​ಲಾಕ್‌ಡೌನ್: ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಆಹಾರ ಪೂರೈಕೆ

Update: 2020-03-29 16:55 GMT

ಮಂಗಳೂರು, ಮಾ. 29: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾದ ಲಾಕ್‌ಡೌನ್, ಸೆ.144, ಬಂದ್‌ನಿಂದಾಗಿ ಅತಂತ್ರರಾಗಿರುವ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ನಿರ್ಗತಿಕರು, ಭಿಕ್ಷುಕರಿಗೆ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯು ಕಳೆದೊಂದು ವಾರದಿಂದ ಆಹಾರ ಪೂರೈಕೆ ಮಾಡುತ್ತಿದೆ ಎಂದು ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ತಿಳಿಸಿದ್ದಾರೆ.

ಕಮಿಟಿಯ ಪದಾಧಿಕಾರಿಗಳಲ್ಲಿ ಓರ್ವರಾದ ಅದ್ದು ಹಾಜಿ ಮತ್ತು ನಿಝಾಮ್ ಎಂಬವರು ಆಹಾರ ತಯಾರಿಸಿಕೊಂಡು ಪ್ರತಿ ದಿನ ರಾತ್ರಿ ಸುಮಾರು 150ಕ್ಕೂ ಅಧಿಕ ಮಂದಿಗೆ ನಗರದ ಜ್ಯೋತಿಯ ಅಂಬೇಡ್ಕರ್ ವೃತ್ತದಿಂದ ಮಿಶನ್ ಸ್ಟ್ರೀಟ್‌ವರೆಗೆ ಹಸಿದ ಹೊಟ್ಟೆಯಲ್ಲಿರುವವರಿಗೆ ಆಹಾರ ವಿತರಿಸುತ್ತಿದ್ದಾರೆ. ಅದಲ್ಲದೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳುವವರಿಗೆ ಮತ್ತು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಕೂಡ ಕಮಿಟಿಯು ಮಾಡುತ್ತಿದೆ. ವಿವಿಧ ಆಸ್ಪತ್ರೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್‌ನಿಂದ ಫೋನ್ ಕರೆ ಬಂದ ತಕ್ಷಣ ಕಾರ್ಪೊರೇಟರ್ ಲತೀಫ್ ಕಂದಕ್‌ರ ಸಮ್ಮುಖ ಕಂದಕ್ ಮುಸ್ಲಿಂ ಜಮಾಅತ್‌ಗೆ ಸೇರಿದ ಆ್ಯಂಬುಲೆನ್ಸ್‌ನ್ನು ಬಳಸಿಕೊಳ್ಳಲಾಗುತ್ತದೆ. ಆ್ಯಂಬುಲೆನ್ಸ್‌ನ ಚಾಲಕ ಅಶ್ರಫ್ ಸಕಾಲಕ್ಕೆ ನಿಗದಿತ ಸ್ಥಳಕ್ಕೆ ತಲುಪಿಸುವಲ್ಲಿ ಸಹಕರಿಸುತ್ತಿದ್ದಾರೆ ಎಂದು ಹನೀಫ್ ಹಾಜಿ ತಿಳಿಸಿದ್ದಾರೆ.

ಬಂದರ್ ಕಂದುಕದ ನೌಶರ್ ನೇತೃತ್ವದ ಯುವಕರ ತಂಡವೊಂದು ಪ್ರತೀ ದಿನ ಬೆಳಗ್ಗೆ ಲೇಡಿಗೋಶನ್ ಆಸ್ಪತ್ರೆಯ ರೋಗಿಗಳಿಗೆ ಮೊಟ್ಟೆ, ಚಪಾತಿ ಮತ್ತು ಚಹಾದ ವ್ಯವಸ್ಥೆಯನ್ನು ಕೂಡ ಮಾಡುತ್ತಿದೆ. ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಮುಹಮ್ಮದ್ ಮಸೂದ್ ಅವರು ವೈಯಕ್ತಿಕ ನೆಲೆಯಲ್ಲಿ ಅರ್ಹರಿಗೆ ಆಹಾರದ ಕಿಟ್ ವಿತರಿಸುತ್ತಿದ್ದಾರೆ. ಬಂದರ್ ಪರಿಸರದಲ್ಲಿ ಸುಮಾರು 200ಕ್ಕೂ ಅಧಿಕ ಹೊರ ರಾಜ್ಯದ ಕಾರ್ಮಿಕರು ಇದ್ದಾರೆ. ಅವರಿಗೆ ಆಹಾರ ಸಾಮಗ್ರಿಗಳನ್ನು ಕೂಡ ಕಮಿಟಿ ಮಾಡುತ್ತಿದೆ. ಒಟ್ಟಿನಲ್ಲಿ ಕಳೆದೊಂದು ವಾರದಿಂದ ಸೆಂಟ್ರಲ್ ಕಮಿಟಿಯ ವತಿಯಿಂದ ಮತ್ತು ಸ್ಥಳೀಯ ಯುವಕರು ಕಮಿಟಿಯ ಮಾರ್ಗದರ್ಶನದಲ್ಲಿ ಆಹಾರ ಪೂರೈಕೆ, ಆಹಾರದ ಕಿಟ್ ವಿತರಣೆ, ಆ್ಯಂಬುಲೆನ್ಸ್ ಸೇವೆಯನ್ನು ನೀಡಿ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹನೀಫ್ ಹಾಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News