ಮಸೀದಿಗಳ ಧ್ವನಿವರ್ಧಕದಲ್ಲಿ ಮೊಳಗಿದ ಕೊರೋನ ಜಾಗೃತಿ ಸಂದೇಶ!

Update: 2020-03-30 08:31 GMT

ಉಡುಪಿ, ಮಾ.30: ರಾಜ್ಯ ವಕ್ಫ್ ಮಂಡಳಿಯ ನಿರ್ದೇಶನದಂತೆ ಉಡುಪಿ ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ದಿನಕ್ಕೆ ನಾಲ್ಕು ಬಾರಿ ಧ್ವನಿವರ್ಧಕದ ಮೂಲಕ ಕೊರೋನ ವೈರಸ್ ಕುರಿತು ಜಾಗೃತಿ ಸಂದೇಶವನ್ನು ಸಾರಲಾಗುತ್ತಿದೆ.

ಜಿಲ್ಲೆಯ ವಕ್ಫ್ ನೋಂದಾಯಿತ 140 ಸೇರಿದಂತೆ ಒಟ್ಟು 165 ಮಸೀದಿಗಳಲ್ಲಿ ಬೆಳಗ್ಗೆ 10 ಗಂಟೆ, ಸಂಜೆ ನಾಲ್ಕು ಮತ್ತು ಆರು ಗಂಟೆ ಹಾಗೂ ರಾತ್ರಿ 8 ಗಂಟೆಗೆ ಈ ಸಂದೇಶ ಸಾರುವ ಕಾರ್ಯವನ್ನು ಇಂದಿನಿಂದ ಮಾಡಲಾಗುತ್ತಿದೆ. ಕೆಲವು ಮಸೀದಿಗಳಲ್ಲಿ ಮಾ.29ರಿಂದಲೇ ಇದನ್ನು ಆರಂಭಿಸಲಾಗಿದೆ.

ವಕ್ಫ್ ಮಂಡಳಿಯಿಂದ ಒದಗಿಸಲಾಗಿರುವ ವೈರಸ್ ಹರಡುವಿಕೆಯ ಕುರಿತ ಮುಂಜಾಗ್ರತಾ ಕ್ರಮಗಳ ತ್ರಿಭಾಷಾ ಆಡಿಯೋವನ್ನು ಮಸೀದಿಯ ಧ್ವನಿ ವರ್ಧಕದ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ. ಕಾಪು, ಉಡುಪಿ, ನಾವುಂದ, ಕಾರ್ಕಳದ ಬಹುತೇಕ ಮಸೀದಿಗಳಲ್ಲಿ ಕನ್ನಡ ಭಾಷೆಯಲ್ಲಿ, ಗಂಗೊಳ್ಳಿ, ಕುಂದಾಪುರ, ಹೂಡೆ ಸೇರಿದಂತೆ ಉರ್ದು ಭಾಷಿಕರು ಹೆಚ್ಚಿರುವ ಕಡೆಗಳಲ್ಲಿ ಉರ್ದು ಭಾಷೆಯಲ್ಲಿ ಈ ಸಂದೇಶವನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ.

‘ಸಾರ್ವಜನಿಕರು ಮನೆಯಲ್ಲಿಯೇ ಇರಬೇಕು ಮತ್ತು ಮನೆಯಿಂದ ಹೊರಗಡೆ ಬರಬಾರದು. ರಸ್ತೆ ಬದಿಯಲ್ಲಿ ಓಡಾಟ ಮಾಡಬಾರದು ಸಾಮಾಜಿಕ ಅಂತರ ಕಾಪಾಡಬೇಕು. ಸರಕಾರದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ಮಸೀದಿಗೆ ತೆರಳದೆ ಮನೆಯಲ್ಲೇ ನಮಾಝ್ ನಿರ್ವಹಿಸಬೇಕು. ಕಾನೂನು ಉಲ್ಲಂಘನೆ ಮಾಡಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಯನ್ನು ಫಾರ್ವರ್ಡ್ ಮಾಡಬಾರದು ಮತ್ತು ಕಿವಿಗೊಡಬಾರದು’ ಎಂಬುದಾಗಿ ಈ ಸಂದೇಶದಲ್ಲಿ ತಿಳಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News