ಯುವಕನಿಗೆ ಕೊರೋನ ಹಿನ್ನಲೆ: ವೈದ್ಯರ ಸಹಿತ 12 ಮಂದಿಗೆ 'ಹೋಮ್‍ ಕೊರಂಟೈನ್'

Update: 2020-03-29 17:00 GMT

ಪುತ್ತೂರು : ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಐಸೋಲೇಶನ್ ವಾರ್ಡಿನಲ್ಲಿದ್ದ ಬೆಳ್ತಂಗಡಿ ತಾಲೂಕಿನ ಕಲ್ಲೇರಿಯ ಯುವಕನಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಆತನಿಗೆ ಚಿಕಿತ್ಸೆ ನೀಡಿದ್ದ ಇಬ್ಬರು ವೈದ್ಯರು, ಆರೋಗ್ಯ ಸಹಾಯಕಿಯರು ಸೇರಿದಂತೆ ಒಟ್ಟು 12 ಮಂದಿಯನ್ನು ಮುಂದಿನ 14 ದಿನಗಳ ಕಾಲ ಹೋಮ್ ಕೊರೆಂಟೈನ್‍ನಲ್ಲಿ ಇರುವಂತೆ ಸೂಚಿಸಲಾಗಿದೆ.

ಮಾ.21 ರಂದು ದುಬೈಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಬಂದು ಬಳಿಕ ಬಿಎಂಟಿಸಿ ಬಸ್ಸಿನಲ್ಲಿ ಮೆಜೆಸ್ಟಿಕ್‍ಗೆ ತೆರಳಿ, ಅಲ್ಲಿಂದ ಸಂಜೆ ಕರ್ನಾಟಕ ಸುವರ್ಣ ಸಾರಿಗೆ ಬಸ್ಸಿನಲ್ಲಿ ಉಪ್ಪಿನಂಗಡಿಗೆ ಬಂದು, ಅಟೋ ರಿಕ್ಷಾವೊಂದರಲ್ಲಿ ತನ್ನ ಕಲ್ಲೇರಿಯ ಮನೆಗೆ ತೆರಳಿದ್ದ ಕೊರೋನ ಸೋಂಕು ಶಂಕಿತ ಯುವಕ 5 ದಿನಗಳ ಕಾಲ ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಐಸೋಲೇಶನ್ ವಾರ್ಡಿನಲ್ಲಿ ದಾಖಲಾಗಿದ್ದ.

ಆತನಿಗೆ ಚಿಕಿತ್ಸೆ ನೀಡಿದ್ದ ಸರ್ಕಾರಿ ಆಸ್ಪತ್ರೆಯ ಇಬ್ಬರು ವೈದ್ಯರು, ಆರು ಮಂದಿ ಆರೋಗ್ಯ ಸಹಾಯಕಿಯರು ಹಾಗೂ ಕೊಠಡಿ ಸ್ವಚ್ಚತಾ ಕಾರ್ಯ ನಡೆಸುತ್ತಿದ್ದ 4 ಮಂದಿ ಸಹಾಯಕರು ರೋಗಿಯ ಜತೆ ಸೇವಾ ಸಂಪರ್ಕದಲ್ಲಿದ್ದರು. ಮಾ. 27ರಂದು ಸಂಜೆ ವೇಳೆಗೆ ಆತನಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿರುವ ಹಿನ್ನಲೆಯಲ್ಲಿ ಈ 12 ಮಂದಿಯನ್ನು 14 ದಿನಗಳ ಕಾಲ ಹೋಮ್ ಕೊರೆಂಟೈನ್‍ನಲ್ಲಿ ಇರುವಂತೆ ಉನ್ನತಾಧಿಕಾರಿಗಳು ಆದೇಶಿಸಿದ್ದಾರೆ. ಈ ಹಿನ್ನಲೆಯಲ್ಲಿ ಇಬ್ಬರು ವೈದ್ಯರ ಸಹಿತ 12 ಮಂದಿ ರವಿವಾರದಿಂದ ಆರೋಗ್ಯ ಸೇವೆಗೆ ಗೈರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News