ಮನಪಾದಿಂದ ಮನೆ ಬಾಗಿಲಿಗೆ ದಿನ ಬಳಕೆ ಸಾಮಗ್ರಿ ಪೂರೈಕೆಗೆ ಕ್ರಮ

Update: 2020-03-30 12:51 GMT
ಶಾನಾಡಿ ಅಜಿತ್ ಕುಮಾರ್ ಹೆಗ್ಡೆ

ಮಂಗಳೂರು, ಮಾ.30: ದ.ಕ. ಜಿಲ್ಲೆಯಾದ್ಯಂತ ಸಂಪೂರ್ಣ ಬಂದ್ ಇರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಪೊರೇಟರ್‌ಗಳ ಮೇಲುಸ್ತುವಾರಿಯಲ್ಲಿ ದಿನಬಳಕೆಯ ಸಾಮಗ್ರಿಗಳನ್ನು ಪೂರೈಸಲು ಕ್ರಮ ವಹಿಸಲಾಗಿದೆ.

ಮಾ. 31ರಿಂದ ಈ ವ್ಯವಸ್ಥೆ ಆರಂಭಗೊಳ್ಳಲಿದೆ. ಪಾಲಿಕೆ ವ್ಯಾಪ್ತಿಯ ಜಿನಸಿ ಅಂಗಡಿಗಳನ್ನು ಈಗಾಗಲೇ ಗುರುತಿಸಲಾಗಿದೆ. ವಾರ್ಡ್‌ವಾರು ಅಂಗಡಿಗಳ ಹೆಸರು, ಮೊಬೈಲ್ ನಂಬರ್ ಪ್ರಕಟಿಸಲಾಗಿದೆ. ಕಾರ್ಪೊರೇಟರ್‌ಗಳಿಗೆ ಅವರ ವಾರ್ಡ್‌ನ ಪಟ್ಟಿ ಒದಗಿಸಲಾಗಿದೆ. ಬೇಡಿಕೆಯ ಮೇರೆಗೆ ಅವರು ಜಿನಸು ಪೂರೈಸಲು ಕ್ರಮ ವಹಿಸಲಿದ್ದಾರೆ ಎಂದು ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.

ಇದಲ್ಲದೆ, ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಮೂಡಾ ಆಯುಕ್ತರಿಗೆ ರೇಶನ್ ಕಿಟ್‌ಗಳನ್ನು ಸಿದ್ಧಗೊಳಿಸಲು ತಿಳಿಸಲಾಗಿದೆ. ಅದರಂತೆ, ಅಕ್ಕಿ, ಬೇಳೆ, ಸಕ್ಕರೆ, ಚಹಾಪುಡಿ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ 5000 ಕಿಟ್‌ಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಯಾವ ರೀತಿಯಲ್ಲಿ ವಿತರಣೆ ಮಾಡಬೇಕೆಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

‘‘ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾದ ಅಂಗಡಿಗಳಿಗೆ ಹೋಂ ಡೆಲಿವರಿಗೆ ಪಾಸ್‌ಗಳನ್ನು ನೀಡಲಾಗಿದೆ. ಜನರು ತಮಗೆ ಬೇಕಾದ ಅಂಗಡಿಗಳಿಂದ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಹೋಂ ಡೆಲಿವರಿ ಪಡೆಯಬಹುದು.  ಮಂಗಳವಾರ ಬೆಳಗ್ಗೆಯಿಂದ ಸಂಜೆ 3ಗಂಟೆಯವರೆಗೆ ಅಂಗಡಿಗಳಲ್ಲಿ ದಿನ ಬಳಕೆಯ ಸಾಮಗ್ರಿಗಳನ್ನು ಖರೀದಿಸಲು ಅವಕಾಶವಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಪಾಲಿಕೆಯಲ್ಲಿ ಸದ್ಯ ಕೊರೋನ ನಿಯಂತ್ರಣಕ್ಕಾಗಿ ಪಾಲಿಕೆ ಟಾಸ್ಕ್‌ಪೋರ್ಸ್‌ನಲ್ಲಿ 80 ಮಂದಿ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಕೆಲ ಸಿಬ್ಬಂದಿಗೆ ಬರಲು ಅಸಾಧ್ಯವಾಗುತ್ತಿದೆ. ಮತ್ತೆ ಕೆಲವರು ಬಂದು ಎಲ್ಲಾ ರೀತಿಯಲ್ಲಿ ಪ್ರಾಮಾಣಿಕವಾಗಿ ಸಹಕಾರ ನೀಡುತ್ತಿದ್ದಾರೆ. ಈಗಾಗಲೇ ನೀರು ಪೂರೈಕೆ, ಯುಜಿಡಿ, ವಿದ್ಯುತ್ ನಿರ್ವಹಣೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಆತುರ ಮಾಡಿ ಅಂಗಡಿಗಳಲ್ಲಿ ರಶ್ ಮಾಡದಿರಿ

ಮಾ. 31ರಂದು ಬೆಳಗ್ಗೆ 6 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ದಿನ ಬಳಕೆಯ ಸಾಮಗ್ರಿಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ದಿನಬಳಕೆಯ ಅಗತ್ಯ ವಸ್ತುಗಳು ಬೇಕಿದ್ದವರು ಒಬ್ಬರು ಮಾತ್ರವೇ ಅಂಗಡಿಗಳಿಗೆ ಹೋಗಿ ಖರೀದಿಸಿ. ಯಾವುದೇ ಕಾರಣಕ್ಕೆ ಆತುರ ಬೇಡ. ಅಂಗಡಿಗಳಲ್ಲಿ ನೂಕು ನುಗ್ಗಲು ಆಗದಂತೆ ಗಮನ ಹರಿಸಿ. ಮಾತ್ರವಲ್ಲದೆ, ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಲಾಕ್‌ಡೌನ್ ಉದ್ದೇಶವನ್ನು ಅರಿತುಕೊಂಡು ಸಹಕರಿಸಬೇಕು’’ ಎಂದು ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ನಗರ ಜನತೆಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News