‘‘ಕೈಯಲ್ಲಿ ಕಾಸಿಲ್ಲ... ನಮ್ಮನ್ನು ಊರಿಗೆ ಕಳುಹಿಸಿಕೊಡಿ’’: ವಲಸೆ ಕಾರ್ಮಿಕರ ಅಳಲು

Update: 2020-03-30 11:28 GMT

ಮಂಗಳೂರು, ಮಾ.30: ‘‘ಕಳೆದೆರಡು ವಾರಗಳಿಂದ ನಮ್ಮಲ್ಲಿದ್ದ ಪಡಿತರದಲ್ಲಿ ದಿನ ಕಳೆದಿದ್ದೇವೆ. ಇನ್ನು ಯಾವುದೇ ಆಹಾರ ಕೊಳ್ಳಲು ಸಾಧ್ಯವಿಲ್ಲ. ಕೈಯಲ್ಲಿ ಕಾಸಿಲ್ಲ. ಇಲ್ಲಿ ಬದುಕಲೂ ಆಗುತ್ತಿಲ್ಲ. ನಮ್ಮನ್ನು ನಮ್ಮ ಊರಿಗೆ ಕಳುಹಿಸಿಕೊಡಿ’’. ಇದು ಮೂಲತಃ ರಾಯಚೂರು ಜಿಲ್ಲೆಯವರಾದ ಸದ್ಯ ಮಂಗಳೂರಿನಲ್ಲಿರುವ ವಲಸೆ ಕಾರ್ಮಿಕರ ಅಳಲು.

ಮಂಗಳೂರು ನಗರದ ಹೊರವಲಯದ ಬೊಂಡಂತಿಲ ಗ್ರಾಮದ ಗುಡ್ಡ ಪ್ರದೇಶವಾದ ಕಟಂಜ ಸೈಟ್‌ನಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿರುವ ಇವರು ಮಂಗಳೂರು ನಗರದಲ್ಲಿ ಗಾರೆ ಸೇರಿದಂತೆ ಕೂಲಿ ಕೆಲಸವನ್ನು ಮಾಡುವವರು. ಲಾಕ್‌ಡೌನ್‌ನಿಂದಾಗಿ ಆತಂಕಕ್ಕೀಡಾಗಿರುವ ಇವರು ಇದೀಗ ತಮ್ಮ ತವರಿಗೆ ಹಿಂದಿರುಗಲು ಮುಂದಾಗಿದ್ದಾರೆ. ಹಾಗಾಗಿ ನಿನ್ನೆ ರಾತ್ರಿ 9 ಗಂಟೆಯ ಸುಮಾರಿಗೆ ಎರಡು ವರ್ಷ ಪ್ರಾಯದ ಮಗು ಸೇರಿದಂತೆ ಸುಮಾರು 10 ಮಂದಿ ಮಕ್ಕಳು, 8 ಮಂದಿ ಮಹಿಳೆಯರು ಸೇರಿ ಸುಮಾರು 30 ಮಂದಿ ತಮ್ಮ ಊರಿಗೆ ತೆರಳಲು ತಮ್ಮ ಟ್ರಾಕ್ಟರ್ ಹತ್ತಿ ಪ್ರಯಾಣ ಆರಂಭಿಸಿದ್ದರು. ಆದರೆ ಚೆಕ್‌ಪೋಸ್ಟ್‌ಗಳಲ್ಲಿ ಅವರನ್ನು ಪೊಲೀಸರು ಮುಂದೆ ಸಾಗಲು ಬಿಡದ ಕಾರಣ ಬೆಳಗ್ಗಿನವರೆಗೂ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರಿಗೆ ಮನವಿ ಮಾಡಿ ಕೊನೆಗೆ ತಮ್ಮ ಬಿಡಾರದತ್ತ ಹಿಂದಿರುಗಿದ್ದಾರೆ. ರಾಯಚೂರಿನ ಲಿಂಗಸೂರು ತಾಲೂಕಿನ ನಾಗಲಾಪುರ ಗ್ರಾಮದವರಾಗಿರುವ ಇವರು ಕಳೆದ ನಾಲ್ಕೈದು ವರ್ಷಗಳಿಂದ ಮಂಗಳೂರಿನ ಆಸುಪಾಸಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ.

ದಿನಬಳಕೆಯ ಸಾಮಗ್ರಿಗಳಿಗೆ ದರ ಹೆಚ್ಚಾಗಿದೆ, ನಮ್ಮಲ್ಲಿ ಕೊಳ್ಳಲು ದುಡ್ಡಿಲ್ಲ!

‘‘ಈಗಾಗಲೇ ಕೆಲಸ ಇಲ್ಲದೆ ಎರಡು ವಾರ ಆಗಿದೆ. ರುಚಿ ಗೋಲ್ಡ್ ಎಣ್ಣೆಗೆ ಲೀಟರ್‌ಗೆ 150 ರೂ., ಕಾಲು ಕೆಜಿ ಮೆಣಸಿಗೆ 110 ರೂ., ಈರುಳ್ಳಿಗೆ 60 ರೂ., ನಮ್ಮಲ್ಲಿ ಹಣ ಇಲ್ಲ. ಇಷ್ಟೊಂದು ದುಬಾರಿ ಹಣ ತೆತ್ತು ನಾವು ಬದುಕುವುದಾದರೂ ಹೇಗೆ? ಅದಕ್ಕೆ ನಾವು ನಮ್ಮ ಊರಿಗೆ ಹೋಗಬೇಕು. ನಮಗೆ ಸಹಾಯ ಮಾಡಿ’’ ಎಂದು ಈ ವಲಸೆ ಕಾರ್ಮಿಕರ ತಂಡದ ಸದಸ್ಯರಾದ ಸಂತೋಷ್ ಎಂಬವರು ಹೇಳಿದ್ದಾರೆ.

‘‘ನಿನ್ನೆ ರಾತ್ರಿ ನಮ್ಮ ಟ್ರಾಕ್ಟರ್ ಮೂಲಕ ಮಂಗಳೂರಿನಿಂದ ರಾಯಚೂರಿಗೆ ಹೊರಟಿದ್ದೆವು. ಮುಲ್ಕಿ ಚೆಕ್‌ಪೋಸ್ಟ್‌ನಲ್ಲಿ ನಮ್ಮನ್ನು ಪೊಲೀಸರು ತಡೆದರು. ಬಳಿಕ ಕಾರ್ಕಳ ಮಾರ್ಗವಾಗಿ ಹೊರಟೆವು. ಅಲ್ಲಿಯೂ ಮೂಡುಬಿದಿರೆಯಲ್ಲಿ ಪೊಲೀಸರು ಮುಂದೆ ಹೋಗಲು ಬಿಡಲಿಲ್ಲ. ಸಾಕಷ್ಟು ವಿನಂತಿಸಿಕೊಂಡೆವು. ಆದರೆ ಬಿಡಲಿಲ್ಲ. ಅವರಿಂದ ಲಾಠಿ ಏಟು ತಿನ್ನುವುದು ಬೇಡ ಎಂದು ಬೆಳಗ್ಗೆ ಬೊಂಡಂತಿಲಕ್ಕೆ ಹಿಂದಿರುಗಿದ್ದೇವೆ’’ ಎನ್ನುತ್ತಾರೆ ಸಂತೋಷ್.

‘‘ನಮ್ಮಲ್ಲಿದ್ದ ರೇಶನ್ ವಸ್ತುಗಳೆಲ್ಲವೂ ಖಾಲಿಯಾಗಿದೆ. ಎರಡು ಮೂರು ವರ್ಷ ಪ್ರಾಯದ ಮಕ್ಕಳಿದ್ದಾರೆ. ಊಟದ ವ್ಯವಸ್ಥೆ ಇಲ್ಲ. ನಾವು ಊರಿಗೆ ಹೋಗುವುದೊಂದೇ ದಾರಿ’’ ಎಂದು ಅವರು ಹೇಳಿದ್ದಾರೆ.

ಪೊಲೀಸರ ಮಾನವೀಯ ನಡೆ!

 ನಿನ್ನೆ ರಾತ್ರಿ ರಾಯಚೂರಿಗೆಂದು ಹೊರಟಿದ್ದ ಈ ವಲಸೆ ಕಾರ್ಮಿಕರನ್ನು ಮುಲ್ಕಿ ಚೆಕ್‌ಪೋಸ್ಟ್ ಬಳಿ ತಡೆದ ಪೊಲೀಸರು ಆ ಸಂದರ್ಭದಲ್ಲೂ ಮಾನವೀಯತೆ ಪ್ರದರ್ಶಿಸಿದ್ದಾರೆ. ‘‘ನಾವು ನಿನ್ನೆ ರಾತ್ರಿ ಊರಿಗೆ ಹೊರಟ ಸಂದರ್ಭ ಮುಲ್ಕಿಯಲ್ಲಿ ತಡೆದ ಪೊಲೀಸರು ನಮ್ಮನ್ನು ಹಿಂದಕ್ಕೆ ಕಳುಹಿಸಿದರು. ಆ ಸಂದರ್ಭ ಪೊಲೀಸರು ನಮಗೆ ಅವರಲ್ಲಿದ್ದ ಊಟ, ಸಾಂಬಾರ್, ಪಲ್ಯ ನೀಡಿದ್ದರು. ಅದನ್ನು ನಾವು ಇಂದು ಬೆಳಗ್ಗೆ ಹಂಚಿಕೊಂಡು ತಿಂದೆವು’’ ಎಂದು ಸಂತೋಷ್ ತಿಳಿಸಿದ್ದಾರೆ 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News