ಕೊರೋನ ದೇಣಿಗೆ ಸ್ವೀಕರಿಸಲು ಪಾರದರ್ಶಕತೆ ಇಲ್ಲದ ಹೊಸ ಟ್ರಸ್ಟ್ ಯಾಕೆ ?

Update: 2020-03-30 12:52 GMT

ಕೊರೋನ ಸೋಂಕಿನ ವಿರುದ್ಧದ ಹೋರಾಟಕ್ಕೆ ನಿಧಿ ಸಂಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿರುವ 'ಪಿಎಂ ಕೇರ್ಸ್ ಫಂಡ್'ನ ಪಾರದರ್ಶಕತೆ ಕುರಿತು ಪ್ರಶ್ನೆಗಳೆದ್ದಿವೆ. ಸಾಮಾನ್ಯವಾಗಿ ಇಂತಹ ವಿಕೋಪದ ಸಂದರ್ಭಗಳಲ್ಲಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣ ಹಾಕಿ ನೆರವಾಗಲು ಜನರಲ್ಲಿ ವಿನಂತಿಸಲಾಗುತ್ತದೆ. ತೀರಾ ಇತ್ತೀಚಿನ ಕೇರಳ ಪ್ರವಾಹದ ಸಂದರ್ಭದಲ್ಲೂ ಕೇಂದ್ರ ಸರಕಾರ ಪ್ರಧಾನಿ ಪರಿಹಾರ ನಿಧಿಯನ್ನೇ ಬಳಸಿತ್ತು. ಆದರೆ ಪ್ರಧಾನಿ ಮೋದಿ ಅವರು ಕೊರೋನ ಪರಿಹಾರಕ್ಕಾಗಿ ಹೊಸ ಟ್ರಸ್ಟ್ ಹಾಗೂ ನಿಧಿಯನ್ನು ಸ್ಥಾಪಿಸಿ ಅದಕ್ಕೆ ನೆರವಾಗುವಂತೆ ಜನರಲ್ಲಿ ಕೋರಿದ್ದರು. ಇದೀಗ ಆ ಹೊಸ ನಿಧಿಯ ಪಾರದರ್ಶಕತೆ ಕುರಿತು ಸಾಮಾಜಿಕ ಕಾರ್ಯಕರ್ತರು, ವಿಪಕ್ಷ ನಾಯಕರು ಪ್ರಶ್ನೆಗಳನ್ನು ಎತ್ತಿದ್ದಾರೆ.

'ಪಿಎಂ ಕೇರ್ಸ್ ಫಂಡ್'ನ ಟ್ರಸ್ಟ್ ನಲ್ಲಿರುವ ಟ್ರಸ್ಟೀಗಳ ಬಗ್ಗೆ ಹಾಗು ಆ ನಿಧಿಯ ಹಣ ಹೇಗೆ ಬಳಕೆಯಾಗುತ್ತದೆ ಎಂದು  ಸ್ಪಷ್ಟತೆಯಿಲ್ಲ. ಈ ಬಗ್ಗೆ ಯಾವುದೇ ಅಧಿಕೃತ ಗೆಝೆಟ್ ನೋಟಿಫಿಕೇಶನ್ ಕೂಡ ಬಂದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಆರೋಪಿಸಿದ್ದಾರೆ. ಈಗಾಗಲೇ ಇರುವ ಅಪ್ರಧಾನ ಮಂತ್ರಿ ಪರಿಹಾರ ನಿಧಿಯನ್ನೇ ಇದಕ್ಕೂ ಬಳಸದೆ ಹೊಸ ಟ್ರಸ್ಟ್ ಮಾಡುವ ಉದ್ದೇಶವೇನಿತ್ತು ಎಂದೂ ಅವರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಿರುವ ಆರ್ ಟಿಐ ಅರ್ಜಿಯಲ್ಲಿ ಈ ಹೊಸ ಟ್ರಸ್ಟ್ ನ ರಿಜಿಸ್ಟ್ರೇಷನ್ ಪ್ರತಿ, ಟ್ರಸ್ಟಿಗಳ ಪಟ್ಟಿ ಹಾಗು ಟ್ರಸ್ಟಿಗಳ ನೇಮಕಕ್ಕೆ ಅನುಸರಿಸಲಾದ ಪ್ರಕ್ರಿಯೆ ಕುರಿತು ವಿವರ ಕೇಳಿದ್ದಾರೆ.

ಈ ಹೊಸ ಫಂಡ್ ಗೆ ನೀಡುವ ದೇಣಿಗೆ ಕಂಪೆನೀಸ್ ಲಾ ಅಡಿಯಲ್ಲಿ ಸಮಾಜ ಕಲ್ಯಾಣಕ್ಕೆ ಮಾಡಿದ ಖರ್ಚು ಎಂದು ಪರಿಗಣಿಸಲಾಗುತ್ತದೆ ಎಂದು ಸರಕಾರ ಹೇಳಿತ್ತು. ಪ್ರಧಾನಿ ಮನವಿ ಮೇರೆಗೆ ಈಗಾಗಲೇ ಹಲವು ಗಣ್ಯರು, ಕಂಪೆನಿಗಳು ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ್ದಾರೆ.

ಈ ಹೊಸ ಟ್ರಸ್ಟ್ ಹಾಗು ನಿಧಿ ಕುರಿತು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹೊಸ ಟ್ರಸ್ಟ್ ನ ನೀತಿ ನಿಯಮಗಳು ಹಾಗು ಖರ್ಚು ಪಾರದರ್ಶಕವಾಗಿಲ್ಲ. ಈಗಾಗಲೇ ಇದ್ದ ಪ್ರಧಾನಿ ಪರಿಹಾರ ನಿಧಿಗೆ ಬೇಕಿದ್ದರೆ ಪ್ರಧಾನಿ ಇಚ್ಛೆಯಂತೆ  ಹೊಸ ಹೆಸರು ಇಡಬಹುದಿತ್ತು. ಈ ತೀರಾ ಅಸಾಮಾನ್ಯ ಕ್ರಮ ಕುರಿತು ಪ್ರಧಾನಿ ಕಾರ್ಯಾಲಯ ದೇಶಕ್ಕೆ ವಿವರಣೆ ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News