ಬಂದ್ 3ನೇ ದಿನ: ಮಂಗಳೂರಿನಲ್ಲಿ ಬೆಳಗ್ಗೆ ಅಲ್ಲಲ್ಲಿ ತೆರೆದಿದ್ದ ಅಂಗಡಿಗಳು!

Update: 2020-03-30 04:31 GMT

ಮಂಗಳೂರು, ಮಾ.30: ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ದ.ಕ. ಜಿಲ್ಲೆಯಲ್ಲಿ ಘೋಷಿಸಿರುವ ಸಂಪೂರ್ಣ ಬಂದ್ ಮೂರನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಬಂದ್ ಗೆ ಕಳೆದೆರಡು ದಿನಗಳಷ್ಟು ಸ್ಪಂದನ ಇಂದು ಕಂಡುಬರುತ್ತಿಲ್ಲ. ಬೆಳಗ್ಗೆ ಮಂಗಳೂರು ನಗರದ ಕೆಲವೆಡೆ ಕೆಲವೊಂದು ಅಂಗಡಿಗಳು ತೆರೆದಿದ್ದವು. ಜನರು ಕೂಡಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ನಿರ್ಲಕ್ಷಿಸಿ ಖರೀದಿಗೆ ಮುಗಿಬೀಳುತ್ತಿರುವುದು ಕಂಡುಬಂದವು. ಅಗತ್ಯ ಸೇವೆಯ ಹೊರತುಪಡಿಸಿ ಇತರ ವಾಹನಗಳು ರಸ್ತೆಗೆ ಇಳಿದರೆ ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರೂ ಅದಕ್ಕೆ ಕಿವಿಗೊಡದೆ ಕೆಲವರು ವಾಹನಗಳನ್ನು ರಸ್ತೆಗೆ ಇಳಿಸಿರುವುದು ಕಂಡು ಬಂದಿದೆ. ಬೆಳಗ್ಗೆಯಿಂದ ನಗರದಲ್ಲಿ ವಾಹನಗಳ ಓಡಾಟ ಕಳೆದೆರಡು ದಿನಗಳಿಗಿಂತ ಅಧಿಕವಾಗಿದೆ. 

ಇಂದು ಮುಂಜಾನೆ ಸುಮಾರು 7:30ಕ್ಕೆ ಮಂಗಳೂರು ನಗರದ ಮಾರ್ನಮಿಕಟ್ಟೆ ಹಾಗೂ ಅತ್ತಾವರದಲ್ಲಿ ಒಂದೆರಡು ಅಂಗಡಿಗಳು ತೆರೆದಿದ್ದವು. ಜನರು ಯಾವುದೇ ಮಾಸ್ಕ್ ಗಳನ್ನು ಧರಿಸದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ತರಕಾರಿ, ಹಣ್ಣುಹಂಪಲುಗಳನ್ನು ಖರೀದಿಸುತ್ತಿರುವುದು ಕಂಡುಬಂದವು. ಮಂಗಳವಾರ ಬೆಳಗ್ಗೆಯಿಂದ ಬೆಳಗ್ಗೆ 6ರಿಂದ ಅಪರಾಹ್ನ 3ರವರೆಗೆ ದಿನಸಿ ಅಂಗಡಿಗಳು ತೆರೆಯಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದ್ದರೂ ಇಂತಹ ಅಪಾಯಕಾರಿ ಖರೀದಿಗೆ ‘ಬುದ್ಧಿವಂತರ ಜಿಲ್ಲೆ’ಯ ಜನತೆ ಮುಂದಾಗಿರುವುದು ಅಲ್ಲಲ್ಲಿ ಕಂಡುಬಂದವು.

ಗ್ರಾಮಾಂತರ ಪ್ರದೇಶಗಳಲ್ಲಿ ಕೂಡ ಜನರು ವಾಹನಗಳಲ್ಲಿ ಅತ್ತಿಂದಿತ್ತ ಓಡಾಡುವುದು ಮತ್ತು ಕೆಲವು ದಿನಸಿ ಅಂಗಡಿಗಳಲ್ಲಿ ಕದ್ದುಮುಚ್ಚಿ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ. ಈ ನಡುವೆ ಲಭ್ಯ ತರಕಾರಿ, ಹಣ್ಣು ಹಂಪಲುಗಳ ಬೆಲೆಯೂ ದಿಢೀರ್ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News