ಕೊರೋನ ವೈರಸ್ ಸೋಂಕು: ದೇಶದಲ್ಲಿ ರವಿವಾರ ಒಂದೇ ದಿನ 130 ಪ್ರಕರಣ ದೃಢ

Update: 2020-03-30 03:47 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಸಾವಿರದ ಗಡಿದಾಟಿದ ಬೆನ್ನಲ್ಲೇ ರವಿವಾರ ಒಂದೇ ದಿನ ಮತ್ತೆ 130 ಹೊಸ ಪ್ರಕರಣಗಳು ದೃಢಪಟ್ಟಿವೆ. ದಿಲ್ಲಿಯಲ್ಲಿ ಒಂದೇ ದಿನದಲ್ಲಿ 23 ಹೊಸ ಪ್ರಕರಣ ಬೆಳಕಿಗೆ ಬಂದಿದ್ದು, ಮಹಾರಾಷ್ಟ್ರದಲ್ಲಿ ಮತ್ತೆರಡು ಸಾವು ಸಂಭವಿಸಿದೆ.

 ದಿಲ್ಲಿಯಲ್ಲಿ ಒಂದೇ ದಿನ ಇಷ್ಟೊಂದು ಪ್ರಮಾಣದಲ್ಲಿ ಪ್ರಕರಣ ಹೆಚ್ಚಿರುವುದು ಆತಂಕದ ವಿಚಾರ ಎಂದು ಅಧಿಕಾರಿಗಳು ಹೇಳಿದ್ದಾರೆ. ದೇಶದಲ್ಲಿ ಸತತ ಮೂರನೇ ದಿನವೂ 100ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದೆ. ಇದುವರೆಗೆ 1,122 ಮಂದಿ ಸೋಂಕಿತರಾಗಿದ್ದು, 30 ಮಂದಿ ಮೃತಪಟ್ಟಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಪೈಕಿ 1024 ಪ್ರಕರಣಗಳನ್ನು ಮತ್ತು 27 ಸಾವನ್ನು ದೃಢಪಡಿಸಿದೆ.

ಮುಂಬೈ ಉಪನಗರದಲ್ಲಿ ಟ್ಯಾಕ್ಸಿ ಚಾಲಕರೊಬ್ಬರ ಪತ್ನಿ ಸೋಂಕಿನಿಂದ ಮೃತಪಟ್ಟಿದ್ದು, ಅಮರಾವತಿ ವಿಭಾಗದ ಬುಲ್ಡಾನಾದಲ್ಲಿ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಇಬ್ಬರೂ 40 ವರ್ಷದ ಆಸುಪಾಸಿನವರಾಗಿದ್ದು, ಯಾವುದೇ ವಿದೇಶ ಪ್ರಯಾಣ ಮಾಡಿರಲಿಲ್ಲ.

ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಪ್ರಮಾಣ 203ನ್ನು ತಲುಪಿದೆ. ಮೊದಲ ಪ್ರಕರಣ ಬೆಳಕಿಗೆ ಬಂದ ಬಳಿಕ ಆ ಸಂಖ್ಯೆ 100ನ್ನು ತಲುಪಲು 16 ದಿನಗಳಾಗಿವೆ. ಆದರೆ ಕೇವಲ 5 ದಿನಗಳಲ್ಲಿ ಮತ್ತೆ 100 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದುವರೆಗೆ 35 ಮಂದಿ ಗುಣಮುಖರಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ಅಧ್ಯಕ್ಷ ಡಾ.ಅನೂಪ್ ಕುಮಾರ್ ಹೇಳಿದ್ದಾರೆ.

ಮಹಾರಾಷ್ಟ್ರ ಬಳಿಕ ಕೇರಳ 202 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಗುಜರಾತ್‌ನಲ್ಲಿ 58 ಪ್ರಕರಣಗಳು ದೃಢಪಟ್ಟಿದ್ದು, ಐದು ಮಂದಿ ಸಾವನ್ನಪ್ಪಿದ್ದಾರೆ. ರವಿವಾರ 47 ವರ್ಷದ ವ್ಯಕ್ತಿಯೊಬ್ಬರು ವೈರಸ್ ಸೋಂಕಿಗೆ ಬಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಕೂಡಾ ಕ್ಷಿಪ್ರವಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಒಂದೇ ದಿನ 19 ಪ್ರಕರಣ ದೃಢಪಟ್ಟಿದ್ದು, ಒಟ್ಟು 80 ಮಂದಿಗೆ ಸೋಂಕು ತಗಲಿದಂತಾಗಿದೆ. ನೋಯ್ಡ ಮತ್ತು ಮೀರಠ್‌ನಲ್ಲಿ ಗರಿಷ್ಠ ಪ್ರಕರಣಗಳು ವರದಿಯಾಗುತ್ತಿವೆ.

ಧನಬಾದ್‌ನಲ್ಲಿ ಕೊರೋನ ವೈರಸ್ ಪೀಡಿತ ವ್ಯಕ್ತಿ ರವಿವಾರ ಮೃತಪಟ್ಟಿದ್ದು, ಇದು ರಾಜ್ಯದ ಮೊಟ್ಟಮೊದಲ ಪ್ರಕರಣ ಹಾಗೂ ಮೊಟ್ಟಮೊದಲ ಸಾವು ಆಗಿದೆ. 24 ವರ್ಷ ವಯಸ್ಸಿನ ಈತ ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ್ದ. ಕಾಶ್ಮೀರದಲ್ಲಿ ರವಿವಾರ 2ನೇ ಕೊರೋನ ಸಾವು ಸಂಭವಿಸಿದ್ದು, 62 ವರ್ಷ ವಯಸ್ಸಿನ ತರಕಾರಿ ವ್ಯಾಪಾರಿ ಮೃತಪಟ್ಟಿದ್ದಾರೆ. ಗುಲ್‌ಮಾರ್ಗ್ ಸಮೀಪದ ತಂಗ್‌ಮಾರ್ಗ್ ಗ್ರಾಮದಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿದ್ದ ಇವರು ಯಾವುದೇ ಕೊರೋನಪೀಡಿತ ಪ್ರದೇಶಕ್ಕೆ ಭೇಟಿ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News