ಆಹಾರವಿಲ್ಲದೇ 100 ಕಿಲೋಮೀಟರ್ ನಡೆದ ತುಂಬು ಗರ್ಭಿಣಿ, ಪತಿ

Update: 2020-03-30 04:00 GMT

ಮೀರಠ್, ಮಾ.30: ಲಾಕ್‌ಡೌನ್ ಪರಿಣಾಮವಾಗಿ, ಎಂಟು ತಿಂಗಳ ತುಂಬು ಗರ್ಭಿಣಿ ಹಾಗೂ ಆಕೆಯ ಪತಿ ಯಾವುದೇ ಆಹಾರವಿಲ್ಲದೇ 100 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಸಾಗಿದ ಹೃದಯ ಕುಲುಕುವ ಘಟನೆ ವರದಿಯಾಗಿದೆ.

ಸಹರಣಪುರದಿಂದ ಬುಲಂದ್‌ಶಹರ್‌ಗೆ ಹೊರಟ ಇವರ ಪ್ರಯಾಣಕ್ಕೆ ಮೀರಠ್‌ನಲ್ಲಿ ಹಣಕಾಸು ನೆರವು ಮತ್ತು ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಲಾಗಿದೆ. ಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ಇವರು ಕೆಲಸ ಮಾಡುತ್ತಿದ್ದ ಸ್ಥಳದಿಂದ ಉದ್ಯೋಗದಾತ ಹಣ ನೀಡದೇ ಇವರನ್ನು ವಾಪಸ್ ಕಳುಹಿಸಿದ್ದರಿಂದ ಈ ದಯನೀಯ ಸ್ಥಿತಿ ಅನುಭವಿಸಬೇಕಾಯಿತು ಎಂದು ತಿಳಿದುಬಂದಿದೆ.

ತೀವ್ರ ಆಯಾಸದಿಂದ ಬಳಲಿದ್ದ ವಕೀಲ್ ಮತ್ತು ಯಾಸ್ಮೀನ್ ದಂಪತಿಯನ್ನು ಸ್ಥಳೀಯರಾದ ನವೀನ್ ಕುಮಾರ್ ಹಾಗೂ ರವೀಂದ್ರ ಎಂಬುವವರು ಗುರುತಿಸಿ ಸ್ಥಳೀಯ ಇನ್‌ಸ್ಪೆಕ್ಟರ್ ಪ್ರೇಮ್‌ಪಾಲ್ ಸಿಂಗ್ ಎಂಬುವವರ ಗಮನಕ್ಕೆ ತಂದರು. ಬಳಿಕ ಸ್ಥಳೀಯರು ಇವರಿಗೆ ಆಹಾರ ಹಾಗೂ ಹಣ ನೀಡಿ ಅವರ ಗ್ರಾಮಕ್ಕೆ ತೆರಳಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದರು.

ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಕೀಲ್ ಹಾಗೂ ಆತನ ಪತ್ನಿ ಎರಡು ದಿನಗಳಲ್ಲಿ 100 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಆಗಮಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಫ್ಯಾಕ್ಟರಿ ಮಾಲಕ ನೀಡಿದ್ದ ಕೊಠಡಿಯೊಂದರಲ್ಲಿ ವಾಸವಿದ್ದ ನಮ್ಮನ್ನು ಲಾಕ್‌ಡೌನ್ ಘೋಷಣೆಯಾದ ತಕ್ಷಣ ಕೊಠಡಿ ಖಾಲಿ ಮಾಡಲು ಸೂಚಿಸಿದರು. ನಮಗೆ ಗ್ರಾಮಕ್ಕೆ ವಾಪಸ್ಸಾಗಲು ಹಣವನ್ನೂ ನೀಡಲಿಲ್ಲ ಎಂದು ಯಾಸ್ಮೀನ್ ವಿವರಿಸಿದರು.

ಅನ್ಯ ಮಾರ್ಗವಿಲ್ಲದೇ ಗುರುವಾರ ಸಹರಣಪುರದಿಂದ ಕಾಲ್ನಡಿಗೆ ಆರಂಭಿಸಿದ್ದರು. ಹೆದ್ದಾರಿ ಬದಿಯ ಎಲ್ಲ ಹೋಟೆಲ್‌ಗಳು ಮುಚ್ಚಿದ್ದರಿಂದ ಎರಡು ದಿನಗಳಿಂದ ಆಹಾರ ಕೂಡಾ ಸಿಕ್ಕಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News