತಹ ವಲಸಿಗರಿಗೆ ನೆರವಾಗುತ್ತಿರುವ ನಿದರ್ಶನಗಳೂ ಕಂಡು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News