ಉಡುಪಿ: ಮೂವರು ಶಂಕಿತ ಕೊರೋನ ಪರೀಕ್ಷೆಗೆ

Update: 2020-03-30 14:27 GMT

ಉಡುಪಿ, ಮಾ. 30: ಪ್ರವಾಸದಿಂದ ಮರಳಿದ ಹಿನ್ನೆಲೆಯನ್ನು ಹೊಂದಿರುವ ಮೂವರು ಶಂಕಿತ ಕೊರೋನ ವೈರಸ್ ಸೋಂಕಿನ ಪರೀಕ್ಷೆಗಾಗಿ ಸೋಮವಾರ ಉಡುಪಿಯ ವಿವಿಧ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ದಾಖಲಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ದಾಖಲಾದ ಮೂವರು ಪುರುಷರಲ್ಲಿ ಒಬ್ಬರು ಮಣಿಪಾಲದ ಕೆಎಂಸಿ ಆಸ್ಪತ್ರೆಗೂ, ಉಳಿದಿಬ್ಬರು ಉಡುಪಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೂ ದಾಖಲಾಗಿ ದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 140 ಮಂದಿಯ ಗಂಟಲು ದ್ರವದ ಮಾದರಿಯನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯಲಾ ಗಿದ್ದು, ಇವರಲ್ಲಿ ಇಂದಿನವರೆಗೆ ಒಟ್ಟು 126 ಮಂದಿಯ ಫಲಿತಾಂಶ ಬಂದಿದೆ. 123 ಮಂದಿಯ ವರದಿ ಸೋಂಕಿಗೆ ನೆಗೆಟೀವ್ ಆಗಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿದೆ. ಈ ಮೂವರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳು ತಿದ್ದಾರೆ ಎಂದು ಡಿಎಚ್‌ಒ ಹೇಳಿದ್ದಾರೆ.

ಇನ್ನು 14 ಮಂದಿಯ ಫಲಿತಾಂಶ ಬರಬೇಕಾಗಿದೆ. ಇದರಲ್ಲಿ ಇಂದು ಸೇರ್ಪಡೆಗೊಂಡ ಮೂವರ ವರದಿಯೂ ಸೇರಿದೆ. ರವಿವಾರ ಸೋಂಕು ಪತ್ತೆಯಾದ 29ರ ಹರೆಯದ ಯುವಕನ ಜೊತೆ ಕೇರಳಕ್ಕೆ ತೆರಳಿದ್ದ ಆತನ ಜೊತೆಗಾರರಾದ 30 ಮಂದಿ ಇನ್ನೂ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್‌ ನಲ್ಲಿದ್ದು, ಇವರಲ್ಲಿ ಇಬ್ಬರಲ್ಲಿ ಕೊರೋನದ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಂಡಿದ್ದರೂ, ಅವರ ಗಂಟಲು ದ್ರವ ಮಾದರಿ ಪರೀಕ್ಷೆ ನೆಗೆಟಿವ್ ಆಗಿತ್ತು ಎಂದು ಮೂಲವೊಂದು ತಿಳಿಸಿದೆ.

ಜಿಲ್ಲೆಯಲ್ಲಿ ಇಂದುವರೆಗೆ ಒಟ್ಟು 2,309 ಮಂದಿಯನ್ನು ತಪಾಸಣೆಗೊಳ ಪಡಿಸಿದ್ದು, ಸೋಮವಾರ ಇನ್ನೂ 314 ಮಂದಿ ಮನೆ ನಿಗಾಕ್ಕೆ ನೋಂದಣಿ ಗೊಂಡಿದ್ದಾರೆ. ಈವರೆಗೆ 1072 ಮಂದಿ 14 ದಿನಗಳ ಮನೆ ನಿಗಾ ಪೂರೈಸಿದ್ದರೆ, 127 ಮಂದಿ 28 ದಿನಗಳ ಮನೆ ನಿಗಾ ಪೂರೈಸಿದ್ದಾರೆ. 26 ಮಂದಿ ಆಸ್ಪತ್ರೆಯ ಕ್ವಾರಂಟೇನ್‌ಗೆ ದಾಖಲಾಗಿದ್ದಾರೆ ಎಂದವರು ವಿವರಿಸಿದರು.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1056 ಮಂದಿ ಮನೆ ಹಾಗೂ ಆಸ್ಪತ್ರೆಗಳಲ್ಲಿ ನಿಗಾದಲ್ಲಿ ಇದ್ದಾರೆ ಎಂದು ಡಾ.ಸೂಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News