ಆರು ತಿಂಗಳ ಕಾಲ ಆಸ್ಟ್ರೇಲಿಯದ ಗಡಿ ಬಂದ್

Update: 2020-03-30 07:31 GMT

ಹೊಸದಿಲ್ಲಿ, ಮಾ.29: ಆಸ್ಟ್ರೇಲಿಯ ಸರಕಾರ ಮುಂದಿನ ಆರು ತಿಂಗಳುಗಳ ಕಾಲ ಗಡಿಯನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡದ ಪ್ರವಾಸಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ.

ಮುಂಬರುವ ಅಕ್ಟೋಬರ್‌ನಲ್ಲಿ ಟ್ವೆಂಟಿ-20 ವಿಶ್ವಕಪ್‌ನೊಂದಿಗೆ ಭಾರತದ ಆಸ್ಟ್ರೇಲಿಯ ಪ್ರವಾಸ ಆರಂಭವಾಗಬೇಕಿತ್ತು. ಟೆಸ್ಟ್ ಸರಣಿಯೊಂದಿಗೆ ಭಾರತದ ಪ್ರವಾಸ ಕೊನೆಗೊಳ್ಳಲಿದೆ. ಆಸ್ಟ್ರೇಲಿಯದಲ್ಲಿ ಟ್ವೆಂಟಿ-20ವಿಶ್ವಕಪ್ ಅಕ್ಟೋಬರ್ 18ರಂದು ಆರಂಭಗೊಳ್ಳಬೇಕಿತ್ತು. ಆದರೆ ಜಾಗತಿಕವಾಗಿ ಕೊರೋನ ವೈರಸ್ ಹರಡುವಿಕೆಯಿಂದಾಗಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ.

 ಆಸ್ಟ್ರೇಲಿಯದಲ್ಲಿ 2,000 ಕೋವಿಡ್ -19 ಪೊಸಿಟಿವ್ ಪ್ರಕರಣಗಳು ದಾಖಲಾಗಿವೆ. 16 ಮಂದಿ ಮೃತಪಟ್ಟಿದ್ದಾರೆ. ಈ ಕಾರಣದಿಂದಾಗಿ ಆಸ್ಟ್ರೇಲಿಯ ತನ್ನ ಗಡಿಯನ್ನು ಬಂದ್ ಮಾಡಿದೆ. ಈ ಕಾರಣದಿಂದಾಗಿ ಭಾರತದ ಪ್ರವಾಸದ ಬಗ್ಗೆ ಸೌರವ್ ಗಂಗುಲಿ ನಾಯಕತ್ವದ ಬಿಸಿಸಿಐ ಬದಲಿ ಯೋಜನೆಯ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಬಿಸಿಸಿಐ, ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿ ಯಾವಾಗ ಆರಂಭವಾಗುತ್ತದೆ ಎನ್ನುವ ವಿಚಾರದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಶ್ರೀಲಂಕಾ ವಿರುದ್ಧ ಏಕದಿನ ಹಾಗೂ ಟ್ವೆಂಟಿ-20 ಸರಣಿ, ಝಿಂಬಾಬ್ವೆ ವಿರುದ್ಧ ಸರಣಿ, ಏಶ್ಯಕಪ್ ಟ್ವೆಂಟಿ-20 ಸರಣಿ, ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಹೀಗೆ ಭಾರತದ ಕ್ರಿಕೆಟ್ ಸರಣಿ ಈ ಮೊದಲು ನಿಗದಿಯಾಗಿದ್ದರೂ, ಕೋವಿಡ್ -19 ಅನಿಶ್ಚಿತತೆಯನ್ನು ತಂದೊಡ್ಡಿದೆ. ಆಸ್ಟ್ರೇಲಿಯ ಆರು ತಿಂಗಳ ಪ್ರಯಾಣ ನಿಷೇಧಿಸಿರುವ ಹಿನ್ನೆಲೆಯಲ್ಲಿ ಯಾವುದೇ ತಂಡವೂ ಆಸ್ಟ್ರೇಲಿಯ ಪ್ರವೇಶಿಸುವಂತಿಲ್ಲ. ಒಂದು ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ಪ್ರಯಾಣ ನಿಷೇಧವನ್ನು ಹಿಂಪಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News