ದ.ಕ.ಜಿಲ್ಲಾಡಳಿತದ ಅವೈಜ್ಞಾನಿಕ ಆದೇಶದ ವಿರುದ್ಧ ಕಾಂಗ್ರೆಸ್ ಆಕ್ಷೇಪ

Update: 2020-03-29 17:21 GMT

ಮಂಗಳೂರು, ಮಾ.29: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ವಿಧಿಸಲಾಗಿರುವ ‘ಲಾಕ್‌ಡೌನ್’ ವೇಳೆ ಜಿಲ್ಲಾಡಳಿತವು ಶುಕ್ರವಾರ ಹೊರಡಿಸಿದ ಆದೇಶವು ಅವೈಜ್ಞಾನಿಕವಾಗಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಆಕ್ಷೇಪಿಸಿದೆ.

ರವಿವಾರ ಕಾಂಗ್ರೆಸ್ ನಿಯೋಗವು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಅವೈಜ್ಞಾನಿಕ ಆದೇಶದಿಂದ ಜಿಲ್ಲೆಯ ಜನತೆ ಮನೆಯಿಂದ ಹೊರಗೆ ಕಾಲಿಡದಂತಾಗಿದೆ. ಇದರಿಂದ ಅವರ ದೈನಂದಿನ ಜೀವನ ಕಷ್ಟಕರವಾಗಿದೆ. ಜಿಲ್ಲಾಡಳಿತವು ಯಾವುದೇ ಮುನ್ಸೂಚನೆ ಇಲ್ಲದೆ ಹೊರಡಿಸಿದ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ.

ಅಗತ್ಯ ವಸ್ತುಗಳನ್ನು ಖರೀದಿಸಲು ಎಲ್ಲಾ ದಿನಸಿ ಅಂಗಡಿಗಳನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ದಿನನಿತ್ಯ ತೆರೆದಿಡ ಬೇಕು.ಹೈಪರ್/ ಸೂಪರ್ ಮಾರ್ಕೆಟ್‌ಗಳಲ್ಲಿ ಮತ್ತು ದೊಡ್ಡ ದೊಡ್ಡ ಅಂಗಡಿಗಳಲ್ಲಿ ಮಾತ್ರ ದಾಸ್ತಾನು/ಪೂರೈಕೆಗೆ ಅವಕಾಶ ಕಲ್ಪಿಸಿದರೆ ಗ್ರಾಮಾಂತರ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಮತ್ತು ದಿನಸಿ ಸಾಮಗ್ರಿಗಳನ್ನು ಸಾಲ ರೂಪದಲ್ಲಿ ಪಡೆಯುತ್ತಿರುವವರಿಗೆ ಸಮಸ್ಯೆ ಆಗಬಹುದು. ಆನ್‌ಲೈನ್ ವ್ಯವಸ್ಥೆಯು ಬಂದ್ ಸಂದರ್ಭ ಎಲ್ಲರಿಗೂ ಪರಿಹಾರದ ಮಾರ್ಗವಲ್ಲ. ಬಹುತೇಕ ಮಂದಿಗೆ ಆ್ಯಪ್‌ನ ಉಪಯೋಗವೂ ತಿಳಿದಿಲ್ಲ. ಅಲ್ಲದೆ ಆನ್‌ಲೈನ್ ಮೂಲಕ ಅಗತ್ಯ ವಸ್ತುಗಳ ಪೂರೈಕೆಯು ನಗರ ಪ್ರದೇಶದ ಕೇವಲ ಶೇ.20ರಷ್ಟು ಮಂದಿಗೆ ಪ್ರಯೋಜನ ವಾಗಬಹುದು. ಇದರಿಂದ ಸಾಮಾಜಿಕ ಅಸಮತೋಲನ ಸೃಷ್ಟಿಯಾಗಬಹುದು. ಈ ತಾರತಮ್ಯಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಬಾರದು ಎಂದು ಕಾಂಗ್ರೆಸ್ ನಿಯೋಗ ಮನವಿಯಲ್ಲಿ ಉಲ್ಲೇಖಿಸಿದೆ.

ಬಂದರ್ ಪ್ರದೇಶದ ಎಲ್ಲಾ ದಾಸ್ತಾನು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಗ್ರಾಮಾಂತರ ಪ್ರದೇಶದ ಸಣ್ಣ ವ್ಯಾಪಾರಿಗಳಿಗೆ ಅಗತ್ಯ ವಸ್ತುಗಳ ಪೂರೈಕೆಯ ಕೊರತೆಯಾಗಬಹುದು. ತರಕಾರಿಯನ್ನು ಮನಪಾ ವ್ಯಾಪ್ತಿಯ 60 ವಾರ್ಡ್‌ಗಳಿಗೂ ಪೂರೈಕೆ ಮಾಡಲು ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಬೇಕು. ಇದರಿಂದ ನಗರದ ಮಾರುಕಟ್ಟೆಯ ಜನಸಂದಣಿಯನ್ನು ಕಡಿಮೆ ಮಾಡಲು ಸಾಧ್ಯವಿದೆ. ಎಲ್ಲಾ ತರದ ಮಾಂಸದ ಅಂಗಡಿಯನ್ನೂ ಕೂಡ ತೆರದಿಡಲು ಅವಕಾಶ ಕಲ್ಪಿಸಬೇಕು. ನಗರದ ಹೈಪರ್/ಸೂಪರ್ ಮಾರ್ಕೆಟ್‌ಗಳಿಗೆ ದಿನದ 24 ಗಂಟೆಯೂ ಅಗತ್ಯ ವಸ್ತುಗಳ ಪೂರೂಕೆ ಮಾಡಲು ಅನುಮತಿ ನೀಡಿದಲ್ಲಿ ನಗರದ ಜನತೆ ಮನೆ ಬಿಟ್ಟು ಹೊರಬರುವುದನ್ನು ತಪ್ಪಿಸಬಹುದು ಎಂದು ಕಾಂಗ್ರೆಸ್ ನಾಯಕರು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಶಾಸಕರಾದ ಯುಟಿ ಖಾದರ್, ಐವನ್ ಡಿಸೋಜ, ಮನಪಾ ಪ್ರತಿಪಕ್ಷದ ನಾಯಕ ಅಬ್ದುರ್ರವೂಫ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ಲತೀಫ್ ಕಂದುಕ, ಎಸಿ ವಿನಯರಾಜ್, ನವೀನ್ ಡಿಸೋಜ, ಮುಹಮ್ಮದ್ ಮೋನು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News