ಕೋವಿಡ್-19: ಪರಿಹಾರ ನಿಧಿಗೆ ಕ್ರೀಡಾಳುಗಳ ದೇಣಿಗೆ

Update: 2020-03-30 06:24 GMT

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ 1 ಕೋ.ರೂ. ನೆರವಿನ ಭರವಸೆ

ಹೊಸದಿಲ್ಲಿ, ಮಾ.29: ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ವಿರುದ್ಧ ಹೋರಾಡಲು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಕ್ಕೆ ತಲಾ 50 ಲಕ್ಷ ರೂ. ನೆರವು ನೀಡುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ರವಿವಾರ ಭರವಸೆ ನೀಡಿದೆ. ‘‘ಕೆಎಸ್‌ಸಿಎ, ಬಿಸಿಸಿಐ ಮುಖಾಂತರ ಪ್ರಧಾನಮಂತ್ರಿ ನಾಗರಿಕ ನೆರವು ನಿಧಿ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ನಿಧಿಗೆ ತಲಾ 50 ಲಕ್ಷ ರೂ. ನೆರವು ನೀಡಲಿದೆ. ಇಂತಹ ವಿಪತ್ತು ನಿರ್ವಹಣೆಗೆ ಹಾಗೂ ಕೋವಿಡ್-19ರಿಂದ ಜನರನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯದ ಕೈ ಬಲಪಡಿಸಲು ದೇಣಿಗೆ ನೀಡುತ್ತಿದ್ದೇವೆ’’ ಎಂದು ಕೆಎಸ್‌ಸಿಎ ವಕ್ತಾರರು ತಿಳಿಸಿದ್ದಾರೆ. ಬಿಸಿಸಿಐ ಶನಿವಾರದಂದು ಆರೋಗ್ಯ ಬಿಕ್ಕಟ್ಟು ವಿರುದ್ಧ ಹೋರಾಡಲು 51 ಕೋ.ರೂ. ನೆರವು ಘೋಷಿಸಿದೆ. ಕೆಎಸ್‌ಸಿಎಯಲ್ಲದೆ, ಇತರ ರಾಜ್ಯ ಕ್ರಿಕೆಟ್ ಸಂಸ್ಥೆಗಳಾದ ಬಂಗಾಳ ಕ್ರಿಕೆಟ್ ಸಂಸ್ಥೆ, ಮುಂಬೈ ಕ್ರಿಕೆಟ್ ಸಂಸ್ಥೆ ಹಾಗೂ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕೂಡ ಕೊಡುಗೆ ನೀಡಿವೆ.

ಏಶ್ಯನ್ ಪ್ರಾರಾ ಗೇಮ್ಸ್ ಚಾಂಪಿಯನ್ ಶರದ್ ಕುಮಾರ್ 1ಲಕ್ಷ

ರೂ. ಹೊಸದಿಲ್ಲಿ, ಮಾ.29: ಡಬಲ್ ಏಶ್ಯನ್ ಪ್ಯಾರಾ ಗೇಮ್ಸ್ಸ್ ಹೈ ಜಂಪ್ ಚಾಂಪಿಯನ್ ಶರದ್ ಕುಮಾರ್ ಕೋವಿಡ್-19 ರೋಗದ ವಿರುದ್ಧ ಹೋರಾಡಲು ಪ್ರಧಾನಮಂತ್ರಿ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

‘‘ನಾನು ಕೋವಿಡ್-19 ವೈರಸ್ ವಿರುದ್ಧ ಹೋರಾಡಲು ಪ್ರಧಾನಮಂತ್ರಿ ಪರಿಹಾರ ನಿಧಿಗೆ 1 ಲಕ್ಷದ 1 ರೂ. ಕೊಡುಗೆ ನೀಡುವೆ’’ಎಂದು ಬಿಹಾರದ 29ರ ಹರೆಯದ ಅಥ್ಲೀಟ್ ಟ್ವೀಟ್ ಮಾಡಿದ್ದಾರೆ. 2018ರಲ್ಲಿ ಇಂಡೋನೇಶ್ಯದ ಜಕಾರ್ತದಲ್ಲಿ ನಡೆದಿದ್ದ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸುವ ಮೊದಲು ಕುಮಾರ್ 2014ರಲ್ಲಿ ಹೈಜಂಪ್ ಟಿ-42 ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು. 2017ರಲ್ಲಿ ಐಪಿಸಿ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ರಿಚಾ ಘೋಷ್‌ರಿಂದ 1 ಲಕ್ಷ ರೂ. ನೆರವು

ಕೋಲ್ಕತಾ, ಮಾ.29: ಈ ತಿಂಗಳಾರಂಭದಲ್ಲಿ ನಡೆದಿದ್ದ ಮಹಿಳಾ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 16ರ ಹರೆಯದ ಆಲ್‌ರೌಂಡರ್ ರಿಚಾ ಘೋಷ್ ಕೋವಿಡ್-19ರ ವಿರುದ್ಧ ಹೋರಾಡಲು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ರಿಚಾ ಅವರ ತಂದೆ ಮನಬೆಂದ್ರ ಘೋಷ್ ಸಿಲಿಗುರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಮಂತ ಸಹಾಯ್ ಅವರ ಮನೆಗೆ ತೆರಳಿ ಚೆಕ್‌ನ್ನು ಹಸ್ತಾಂತರಿಸಿದರು ಎಂದು ಬಂಗಾಳದ ಕ್ರಿಕೆಟ್ ಸಂಸ್ಥೆ ತಿಳಿಸಿದೆ.

‘‘ಪ್ರತಿಯೊಬ್ಬರು ಕೋವಿಡ್-19ರ ವಿರುದ್ಧ ಹೋರಾಡುತ್ತಿದ್ದು, ಎಲ್ಲರೂ ಒಗ್ಗಟ್ಟಾಗಿ ಇದನ್ನು ಎದುರಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಕಿರು ಕಾಣಿಕೆ ನೀಡಿದ್ದೇನೆ’’ ಎಂದು ವಿಶ್ವಕಪ್‌ನಲ್ಲಿ ಫೈನಲ್ ಸಹಿತ ಎರಡು ಪಂದ್ಯಗಳಲ್ಲಿ ಆಡಿದ್ದ ಘೋಷ್ ತಿಳಿಸಿದ್ದಾರೆ. ಟ್ವೆಂಟಿ-20 ವಿಶ್ವಕಪ್‌ಗಿಂತ ಮೊದಲು ಆಸ್ಟ್ರೇಲಿಯದಲ್ಲಿ ನಡೆದಿದ್ದ ತ್ರಿಕೋನ ಸರಣಿಯ ವೇಳೆ ರಿಚಾ ಚೊಚ್ಚಲ ಪಂದ್ಯವಾಡಿದ್ದರು. ರಿಚಾ ಹಾಗೂ ಶೆಫಾಲಿ ವರ್ಮಾ ವಿಶ್ವಕಪ್ ಫೈನಲ್‌ನಲ್ಲಿ ಆಡಿದ್ದ 16ರ ಹರೆಯದ ಇಬ್ಬರು ಆಟಗಾರ್ತಿಯರಾಗಿದ್ದಾರೆ. ಮಾ.8ರಂದು ನಡೆದಿದ್ದ ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಕ್ಕೆ 85 ರನ್‌ಗಳಿಂದ ಸೋತಿತ್ತು.

ಸಿಎಬಿಯಲ್ಲಿರುವ ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್‌ನ ಪ್ರತಿನಿಧಿ ದೀಪಕ್ ಸಿಂಗ್ ಪರಿಹಾರ ನಿಧಿಗೆ 2 ಲಕ್ಷ ರೂ.ದೇಣಿಗೆ ನೀಡಿದ್ದಾರೆ. ಮಾಜಿ ಟೆಸ್ಟ್ ಆಟಗಾರ್ತಿ ಮಿಥು ಮುಖರ್ಜಿ 25,000ರೂ. ನೆರವು ನೀಡುವ ಭರವಸೆ ನೀಡಿದ್ದಾರೆ.

ಪಿಎಂ-ಕಾಳಜಿ ನಿಧಿಗೆ 51 ಕೋ.ರೂ. ಕೊಡುಗೆ ನೀಡಿದ ಬಿಸಿಸಿಐ ಮುಂಬೈ,

ಪ್ರಧಾನಮಂತ್ರಿ ನಾಗರಿಕರ ಸಹಾಯ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ(ಪಿಎಂ-ಕಾಳಜಿ) ನಿಧಿಗೆ 51 ಕೋ.ರೂ. ಕಾಣಿಕೆ ನೀಡುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಘೋಷಿಸಿದೆ. 51 ಕೋ.ರೂ. ಘೋಷಿಸುವ ಮೊದಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹಾಗೂ ಕಾರ್ಯದರ್ಶಿ ಜಯ ಶಾ ಅವರು ಇತರ ಕಚೇರಿ ಪದಾಧಿಕಾರಿಗಳು ಹಾಗೂ ರಾಜ್ಯ ಸಂಸ್ಥೆಗಳ ಜೊತೆಗೆ ಕೋವಿಡ್-19 ಸಾಂಕ್ರಾಮಿಕ ರೋಗದ ಕುರಿತು ಚರ್ಚೆ ನಡೆಸಿದರು.

ಯುವ ಶೂಟರ್ ಇಶಾ ಸಿಂಗ್ 30,000 ರೂ. ದೇಣಿಗೆ

ಯುವ ಶೂಟರ್ ಇಶಾ ಸಿಂಗ್ ಕೋವಿಡ್-19 ವೈರಸ್ ವಿರುದ್ಧ ಹೋರಾಡಲು ಪ್ರಧಾನಮಂತ್ರಿ ಪರಿಹಾರ ನಿಧಿಗೆ 30,000 ರೂ. ದೇಣಿಗೆ ನೀಡಿದ್ದಾರೆ. 15ರ ವಯಸ್ಸಿನ ಇಶಾ ಹಣಕಾಸು ನೆರವು ನೀಡುತ್ತಿರುವ ದೇಶದ ಅತ್ಯಂತ ಕಿರಿಯ ವಯಸ್ಸಿನ ಕ್ರೀಡಾಪಟುವಾಗಿದ್ದಾರೆ. ‘‘ನನ್ನ ಉಳಿಕೆಯ 30,000 ರೂ.ವನ್ನು ಪಿಎಂ ಕೇರ್ ಫಂಡ್‌ಗೆ ನೀಡುವ ಭರವಸೆ ನೀಡುತ್ತೇನೆ’’ ಎಂದು ಟ್ವಿಟರ್‌ನಲ್ಲಿ ಇಶಾ ಬರೆದಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ, ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಹಾಗೂ ಸುರೇಶ್ ರೈನಾ ದೊಡ್ಡ ದೇಣಿಗೆ ನೀಡಿದ್ದಾರೆ. ಭಾರತದ 16ರ ಹರೆಯದ ಕ್ರಿಕೆಟ್ ಆಟಗಾರ್ತಿ ರಿಚಾ ಘೋಷ್ ಪಶ್ಚಿಮಬಂಗಾಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಲಕ್ಷ ರೂ. ಕೊಡುಗೆ ನೀಡಿದ್ದಾರೆ. ಇಶಾ ಸಿಂಗ್ ಕಳೆದ ವರ್ಷದ ನವೆಂಬರ್‌ನಲ್ಲಿ ಏಶ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಜಯಿಸಿದ್ದರು. 2018ರಲ್ಲಿ ಸೀನಿಯರ್, ಜೂನಿಯರ್ ಹಾಗೂ ಯೂತ್ ವಿಭಾಗಗಳಲ್ಲಿ ತಲಾ ಒಂದು ಚಿನ್ನದ ಪದಕ ಜಯಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News