ದೇವಳದ ಅರ್ಚಕರಿಗೆ ಹಲ್ಲೆ: ಸುಬ್ರಹ್ಮಣ್ಯ ಠಾಣಾ ಪೊಲೀಸ್ ಸಿಬ್ಬಂದಿ ಅಮಾನತು

Update: 2020-03-30 04:52 GMT
ಅರ್ಚಕ ಶ್ರೀನಿವಾಸ್ ಭಟ್

ಸುಬ್ರಹ್ಮಣ್ಯ, ಮಾ.30: ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕರೊಬ್ಬರಿಗೆ ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಆದಿ ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ ಶನಿವಾರ ರಾತ್ರಿಯ ಪೂಜೆಗೆಂದು ದೇವಳಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಸುಬ್ರಹ್ಮಣ್ಯ ಠಾಣಾ ಸಿಬ್ಬಂದಿ ಶಂಕರ್ ಅವರು ಲಾಕ್‌ಡೌನ್ ಸಂದರ್ಭ ಎಲ್ಲಿಗೆ ತೆರಳುತ್ತಿದ್ದೀರಿ ಎಂದು ಪ್ರಶ್ನಿಸಿ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ದೇವಳಕ್ಕೆ ಪೂಜೆಗೆ ತೆರಳುತ್ತಿರುವುದಾಗಿ ಮನವರಿಕೆ ಮಾಡಲೆತ್ನಿಸಿದರೂ ಕ್ಯಾರೇ ಅನ್ನದೇ ಕೈಗೆ ಮತ್ತು ಸೊಂಟದ ಭಾಗಕ್ಕೆ ಹೊಡೆದಿರುವುದಾಗಿ ಅರ್ಚಕರು ದೂರಿದ್ದಾರೆ.

ಈ ಬಗ್ಗೆ ಅರ್ಚಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ದೇವಳದ ಕಾರ್ಯನಿರ್ವಹಣಾಧಿಕಾರಿ ಈ ಬಗ್ಗೆ ಪುತ್ತೂರು ಉಪ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಬಂಟ್ವಾಳ ಪೊಲೀಸ್ ಉಪವಿಭಾಗಾಧಿಕಾರಿಯಿಂದ ಘಟನೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ಪಡೆದುಕೊಂಡಿದ್ದಾರೆ. ಅವರ ವರದಿಯನ್ನಾಧರಿಸಿ ಆರೋಪಿ ಪೊಲೀಸ್ ಸಿಬ್ಬಂದಿ ಶಂಕರ್‌ರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಘಟನೆಯ ಕುರಿತಂತೆ ಇಲಾಖಾ ಹಂತದಲ್ಲಿ ವಿಚಾರಣೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News