ಮೊದಲ ಕೊರೋನ ವೈರಸ್ ಪೀಡಿತ ಮಹಿಳೆ ಸಂಪೂರ್ಣ ಚೇತರಿಕೆ

Update: 2020-03-29 16:37 GMT
ಸಾಂದರ್ಭಿಕ ಚಿತ್ರ

 ಬೀಜಿಂಗ್, ಮಾ. 29: ಚೀನಾದ ವುಹಾನ್ ನಗರದಲ್ಲಿ ಸಿಗಡಿ ಮಾರಾಟ ಮಾಡುತ್ತಿರುವ 57 ವರ್ಷದ ಮಹಿಳೆಯೊಬ್ಬರು ನೂತನ-ಕೊರೋನವೈರಸ್ ರೋಗದ ಆರಂಭಿಕ ಸಂತ್ರಸ್ತರ ಪೈಕಿ ಒಬ್ಬರು ಎಂದು ಮಾಧ್ಯಮ ವರದಿಗಳು ಹೇಳಿವೆ. ಚೀನಾ ಸರಕಾರ ಕ್ಷಿಪ್ರವಾಗಿ ಕ್ರಮಗಳನ್ನು ತೆಗೆದುಕೊಂಡಿದ್ದರೆ ರೋಗದ ಹರಡುವಿಕೆಯನ್ನು ತಡೆಯಬಹುದಾಗಿತ್ತು ಎಂದು ವೀ ಗಿಯುಕ್ಸಿಯನ್ ಹೇಳುತ್ತಾರೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಕೊರೋನವೈರಸ್ ‘ಪೇಶಂಟ್ ಝೀರೊ’ ಆಗಿರುವ ಈ ಮಹಿಳೆ ಒಂದು ತಿಂಗಳು ಚಿಕಿತ್ಸೆ ಪಡೆದ ಬಳಿಕ ಸಂಪೂರ್ಣ ಗುಣಮುಖರಾಗಿದ್ದಾರೆ.

ಡಿಸೆಂಬರ್ 10ರಂದು ಹುವನನ್ ಸಾಗರೋತ್ಪನ್ನ ಮಾರುಕಟ್ಟೆಯಲ್ಲಿ ಸಿಗಡಿ ಮಾರುತ್ತಿದ್ದಾಗ ಅವರಲ್ಲಿ ನೆಗಡಿ ಕಾಣಿಸಿಕೊಂಡಿತು. ತನಗೆ ಜ್ವರ ಬಂದಿದೆ ಎಂದು ಭಾವಿಸಿದ ಅವರು ಚಿಕಿತ್ಸೆಗಾಗಿ ಸ್ಥಳೀಯ ವೈದ್ಯರಲ್ಲಿಗೆ ಹೋದರು. ಅಲ್ಲಿ ಅವರಿಗೆ ಇಂಜೆಕ್ಷನ್ ನೀಡಲಾಯಿತು.

ಅದರಿಂದ ಏನೂ ಪರಿಣಾಮವಾಗಲಿಲ್ಲ ಹಾಗೂ ಅವರು ಮತ್ತಷ್ಟು ನಿತ್ರಾಣಕ್ಕೊಳಗಾದರು. ಮಾರನೇ ದಿನ ಅವರು ಇನ್ನೊಂದು ಆಸ್ಪತ್ರೆಗೆ ಹೋದರು. ಆದರೆ, ಆಗಲೂ ಏನೂ ಸುಧಾರಣೆಯಾಗದ ಹಿನ್ನೆಲೆಯಲ್ಲಿ, ಅವರು ಡಿಸೆಂಬರ್ 16ರಂದು ಆ ವಲಯದ ದೊಡ್ಡ ಆಸ್ಪತ್ರೆಗೆ ಹೋದರು.

ನಿಮ್ಮ ಕಾಯಿಲೆ ಗಂಭೀರವಾಗಿದೆ ಹಾಗೂ ಹುವಾನನ್ ಮಾರುಕಟ್ಟೆಯಿಂದ ಹಲವರು ಇದೇ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ಬಂದಿದ್ದಾರೆ ಎಂದು ತಿಳಿಸಲಾಯಿತು. ಡಿಸೆಂಬರ್ ಕೊನೆಯ ವೇಳೆಗೆ, ಸಾಗರೋತ್ಪನ್ನ ಮಾರುಕಟ್ಟೆಯಿಂದ ಕೊರೋನವೈರಸ್ ಹರಡಿದೆ ಎಂದು ಖಚಿತವಾದಾಗ ಅವರನ್ನು ಪ್ರತ್ಯೇಕವಾಗಿಡಲಾಯಿತು. ಅಂತಿಮವಾಗಿ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News