ಉಡುಪಿ ಜಿಲ್ಲೆಯ ಮತ್ತಿಬ್ಬರಲ್ಲಿ ಕೊರೋನ ಸೋಂಕು ಪತ್ತೆ
ಉಡುಪಿ, ಮಾ. 29:ಉಡುಪಿ ಜಿಲ್ಲೆಯ ಇನ್ನಿಬ್ಬರು ಯುವಕರಲ್ಲಿ ರವಿವಾರ ನೋವೆಲ್ ಕೊರೋನ ವೈರಸ್‌ನ ಸೋಂಕು ಇರುವುದು ಪತ್ತೆಯಾಗಿದೆ. ಉಡುಪಿಯ ಆಸುಪಾಸಿನವರಾದ ಈ ಇಬ್ಬರಲ್ಲಿ ಒಬ್ಬ 29 ವರ್ಷ ಪ್ರಾಯದ ಯುವಕನಾಗಿದ್ದು, ಇನ್ನೊಬ್ಬ 35ರ ಹರೆಯದ ಯುವಕ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಮೂವರಲ್ಲಿ ಮಾರಕ ಕೊರೋನ ವೈರಸ್‌ನ ಸೋಂಕು ಪತ್ತೆಯಾದಂತಾಗಿದೆ. ಕಳೆದ ಮಾ.25ರಂದು ದುಬೈಗೆ ಪ್ರವಾಸಕ್ಕೆ ಹೋಗಿ ಮರಳಿದ್ದ ಮಣಿಪಾಲದ 34ರ ಹರೆಯದ ಯುವಕನಲ್ಲಿ ಸೋಂಕು ಪತ್ತೆಯಾಗಿತ್ತು.
ಇಂದು ಸೋಂಕು ಪತ್ತೆಯಾದ 35ರ ಹರೆಯದ ಯುವಕ ಮಾ.17ರಂದು ದುಬೈಯಿಂದ ಆಗಮಿಸಿದ್ದು, ಮಾ.27ರಂದು ಕಾರ್ಕಳದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ. ಇನ್ನೊಬ್ಬ ಯುವಕ ಜಿಲ್ಲಾಸ್ಪತ್ರೆಯಲ್ಲಿ ಸೋಂಕಿನ ಪರೀಕ್ಷೆಗೆ ದಾಖಲಾಗಿದ್ದ. ಈತ ತನ್ನ ಉದ್ಯೋಗದ ನಿಮಿತ್ತ ತಂಡದೊಂದಿಗೆ ಕೇರಳಕ್ಕೆ ತೆರಳಿದ್ದು, ಮಾ.24ರಂದು ನೇರವಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಈ ಇಬ್ಬರು ಯುವಕರ ಗಂಟಲು ದ್ರವದ ಸ್ಯಾಂಪಲ್‌ಗಳ ಪರೀಕ್ಷಾ ವರದಿ ಇಂದು ಬಂದಿದ್ದು, ಇಬ್ಬರಲ್ಲೂ ಸೋಂಕು ಪತ್ತೆಯಾಗಿದೆ ಎಂದು ಡಾ.ಸೂಡ ತಿಳಿಸಿದರು.
29ರ ಹರೆಯದ ಯುವಕ ಇಲೆಕ್ಟ್ರಿಷಿಯನ್ ಕೆಲಸ ಮಾಡುತಿದ್ದು, ತಂಡದೊಂದಿಗೆ ಕೇರಳಕ್ಕೆ ತೆರಳಿ ಮರಳಿ ಬರುವಾಗ ತಲಪಾಡಿಯ ಕೇರಳ-ಕರ್ನಾಟಕ ಗಡಿಯಲ್ಲಿ ತಪಾಸಣೆಗೊಳಗಾಗಿ ಇಡೀ ತಂಡದೊಂದಿಗೆ ನೇರವಾಗಿ ಪೊಲೀಸರ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಕ್ವಾರಂಟೇನ್ ನಲ್ಲಿದ್ದ ಎಂದು ತಿಳಿದುಬಂದಿದೆ. ಮಾ.27ರಂದು ಆತನಲ್ಲಿ ಕೊರೋನದ ಲಕ್ಷಣ ಕಂಡುಬಂದಿದ್ದರಿಂದ ಮಾದರಿಯನ್ನು ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು.
ಇದೀಗ ಇಬ್ಬರು ಯುವಕರನ್ನು ಕೋವಿಡ್-19 ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ರವಿವಾರ ಇಬ್ಬರು ದಾಖಲು: ಶಂಕಿತ ಕೊರೋನ ವೈರಸ್ ಸೋಂಕಿನ ಪರೀಕ್ಷೆಗಾಗಿ ಆಸ್ಪತ್ರೆಯ ಐಸೋಲೇಷನ್‌ಗೆ ಇಂದು ಇಬ್ಬರು ದಾಖಲಾಗಿದ್ದಾರೆ ಎಂದು ಡಿಎಚ್‌ಓ ತಿಳಿಸಿದ್ದಾರೆ. ಈ ಮೂಲಕ ಈ ತನಕ ಒಟ್ಟು 128 ಮಂದಿಯ ಗಂಟಲು ದ್ರವದ ಮಾದರಿಯನ್ನು ಶಂಕಿತ ಕೊರೋನ ಸೋಂಕಿನ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಇವರಲ್ಲಿ 125 ಮಂದಿಯ ವರದಿ ಇಂದು ಸಂಜೆಯವರೆಗೆ ಬಂದಿದೆ. ಇವರಲ್ಲಿ ಮೂವರಲ್ಲಿ ಮಾತ್ರ ಸೋಂಕು ಕಂಡುಬಂದಿದ್ದು, ಉಳಿದ 122 ಮಂದಿಯ ಮಾದರಿ ಸೋಂಕಿಗೆ ನೆಗೆಟಿವ್ ಆಗಿದೆ. ಇನ್ನು ಮೂವರ ವರದಿ ಬರಲು ಬಾಕಿ ಇದೆ ಎಂದು ಡಾ.ಸೂಡ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಂದುವರೆಗೆ ಒಟ್ಟು 1,992 ಮಂದಿಯನ್ನು ತಪಾಸಣೆಗೊಳ ಪಡಿಸಿದ್ದು, ರವಿವಾರ 106 ಮಂದಿ ಮನೆ ನಿಗಾಕ್ಕೆ ನೋಂದಣಿ ಗೊಂಡಿದ್ದಾರೆ. ಈವರೆಗೆ 842 ಮಂದಿ 14 ದಿನಗಳ ಮನೆ ನಿಗಾ ಪೂರೈಸಿದ್ದರೆ, 95 ಮಂದಿ 28 ದಿನಗಳ ಮನೆ ನಿಗಾ ಪೂರೈಸಿದ್ದಾರೆ. 30 ಮಂದಿ ಆಸ್ಪತ್ರೆಯ ಕ್ವಾರಂಟೇನ್‌ಗೆ ದಾಖಲಾಗಿದ್ದಾರೆ ಎಂದವರು ವಿವರಿಸಿದರು. ಜಿಲ್ಲೆಯಲ್ಲಿ ಇದುವರೆಗೆ 970 ಮಂದಿ ಮನೆ ಹಾಗೂ ಆಸ್ಪತ್ರೆಗಳಲ್ಲಿ ನಿಗಾದಲ್ಲಿ ಇದ್ದಾರೆ.
500 ಬೆಡ್‌ಗಳ ಕ್ವಾರಂಟೇನ್ ಆಸ್ಪತ್ರೆ: ಬೊಮ್ಮಾಯಿ
ಮುಂಬರುವ ದಿನಗಳಲ್ಲಿ ಉಡುಪಿಯಲ್ಲಿ 500 ಬೆಡ್‌ಗಳ ಕ್ವಾರಂಟೇನ್ ಬ್ಲಾಕ್ (ಆಸ್ಪತ್ರೆ)ಯನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಜಿಲ್ಲೆಯ ಇಬ್ಬರು ಯುವಕರಲ್ಲಿ ಇಂದು ಕೊರೋನ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಇದನ್ನು ಎದುರಿಸಲು ಸರಕಾರ ಕೈಗೊಂಡಿರುವ ಕ್ರಮದ ಕುರಿತು ವಿಡಿಯೋ ಸಂದೇಶವೊಂದರಲ್ಲಿ ವಿವರಿಸಿದ ಅವರು, ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ ಎಂದು ತಿಳಿಸಿದರು.
ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯನ್ನು 100 ಬೆಡ್‌ಗಳ ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಅದೇ ರೀತಿ ಉದ್ಯಾವರದ ಎಸ್‌ಡಿಎಂ ಆಸ್ಪತ್ರೆಯನ್ನು 150 ಐಸೋಲೇಟೆಡ್ ಬೆಡ್‌ಗಳ ಆಸ್ಪತ್ರೆಯಾಗಿ ಸಜ್ಜುಗೊಳಿಸ ಲಾಗಿದೆ. ಪ್ರತಿ ತಾಲೂಕಿನಲ್ಲೂ 20 ಐಸೋಲೇಟೆಡ್ ಬೆಡ್‌ಗಳನ್ನು ಕಾದಿರಿಸಲಾಗಿದೆ. ಯಾರೇ ಬಂದರೂ ಅವರನ್ನು ಕ್ವಾರಂಟೇನ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಸಿಬ್ಬಂದಿಗಳಿಗೂ ಬೇಕಾದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದವರು ವಿವರಿಸಿದರು.
ಕೊರೋನ ವೈರಸ್‌ನ್ನು ಅತ್ಯಂತ ಶಿಸ್ತು ಮತ್ತು ಸಂಯಮದಿಂದ ಎದುರಿಸುತ್ತಿ ರುವ ಒಂದು ಜಿಲ್ಲೆ ಇದ್ದರೆ ಅದು ಉಡುಪಿ ಜಿಲ್ಲೆ. ಇದು ಸುಶಿಕ್ಷಿತರ ಜಿಲ್ಲೆ. ಇಲ್ಲಿನ ಜನತೆ ಜವಾಬ್ದಾರಿಯುತವಾಗಿ ಸ್ಥಿತಪ್ರಜ್ಞೆ ಇರುವವರು. ಕೊರೋನ ವೈರಸ್ ವಿರುದ್ಧ ಇಲ್ಲಿ ಅತ್ಯಂತ ಶಿಸ್ತು, ಸಂಯಮದಿಂದ ಎದುರಿಸಲಾಗುತ್ತಿದೆ. ಜಿಲ್ಲಾಧಿಕಾರಿ, ಜಿಲ್ಲಾಡಳಿತ ಹಾಗೂ ಶಾಸಕರ ಸಹಕಾರದಿಂದ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಪ್ರತಿ ದಿನ ತಾನು ಮಾಹಿತಿಗಳನ್ನು ಪಡೆದು, ಸೂಚನೆಗಳನ್ನು ನೀಡುತ್ತಿರುವುದಾಗಿ ಅವರು ಹೇಳಿದರು.
ಜಿಲ್ಲೆಯಲ್ಲಿ ಇದುವರೆಗೆ ಮೂವರು ಪಾಸಿಟಿವ್ ಆಗಿದ್ದಾರೆ. ಮೂವರ ಮೇಲೂ ನಿಗಾ ಇರಿಸಲಾಗಿದೆ. ಯಾವುದೇ ಆತಂಕ ಪಡಬೇಕಾದ ಅಗತ್ಯವಿಲ್ಲ. ಅವರೊಂದಿಗೆ ಪ್ರಮುಖ ಸಂಪರ್ಕಕ್ಕೆ ಬಂದವರನ್ನೂ ಗುರುತಿಸಿ ತೀವ್ರ ನಿಗಾದಲ್ಲಿರಿಸಿದ್ದೇವೆ. ಸರಕಾರದ ಮಾರ್ಗಸೂಚಿಯಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಜನತೆಗೆ ಭರವಸೆ ನೀಡಿದ್ದಾರೆ.