ಸೋಮವಾರವೂ ದ.ಕ. ಜಿಲ್ಲೆ ಬಂದ್ : ಸಚಿವ ಕೋಟ

Update: 2020-03-29 17:12 GMT

ಮಂಗಳೂರು, ಮಾ.29: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ನಡೆಯುತ್ತಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮಾ.30ರಂದು ಸಂಪೂರ್ಣ ಬಂದ್ ನಡೆಸಲಾಗುವುದು. ಮಾ.31ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 3 ಗಂಟೆಯ ತನಕ ದಿನಸಿ ಅಂಗಡಿಗಳು ತೆರೆದಿರಲಿವೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು ಬಂದ್‌ನಿಂದ ಕೊರೋನ ವೈರಸ್ ಕುರಿತಾದ ವರದಿಯು ಯಾವ ರೀತಿ ಬರಲಿದೆ ಎಂಬುದನ್ನು ಆಧರಿಸಿ ಮುಂದಿನ ದಿನಗಳಲ್ಲಿ ಬಂದ್ ಮುಂದುವರಿಸುವ ಅಥವಾ ವಾಪಸ್ ಪಡೆಯುವ ಬಗ್ಗೆ ನಿರ್ಧರಿಸಲಾಗುವುದು. ಬಂದ್ ಸಂದರ್ಭ ಎಂದಿನಂತೆ ಪತ್ರಿಕೆ, ಹಾಲು, ಪೆಟ್ರೋಲ್ ಮತ್ತು ಔಷಧ ವಿತರಣೆಗೆ ಯಾವುದೇ ಅಡ್ಡಿ ಇಲ್ಲ. ಆದರೆ ಅಲ್ಲೂ ಕೂಡ ‘ಸಾಮಾಜಿಕ ಅಂತರ’ ಕಾಯ್ದುಕೊಳ್ಳುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಾ.31ರಂದು ಆಹಾರ ಸಾಮಗ್ರಿಗಳನ್ನು ಖರೀದಿಸಲು ಒಂದು ಮನೆಯಿಂದ ಕುಟುಂಬದ ಒಬ್ಬ ಸದಸ್ಯ ಮಾತ್ರ ಅಂಗಡಿಗೆ ತೆರಳಬೇಕು. ರೋಗ ಹರಡುವುದನ್ನು ತಡೆಗಟ್ಟಲು ಇಂತಹ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದರು.

ಯಾವುದೇ ದಿನಸಿ ಮತ್ತು ತರಕಾರಿ ಅಂಗಡಿಯವರು ನಿಗದಿತ ದರಕ್ಕಿಂತ ಹೆಚ್ಚು ದರಕ್ಕೆ ವಸ್ತುಗಳನ್ನು ಮಾರಾಟ ಮಾಡಬಾರದು. ಒಂದು ವೇಳೆ ಆ ಬಗ್ಗೆ ದೂರು ಬಂದಲ್ಲಿ ಅಂಗಡಿ ಪರವಾನಗಿಯನ್ನು ರದ್ದುಪಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಡಿತರ ವಿತರಣೆ: ಬಿಪಿಎಲ್ ಪಡಿತರದಾರರಿಗೆ ಎಪ್ರಿಲ್ 2ರಿಂದ ಬೆಳಗ್ಗೆ 7 ಗಂಟೆಯಿಂದ ರಾತ್ರಿ 8ರ ತನಕ ನ್ಯಾಯಬೆಲೆ ಅಂಗಡಿಗಳಲ್ಲಿ ಎರಡು (ಎಪ್ರಿಲ್/ಮೇ) ತಿಂಗಳ ಪಡಿತರ ಸಾಮಗ್ರಿ ವಿತರಿಸಲು ಸೂಚನೆ ನೀಡಲಾಗಿದೆ. ಬಿಪಿಎಲ್ ಪಡಿತರ ಚೀಟಿದಾರರು ಒಟಿಪಿ ತೋರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ಯಾನಿಟೈಸರ್, ಹ್ಯಾಂಡ್ ವಾಶ್ ಬಳಕೆ ಮಾಡಿಕೊಂಡು ಪಡಿತರ ಸಾಮಗ್ರಿಗಳನ್ನು ಕೊಂಡು ಹೋಗಬಹುದು ಎಂದರು.

ನಿರಾಶ್ರಿತರಿಗೆ ಸರಕಾರದಿಂದಲೇ ಆಹಾರ ಪೂರೈಕೆ: ನಗರದಲ್ಲಿ ಭಿಕ್ಷುಕರು, ಅನಾಥರು, ನಿರಾಶ್ರಿತರು ಮತ್ತು ದೂರದ ಪ್ರದೇಶದಿಂದ ಬಂದು ನೆಲೆಸಿರುವವರಿಗೆ ಎನ್‌ಜಿಒ ಸಹಿತ ಯಾವುದೇ ಸಂಘ ಸಂಸ್ಥೆಗಳು ಆಹಾರ ವಿತರಿಸುವಂತಿಲ್ಲ. ಅವರಿಗೆಲ್ಲಾ ‘ಎ’ ದರ್ಜೆಯ ದೇವಸ್ಥಾನ ಮತ್ತು ಇಂದಿರಾ ಕ್ಯಾಂಟೀನ್ ಮೂಲಕ ಸರಕಾರವೇ ಆಹಾರ ವಿತರಣೆ ಮಾಡಲಿದೆ ಎಂದು ಸಚಿವ ಕೋಟ ಹೇಳಿದರು.

ನಗರದ ನೆಹರೂ ಮೈದಾನ ಸುತ್ತಮುತ್ತವಿದ್ದ ಸುಮಾರು 1500ಕ್ಕೂ ಅಧಿಕ ನಿರಾಶ್ರಿತರನ್ನು ಪುರಭವನದ ಮಿನಿ ಹಾಲ್, ನಂತೂರು, ಅಶೋಕನಗರ ಮತ್ತು ಉರ್ವದ ವಿದ್ಯಾರ್ಥಿ ನಿಲಯಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಅವರಿಗೆ ಅಲ್ಲೇ ಅಹಾರ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಎನ್‌ಜಿಒಗಳಲ್ಲಿ ಸಾರ್ವಜನಿಕರವಾಗಿ ಸ್ಪರ್ಧೆ ಬೇಡ ಮತ್ತು ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸರಕಾರದಿಂದಲೇ ಆಹಾರ ಪೂರೈಕೆ ಮಾಡಲು ನಿರ್ಧರಿಸಲಾಗಿದೆ. ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಪಾಸ್ ವಾಪಸ್: ತುರ್ತು ಸೇವೆಯಲ್ಲಿ ತೊಡಗಿಸಿಕೊಂಡ ಕೆಲವು ಸಂಘಟನೆಗಳಿಗೆ ಜಿಲ್ಲಾಡಳಿತವು ಪಾಸ್ ನೀಡಿತ್ತು. ಸಂಘಟನೆಗಳ ಮಧ್ಯೆ ‘ಪಾಸ್’ ಪೈಪೋಟಿಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಪಾಸ್‌ಗಳನ್ನು ವಾಪಸ್ ಪಡೆಯಲಾಗಿದೆ. ಸೋಮವಾರದಿಂದ ಅರ್ಹರಿಗೆ ಸರಕಾರದಿಂದಲೇ ಆಹಾರ ಪೂರೈಕೆ ಮಾಡಲಾಗುವುದು ಎಂದು ಕೋಟ ತಿಳಿಸಿದರು.

ವಿಶೇಶ ತಂಡ ರಚನೆ: ಗ್ರಾಮಾಂತರ ಪ್ರದೇಶದಲ್ಲಿ ನಿರಾಶ್ರಿತರು, ವಲಸೆ ಕಾರ್ಮಿಕರು ಆಹಾರವಿಲ್ಲದೆ ತೊಂದರೆಗೀಡಾಗಿದ್ದರೆ ಅಂತಹವರನ್ನು ಪತ್ತೆ ಹಚ್ಚಲು ಪಿಡಿಒ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಅವರು ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದರೆ ಅವರಿಗೂ ಆಹಾರ ವಿತರಿಸಲು ಕ್ರಮ ಜರುಗಿಸಲಾಗುವುದು ಎಂದರು.

ವೆನ್ಲಾಕ್ ಆಸ್ಪತ್ರೆಯಿಂದ ರೋಗಿಗಳ ಸ್ಥ್ಥಳಾಂತರ: ವೆನ್ಲಾಕ್ ಆಸ್ಪತ್ರೆಯನ್ನು ‘ಕೊರೋನ ’ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಅಲ್ಲಿದ್ದ ಇತರ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಮುಗಿದಿದೆ ಎಂದು ಸಚಿವ ಕೋಟ ತಿಳಿಸಿದರು.

ತಲಪಾಡಿ ಗಡಿ ಬಂದ್: ತಲಪಾಡಿಯಿಂದ ಕಾಸರಗೋಡಿನ ಯಾವುದೇ ಅಂತಾರಾಜ್ಯ ವಾಹನವು ದ.ಕ. ಜಿಲ್ಲೆಯನ್ನು ಪ್ರವೇಶಿಸದಂತೆ ಬಂದ್ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯ ಜೊತೆ ಮಾತುಕತೆ ನಡೆಸಲಾಗಿದೆ. ಆ್ಯಂಬುಲೆನ್ಸ್ ಸಹಿತ ಯಾವುದೇ ವಾಹವನ್ನೂ ಜಿಲ್ಲೆಗೆ ಬಿಡದಂತೆ ಸೂಚನೆ ನೀಡಲಾಗಿದೆ. ಕೇಂದ್ರ ಸರಕಾರ ಅಥವಾ ಕೇಂದ್ರ ಸಚಿವರು ಕೂಡಾ ವಾಹನ ಬಿಡುವಂತೆ ಸೂಚನೆ ನೀಡಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ವಾರ್ ರೂಂ ಯಶಸ್ವಿ: ದ.ಕ.ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಂಸದರ ಕಚೇರಿಯಲ್ಲಿ ತೆರೆದಿರುವ ‘ವಾರ್ ರೂಂ’ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಬೆಳಗ್ಗೆ 7ರಿಂದ ರಾತ್ರಿ 10 ಗಂಟೆಯ ತನಕ ದೂರು ಸ್ವೀಕರಿಸಿ, ಪರಿಹಾರ ಮಾಡುತ್ತಿದ್ದೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಕರೆ ಮಾಡಿದವರಿಗೆ ಊಟದ ವ್ಯವಸ್ಥೆ, ಆರ್ಥಿಕವಾಗಿ ಹಿಂದುಳಿದವರಿಗೆ 1 ತಿಂಗಳ ಆಹಾರ ಸಾಮಗ್ರಿ ವಿತರಣೆ, ಅನಾರೋಗ್ಯ ಇದ್ದವರಿಗೆ ಔಷಧ ಮತ್ತು ಆ್ಯಂಬುಲೆನ್ಸ್, ಮೃತರ ಶವ ಸಂಸ್ಕಾರಕ್ಕೆ ನೆರವು ನೀಡಲು ಈ ವಾರ್ ರೂಂ ತೆರೆಯಲಾಗಿದೆ. ಇದು ಮಾಹಿತಿ ಕೇಂದ್ರವಾಗಿಯೂ ಕಾರ್ಯಾಚರಿಸುತ್ತಿದೆ. ಈವರೆಗೆ 3,200 ಮಂದಿಗೆ ಊಟ, 1,120 ಮಂದಿಗೆ ಆಹಾರ ವಸ್ತುಗಳ ಕಿಟ್, 110 ಮಂದಿಗೆ ಆ್ಯಂಬುಲೆನ್ಸ್, 28 ಮಂದಿಗೆ ಔಷಧ ಮತ್ತು 44 ಮಂದಿಗೆ ಇತರ ಸೇವೆಗಳನ್ನು ಕಲ್ಪಿಸಲಾಗಿದೆ ಎಂದರು.

ಮನೆ ಮನೆ ದಿನಸಿ ಆರಂಭಿಸಿಲ್ಲ: ನಗರದ ಸುಮಾರು 400 ವರ್ತಕರ ಸಭೆಯನ್ನು ಕರೆದು ನಗರ ಪ್ರದೇಶದ ಮನೆ ಮನೆಗೆ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡುವ ಬಗ್ಗೆ ಚರ್ಚೆ ಮಾಡಲಾಗಿತ್ತು. ಆದರೆ ಅದಿನ್ನೂ ಅಂತಿಮವಾಗಿಲ್ಲ. ಗ್ರಾಹಕರು ಆನ್‌ಲೈನ್ ಮೂಲಕ ಆರ್ಡರ್ ನೀಡಿದರೆ ವರ್ತಕರು ಆಹಾರ ಸಾಮಗ್ರಿಗಳನ್ನು ಪೂರೈಸಲು ಒಪ್ಪಿಗೆ ನೀಡಿದ್ದಾರೆ. ಆನ್‌ಲೈನ್ ಮೂಲಕ ಸಂಪರ್ಕಿಸಲು ಸಾಧ್ಯವಿಲ್ಲ ದವರು ಜಿಲ್ಲಾಡಳಿತದ ಸಹಾಯವಾಣಿ 1077ಕ್ಕೆ ಕರೆ ಮಾಡಬಹುದು. ಏನಿದ್ದರೂ ಸೋಮವಾರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದು ಕೊಳ್ಳಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News