ಟರ್ಕಿಯ ವಿಶ್ವ ಕಪ್ ಹೀರೊ ರುಸ್ತು ರೆಕ್ಬರ್‌ಗೆ ಕೊರೋನ ದೃಢ

Update: 2020-03-30 08:09 GMT

ಅಂಕಾರ,ಮಾ.29: ಟರ್ಕಿ ಹಾಗೂ ಬಾರ್ಸಿಲೋನದ ಮಾಜಿ ಗೋಲ್‌ಕೀಪರ್ ರುಸ್ತು ರೆಕ್ಬರ್‌ಗೆ ಕೊರೋನ ವೈರಸ್ ದೃಢಪಟ್ಟಿರುವ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಪತ್ನಿ ತಿಳಿಸಿದ್ದಾರೆ.

 2002ರ ವಿಶ್ವಕಪ್‌ನಲ್ಲಿ ಟರ್ಕಿ ತಂಡ ಸೆಮಿ ಫೈನಲ್ ತಲುಪಲು ಪ್ರಮುಖ ಪಾತ್ರವಹಿಸಿದ್ದ ರೆಕ್ಬರ್ ಗಮನಾರ್ಹ ಸಾಧನೆ ಮಾಡಿದ್ದರು. ಈ ವಿಶ್ವಕಪ್‌ನಲ್ಲಿ ಟರ್ಕಿ ತಂಡ ದಕ್ಷಿಣ ಕೊರಿಯಾ ವಿರುದ್ಧ ಪ್ಲೇ-ಆಫ್‌ನಲ್ಲಿ 3-2 ಅಂತರದಿಂದ ಜಯ ಸಾಧಿಸಿ ಮೂರನೇ ಸ್ಥಾನದೊಂದಿಗೆ ತನ್ನ ಅಭಿಯಾನ ಕೊನೆಗೊಳಿಸಿತ್ತು. ಇದು ವಿಶ್ವಕಪ್ ಟೂರ್ನಿಯಲ್ಲಿ ಟರ್ಕಿಯ ಅಮೋಘ ಸಾಧನೆಯಾಗಿ ಉಳಿದಿದೆ.

  ‘‘ಕೊರೋನ ವೈರಸ್ ಚಿಕಿತ್ಸೆಗಾಗಿ ರೆಕ್ಬರ್ ಅವರು ಇದೀಗ ಆಸ್ಪತ್ರೆಯಲ್ಲಿದ್ದಾರೆ. ರೋಗ ಲಕ್ಷಣ ಬೇಗನೆ ಕಾಣಿಸಿಕೊಂಡಿರುವುದು ನಮಗೆಲ್ಲರಿಗೂ ಅಚ್ಚರಿ ತಂದಿದೆ. ಇದೀಗ ಎಲ್ಲವೂ ಸ್ಥಿರವಾಗಿದೆ. ಈಗ ಎಲ್ಲೆಡೆ ಕಠಿಣ ಪರಿಸ್ಥಿತಿ ನೆಲೆಸಿದೆ. ನಾನು, ನನ್ನ ಪುತ್ರಿ ಹಾಗೂ ಪುತ್ರ ಕೊರೋನ ವೈರಸ್ ಪರೀಕ್ಷೆಗೆ ಒಳಗಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ’’ ಎಂದು ರೆಕ್ಬರ್ ಅವರ ಪತ್ನಿ ಇಸಿಲ್ ರೆಕ್ಬರ್ ಶನಿವಾರ ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.

46ರ ಹರೆಯದ ಗೋಲ್‌ಕೀಪರ್ ರೆಕ್ಬರ್ ವಿಶ್ವಕಪ್‌ನಲ್ಲಿ ಮಿಂಚಿದ ಬಳಿಕ 2003ರಲ್ಲಿ ಸ್ವಲ್ಪ ಸಮಯ ಬಾರ್ಸಿಲೋನ ಎಫ್‌ಸಿಯಲ್ಲಿದ್ದರು. 2012ರಲ್ಲಿ ಫುಟ್ಬಾಲ್‌ನಿಂದ ನಿವೃತ್ತಿಯಾಗಿದ್ದರು. ಟರ್ಕಿಯಲ್ಲಿ 7,402 ಮಂದಿಗೆ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡಿದ್ದು, 108 ಜನರು ಸಾವನ್ನಪ್ಪಿದ್ದಾರೆ ಎಂದು ಶನಿವಾರ ಟರ್ಕಿ ಗೃಹ ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News