ಕೊಂಕಣ ರೈಲ್ವೆ ಮಾರ್ಗದಲ್ಲಿ ನಿರಂತರ ಸರಕು ರೈಲು ಓಡಾಟ

Update: 2020-03-29 16:32 GMT

ಉಡುಪಿ, ಮಾ.29: ಜನಸಾಮಾನ್ಯರಿಗೆ ತುರ್ತು ಅಗತ್ಯ ವಸ್ತುಗಳಾದ ಔಷಧಿ, ವೈದ್ಯಕೀಯ ಸಲಕರಣೆಗಳು, ಹಣ್ಣು ಹಂಪಲು ಹಾಗೂ ತರಕಾರಿ ಗಳನ್ನೊಳಗೊಂಡ ಜೀವನಾವಶ್ಯಕ ಸರಕು ಸಾಮಾಗ್ರಿಗಳ ಸಾಗಾಟಕ್ಕಾಗಿ ಗೂಡ್ಸ್ ರೈಲುಗಳು ಕೊಂಕಣ ರೈಲು ಮಾರ್ಗಗಳಲ್ಲಿ ನಿರಂತರವಾಗಿ ಓಡಾಟ ನಡೆಸುತ್ತಿವೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ನೋವೆಲ್ ಕೊರೋನ ವೈರಸ್‌ಗಾಗಿ ದೇಶವೇ ಲಾಕ್‌ಡೌನ್ ಆಗಿರುವ ಇಂದಿನ ದಿನಗಳಲ್ಲಿ ದೇಶದ ಉದ್ದಗಲಕ್ಕೂ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವುದು ತುರ್ತು ಅಗತ್ಯವೆನಿಸಿದ ಹಿನ್ನೆಲೆಯಲ್ಲಿ ಈ ವಿಶೇಷ ಪಾರ್ಸೆಲ್ ಟ್ರೈನ್‌ಗಳನ್ನು ಕೊಂಕಣ ರೈಲ್ವೆ ಓಡಿಸುತ್ತಿದೆ ಎಂದು ಅದು ಹೇಳಿದೆ.

ಕೊಂಕಣ ರೈಲ್ವೆ ಜನರ ಅಗತ್ಯಕ್ಕನುಗುಣವಾಗಿ ಅಗತ್ಯ ವಸ್ತುಗಳನ್ನು ತನ್ನ ಮಾರ್ಗದಲ್ಲಿ ಭಾರತೀಯ ರೈಲ್ವೆಯ ವಿವಿಧ ನಿಲ್ದಾಣಗಳಿಗೆ ತಲುಪಿಸುತ್ತಿದೆ. ಅಲ್ಲದೇ ಆಸಕ್ತ ಗ್ರಾಹಕರು ತಮ್ಮ ಯಾವುದೇ ವಸ್ತುಗಳನ್ನು ಸಾಗಿಸಲು ಕೊಂಕಣ ರೈಲ್ವೆಯ ಸೀನಿಯರ್ ಕಮರ್ಷಿಯಲ್ ಮ್ಯಾನೇಜರ್ (ಮೊಬೈಲ್ ನಂಬರ್: 9004470394) ಅಥವಾ ಕೊಂಕಣ ರೈಲ್ವೆಯ ಪಾರ್ಸೆಲ್ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶ ಎದುರಿಸುತ್ತಿರುವ ಇಂದಿನ ಕಷ್ಟದ ದಿನಗಳಲ್ಲಿ ತನ್ನ ಜವಾಬ್ದಾರಿಯನ್ನು ಅರಿತಿರುವ ಕೊಂಕಣ ರೈಲ್ವೆ, ಜನರ ಅಗತ್ಯ ವಸ್ತುಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಕೊಂಕಣ ರೈಲ್ವೆಯ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್.ಕೆ.ವರ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News